ಧಾರವಾಡ: ತಾಯಿ ಎದೆ ಹಾಲು ಕೊರತೆ ನೀಗಿಸುವ ಅಮೃತ ಬ್ಯಾಂಕ್‌

ತಾಯಿಯ ಎದೆ ಹಾಲಿನ ಕೊರತೆ ಎದುರಿಸುತ್ತಿರುವ ನವಜಾತ ಶಿಶುಗಳಿಗಾಗಿ ಇಲ್ಲಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಆರಂಭಿಸಲಾಗಿದ್ದ ‘ಅಮೃತ ಎಸ್‌ಡಿಎಂ-ರೋಟರಿ ಎದೆ ಹಾಲಿನ ಬ್ಯಾಂಕ್‌’ ಸಾರ್ಥಕ ಒಂದು ವರ್ಷ ಅವಧಿ ಪೂರೈಸಿದೆ. ಈ ಅವಧಿಯಲ್ಲಿ ನೂರಾರು ತಾಯಂದಿರುಗಳಿಂದ ಎದೆ ಹಾಲು ಸಂಗ್ರಹಿಸಿ, ನವಜಾತ ಶಿಶುಗಳಿಗೆ ನೀಡಲಾಗಿದೆ.

Amrita Bank to solve the shortage of mother's breast milk at dharwad district rav

ಬಸವರಾಜ ಹಿರೇಮಠ

ಧಾರವಾಡ (ಆ.4) :  ತಾಯಿಯ ಎದೆ ಹಾಲಿನ ಕೊರತೆ ಎದುರಿಸುತ್ತಿರುವ ನವಜಾತ ಶಿಶುಗಳಿಗಾಗಿ ಇಲ್ಲಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ಆರಂಭಿಸಲಾಗಿದ್ದ ‘ಅಮೃತ ಎಸ್‌ಡಿಎಂ-ರೋಟರಿ ಎದೆ ಹಾಲಿನ ಬ್ಯಾಂಕ್‌’ ಸಾರ್ಥಕ ಒಂದು ವರ್ಷ ಅವಧಿ ಪೂರೈಸಿದೆ. ಈ ಅವಧಿಯಲ್ಲಿ ನೂರಾರು ತಾಯಂದಿರುಗಳಿಂದ ಎದೆ ಹಾಲು ಸಂಗ್ರಹಿಸಿ, ನವಜಾತ ಶಿಶುಗಳಿಗೆ ನೀಡಲಾಗಿದೆ.

ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ. ನವಜಾತ ಶಿಶುಗಳಿಗೆ ಮೊದಲ ಆಹಾರ ತಾಯಿಯ ಎದೆ ಹಾಲು.ಆದರೆ, ಅದೆಷ್ಟೋ ಮಕ್ಕಳು ತಾಯಿಯ ಎದೆ ಹಾಲಿನ ಕೊರೆತೆ ಎದುರಿಸುತ್ತಿದ್ದು,ಅದನ್ನು ನೀಗಿಸುವ ಪ್ರಯತ್ನವಾಗಿ ಕಳೆದ ಜೂ.29ರಂದು ಆರಂಭವಾಗಿದೆ. ಹೆಚ್ಚುವರಿ ಎದೆ ಹಾಲು ಹೊಂದಿರುವ ತಾಯಂದಿರಿಂದ ಹಾಲು ಪಡೆದು, ಕೊರತೆ ಇರುವ ನವಜಾತ ಶಿಶುಗಳಿಗೆ ಉಚಿತವಾಗಿ ಹಾಲು ಒದಗಿಸುವ ಮೂಲಕ ಪುಣ್ಯದ ಕಾರ್ಯ ಮಾಡಿದೆ.

ಅಮೃತ ಸಮಾನವಾಗಿರುವ ತಾಯಿಯ ಎದೆಹಾಲಿನಲ್ಲೂ ವಿಷವಿದ್ಯಾ?

ಕಳೆದ ವರ್ಷ ಎಸ್‌ಡಿಎಂ ಆಸ್ಪತ್ರೆಯಲ್ಲಿ ಸಾವಿರ ಚದರ ಅಡಿ ಜಾಗದಲ್ಲಿ ‘ರೋಟರಿ ಕ್ಲಬ್‌ ಸೆವೆನ್‌ ಹಿಲ್ಸ್‌’ ಅಧ್ಯಕ್ಷೆಯಾಗಿದ್ದ ಡಾ.ಪಲ್ಲವಿ ದೇಶಪಾಂಡೆ ಪ್ರಯತ್ನದಿಂದ ‘ರೋಟರಿ ಇಂಟರ್‌ ನ್ಯಾಷನಲ್‌ ಗ್ಲೋಬಲ್‌ ಗ್ರ್ಯಾಂಟ್‌’ ಅಡಿಯಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ.

1 ರಿಂದ 7ರ ವರೆಗೆ ಸಪ್ತಾಹ:

ನಗರ ಪ್ರದೇಶದ ಹಾಗೂ ಹೆಚ್ಚು ವಿದ್ಯಾವಂತ ಮಹಿಳೆಯರು ತಮ್ಮ ದೇಹ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ತಮ್ಮ ಮಗುವಿಗೆ ಹಾಲುಣಿಸುವುದನ್ನು ಬಿಟ್ಟರೆ, ಗ್ರಾಮೀಣ ಪ್ರದೇಶದಲ್ಲಿನ ತಾಯಂದಿರಿಗೆ ಆರೋಗ್ಯ ಕಾರಣಗಳಿಂದ ಎದೆ ಹಾಲಿನ ಉತ್ಪಾದನೆ ಕೊರತೆಯಿಂದ ಹಾಲುಣಿಸುವುದು ಸಾಧ್ಯವಾಗುವುದಿಲ್ಲ.

‘ಮಗು ಹುಟ್ಟಿದ ದಿನದಿಂದ ಆರು ತಿಂಗಳವರೆಗೆ ಎದೆ ಹಾಲುಣಿಸುವುದರಿಂದ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಎಷ್ಟೋ ಮಹಿಳೆಯರು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಆ.1 ರಿಂದ 7ರ ವರೆಗೆ ಎದೆ ಹಾಲುಣಿಸುವ ಸಪ್ತಾಹ ಆಚರಿಸಲು ಕರೆ ನೀಡಿದೆ’ ಎಂದು ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ್‌ ಕುಲಕರ್ಣಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ರೋಗ ನಿರೋಧಕ:

ತಾಯಿಯು ಮಗುವಿಗೆ ಹಾಲುಣಿಸುವಾಗ ಒಂದು ಕಡೆ ಆಕೆ ಮಾತೃತ್ವದ ಸವಿ ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ತನ್ನ ಮಗುವಿಗೆ ರೋಗ ನಿರೋಧಕ ಶಕ್ತಿ ಕೊಡುತ್ತಿರುತ್ತಾಳೆ. ಇದೇ ಕಾರಣಕ್ಕೆ ಪೂರ್ವಜರು ಎದೆ ಹಾಲಿಗೆ ವಿಶಿಷ್ಟಸ್ಥಾನ ನೀಡಿದ್ದರು. ಮಗು ಜನಿಸಿದ ಅರ್ಧ ಗಂಟೆಯಲ್ಲಿಯೇ ಹಾಲುಣಿಸುವಂತೆ ತಾಯಂದಿರಿಗೆ ವೈದ್ಯರು ಸಲಹೆ ನೀಡುತ್ತಾರೆ. ಆರು ತಿಂಗಳ ನಂತರ ಬೇರೆ ಆಹಾರದ ಜತೆಗೆ ಎರಡು ವರ್ಷಗಳವರೆಗೆ ಮಗುವಿಗೆ ಹಾಲು ಕುಡಿಸಬೇಕು. ಮಕ್ಕಳು ಎದೆ ಹಾಲನ್ನು ಸೇವಿಸುವುದರಿಂದ ಮಧುಮೇಹ, ಸ್ಥೂಲ ಕಾಯತೆ, ಬಾಲ್ಯದ ಕ್ಯಾನ್ಸರ್‌, ಎದೆ ಸೋಂಕುಗಳಂಥ ರೋಗಗಳಿಗೆ ತುತ್ತಾಗುವುದಿಲ್ಲ ಎಂದು ಡಾ. ವಿಜಯಕುಮಾರ ತಿಳಿಸಿದರು.

620 ತಾಯಂದಿರ ಹಾಲು ಸಂಗ್ರಹ..

ಎದೆ ಹಾಲಿನ ಬಗ್ಗೆ ನಮ್ಮಲ್ಲಿ ಹೆಚ್ಚಿನ ಜಾಗೃತಿ ಇಲ್ಲ. ಹಿಂದಿನ ದಿನಗಳಲ್ಲಿ ನಮ್ಮ ಪೂರ್ವಿಕರು ಇದರ ಮಹತ್ವ ಅರಿತಿದ್ದರು. ಆದರೆ ಆಧುನಿಕ ದಿನಗಳಲ್ಲಿ ಹೆಚ್ಚು ಓದಿಕೊಂಡಿರುವ ಮಹಿಳೆಯರೇ ಎದೆ ಹಾಲನ್ನು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಒಂದು ಕಡೆಯಾದರೆ, ಎಷ್ಟೋ ತಾಯಂದಿರಲ್ಲಿ ಹಾಲಿನ ಉತ್ಪಾದನೆಯ ಪ್ರಮಾಣವೇ ಕಡಿಮೆ.ಹೀಗಾಗಿ ಅವರ ಮಗುವಿಗೆ ಎದೆ ಹಾಲು ಸಿಗೋದೇ ಇಲ್ಲ. ಇಂಥದ್ದನ್ನು ನೋಡಿಯೇ ನಾವು ಎದೆ ಹಾಲಿನ ಬ್ಯಾಂಕ್‌ ಆರಂಭಿಸಿದ್ದೇವು. ಒಂದು ವರ್ಷದ ಅವಧಿಯಲ್ಲಿ 620ಕ್ಕೂ ಹೆಚ್ಚು ತಾಯಂದಿರು ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ. 429ಕ್ಕೂ ಮಕ್ಕಳು ಇದರ ಪ್ರಯೋಜನ ಪಡೆದಿವೆ. ನಿಜಕ್ಕೂ ನಮಗೆ ಇದೊಂದು ಸಂತಸದ ವಿಚಾರ ಎಂದು ರೋಟರಿ ಕ್ಲಬ್‌ ಸವೆನ್‌ ಹಿಲ್ಸ್‌ ಮಾಜಿ ಅಧ್ಯಕ್ಷೆ ಡಾ. ಪಲ್ಲವಿ ದೇಶಪಾಂಡೆ ತಿಳಿಸಿದ್ದಾರೆ.

ಈಕೆಯ ಎದೆಹಾಲು ಬತ್ತೋದೆ ಇಲ್ಲ, 10350 ಲೀ. ಬ್ರೆಸ್ಟ್‌ಮಿಲ್ಕ್‌ ದಾನ ಮಾಡಿ ಮಹಿಳೆಯ ಗಿನ್ನಿಸ್ ದಾಖಲೆ

ಸಾಮಾನ್ಯವಾಗಿ ಹೆರಿಗೆಯಾದಾಗ ತಾಯಿ ಮರಣ ಹೊಂದಿದರೆ ಅಥವಾ ಹಾಲಿನ ಕೊರತೆ ಇದ್ದರೆ ಅದೆಷ್ಟೋ ಶಿಶುಗಳಿಗೆ ಎದೆ ಹಾಲು ಸಿಗದೇ ಪರದಾಡಬೇಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬಾಟಲ್‌ ಹಾಲು ಮಕ್ಕಳಿಗೆ ಕೊಟ್ಟರೂ ತಾಯಿ ಹಾಲಿನಷ್ಟುಪೌಷ್ಟಿಕಾಂಶ ಇರುವುದಿಲ್ಲ. ನಮ್ಮಲ್ಲಿಯ ಎದೆ ಹಾಲಿನ ಬ್ಯಾಂಕ್‌ನಲ್ಲಿ ಹಾಲು ಸಂಗ್ರಹಿಸಿಟ್ಟು ಉಚಿತವಾಗಿ ಅಗತ್ಯ ಮಕ್ಕಳಿಗೆ ನೀಡುತ್ತಿದ್ದೇವೆ. ತಾಯಂದಿರು ಹೆಚ್ಚುವರಿ ಹಾಲನ್ನು ದಾನ ಮಾಡುವ ಮೂಲಕ ಅಗತ್ಯವಿರುವ ಮಕ್ಕಳ ಜೀವ ಉಳಿಸಬೇಕು.

ಡಾ.ವಿಜಯಕುಮಾರ, ಚಿಕ್ಕಮಕ್ಕಳ ವೈದ್ಯರು

Latest Videos
Follow Us:
Download App:
  • android
  • ios