ನವದೆಹಲಿ[ಜ.01]: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ತಮಗೂ ಮತ್ತು ಬೀದರ್‌ ಉತ್ತರದ ಶಾಸಕ, ಯುವಜನ ಮತ್ತು ಕ್ರೀಡಾ ಖಾತೆಯ ನೂತನ ಸಚಿವ ರಹೀಂ ಖಾನ್‌ ಅವರಿಗೂ ಫೋನ್‌ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹಾರ ಸರಬರಾಜು ಸಚಿವ ಜಮೀರ್‌ ಆಹ್ಮದ್‌ ಖಾನ್‌ ಹೇಳುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಕಾಂಗ್ರೆಸ್‌ ಪಕ್ಷದ ನಾಯಕರು ಸಚಿವ ಸಂಪುಟ ಪುನಾರಚನೆ ಕಸರತ್ತಿಗೆ ಇತ್ತೀಚೆಗೆ ದೆಹಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಶಾಸಕರು ತಮ್ಮಲ್ಲಿನ ಇನ್ನೊಬ್ಬರನ್ನು ಮಂತ್ರಿ ಮಾಡುವಂತೆ ಸಿದ್ದರಾಮಯ್ಯ ಅವರಲ್ಲಿ ಅವರ ಕೊಠಡಿಗೆ ಹೋಗಿ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಸಿದ್ದರಾಮಯ್ಯ ಸಚಿವ ಸಂಪುಟದ ಬಗ್ಗೆ ಚರ್ಚಿಸಲು ಹೊರಟು ಲಿಫ್ಟ್‌ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ತಮಗೆ ಅಮಿತ್‌ ಶಾ ಅವರಿಂದ ಫೋನ್‌ ಬಂದಿರುವುದನ್ನು ಜಮೀರ್‌ ಅವರು ಸಿದ್ದರಾಮಯ್ಯ ಅವರಿಗೆ ಹೇಳುತ್ತಿರುವುದು ಈ ವಿಡಿಯೋದಲ್ಲಿದೆ.

ಲಿಫ್ಟ್‌ನ ಬಳಿ ಬಂದ ಸಿದ್ದರಾಮಯ್ಯ ಅವರು ‘ಏನು ರಹೀಂ ಖಾನ್‌?’ ಎಂದು ಪ್ರಶ್ನಿಸುತ್ತಾರೆ. ಆಗ ಸಿದ್ದರಾಮಯ್ಯ ಅವರ ಹಿಂದೆ ನಿಂತಿದ್ದ ಜಮೀರ್‌, ‘ರಹೀಂ ಖಾನ್‌ ಅನ್ನಬೇಡಿ ಸರ್‌ ರಹೀಂ ಸಾಬ್‌ ಅನ್ನಬೇಕು ದಯಮಾಡಿ’ ಎಂದು ಹೇಳುತ್ತಾರೆ. ಆ ಬಳಿಕ ವಿವರಣೆ ನೀಡಲು ಹೊರಟ ಜಮೀರ್‌, ‘ನೋಡಿ ಸರ್‌ ಅವನು, ಎಷ್ಟುದಡ್ಡನಿದ್ದಾನೆ. ಅವನು ಅಮಿತ್‌ ಶಾ ನಮಗೆಲ್ಲರಿಗೂ ಫೋನ್‌ ಮಾಡಿದ್ದಾನೆ. ನನಗೂ ಮಾಡಿದ್ದಾನೆ, ಇವನಿಗೂ ಮಾಡಿದ್ದಾನೆ. ರಹೀಂ ಸಾಬ್‌ ಹೇಗಿದ್ದೀರಾ ಎಂದು ಕೇಳಿ ಬಿಟ್ಟವ್ನೆ. ಇವ ಸುಮ್ಕಿರ್‌ ಬೇಡ್ವಾ ಬಾಯಿ ಮುಚ್ಚಿಕೊಂಡಿ. ಇವ ಅಮಿತ್‌ ಶಾ ಫೋನ್‌ ಕಿಯಾ ಥಾ ಮೇರೆ ಕೋ ಎಂದು ಎಲ್ಲರಿಗೂ ಹೇಳುತ್ತಿದ್ದ, ಅಯ್ಯೋ’ ಎಂದು ಜಮೀರ್‌ ಖಾನ್‌ ನಗುತ್ತಾ ಹೇಳುತ್ತಿರುವ ದೃಶ್ಯ ಈ ತುಣುಕಿನಲ್ಲಿದೆ. ಅಷ್ಟರಲ್ಲಿ ಲಿಫ್ಟ್‌ ಬರುತ್ತದೆ, ಸಿದ್ದರಾಮಯ್ಯ, ಜಮೀರ್‌, ರಹೀಂ ಖಾನ್‌ ಲಿಫ್ಟ್‌ ಏರಿ ಕೆಳಗಿಳಿಯುತ್ತಾರೆ.