ವರದಿ : ಸೋಮರಡ್ಡಿ ಅಳವಂಡಿ

  ಕೊಪ್ಪಳ (ಏ.09):  ಮಾರ್ಚ್ ಆರಂಭದಲ್ಲಷ್ಟೇ ಏರಿಕೆಯಾಗಿದ್ದ ರಸಗೊಬ್ಬರ ಬೆಲೆ ಒಂದು ತಿಂಗಳಲ್ಲಿ ಮತ್ತೆ ಭಾರೀ ಏರಿಕೆ ಕಂಡಿದೆ. ಏ.1ರಿಂದ ಒಂದು ಚೀಲ ರಸಗೊಬ್ಬರಕ್ಕೆ  700 ರು. ಅಧಿಕ ಬೆಲೆ ಹೆಚ್ಚಳವಾಗಿದ್ದು, ಈ ಬೆಲೆಯನ್ನು ಕಂಡು ರೈತರು ಮಾತ್ರವಲ್ಲದೆ ವ್ಯಾಪಾರಸ್ಥರೂ ತಬ್ಬಿಬ್ಬಾಗಿದ್ದಾರೆ. ಕಚ್ಚಾವಸ್ತುಗಳ ವಿಪರೀತ ಬೆಲೆಯೇರಿಕೆಯೇ ಈ ದಿಢೀರ್‌ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ರಸಗೊಬ್ಬರ ಕಂಪನಿಗಳು ಏ.1ರಿಂದಲೇ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ. ಈ ಆದೇಶ ಬೆಳಕಿಗೆ ಬಂದಿದ್ದು ಬುಧವಾರ ಸಂಜೆಯ ವೇಳೆಗೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಇನ್ನಷ್ಟೇ ಆಗಬೇಕಾಗಿದ್ದು, ಕೃಷಿ ಸಮುದಾಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ಯಾವುದಕ್ಕೆ ಎಷ್ಟು?:

ಪ್ರತಿ 50 ಕೆ.ಜಿ. ಚೀಲಕ್ಕೆ  1200 ರು. ಇದ್ದ ಡಿಎಪಿ  1900  ರು. ಆಗಿದೆ. ಎನ್‌ಪಿಕೆ 10.26.26 ರಸಗೊಬ್ಬರ  1175  ರು. ಇದ್ದಿದ್ದು ಪರಿಷ್ಕೃತ ಬೆಲೆ  1775  ರು. ಆಗಿದೆ  12.32.16  ರಸಗೊಬ್ಬರ ದರ 1185  ರು. ಇದ್ದಿದ್ದು  1800  ರು. ಆಗಿದೆ. 20.20.20 ರಸಗೊಬ್ಬರ  925 ಇದ್ದಿದ್ದು  1350  ರು.ಕ್ಕೆ ಹೆಚ್ಚಳವಾಗಿದೆ. ಇದು ಇಫ್ಕೋ ಕಂಪನಿಯ ಗೊಬ್ಬರದ ದರ ಏರಿಕೆಯ ಪ್ರಮಾಣವಾಗಿದ್ದು, ಮಂಗಳೂರಿನ ಎಂಸಿಎಫ್‌ ಕಂಪನಿಯೂ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ ಎಂಸಿಎಫ್‌ ಕಂಪನಿ ಕಳೆದ ಮಾಚ್‌ರ್‍ ತಿಂಗಳಲ್ಲಿ ಬೆಲೆ ಏರಿಸಿ ಆದೇಶ ಹೊರಡಿಸಿತ್ತು. ಈಗ ಏಕಾಏಕಿ ಮತ್ತೆ ಹೆಚ್ಚಿಸಿದೆ.

ರೈತರಿಗೆ ದೊಡ್ಡ ಶಾಕ್‌:

ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವ ಉದಾಹರಣೆ ಇದುವರೆಗೂ ಇಲ್ಲವೇ ಇಲ್ಲ. ಅಬ್ಬಬ್ಬಾ ಎಂದರೆ ಚೀಲಕ್ಕೆ 50ರಿಂದ  100 ರು.ಗೆ ಹೆಚ್ಚಳ ಮಾಡುತ್ತಿದ್ದರು. ಇದೇ ಮೊದಲ ಬಾರಿ ಶೇ.40ಕ್ಕೂ ಅಧಿಕ ಹೆಚ್ಚಳ ಮಾಡಲಾಗಿದೆ.

ಜೀವ ವೈವಿಧ್ಯದ ಸಂರಕ್ಷಣೆಗಾಗಿ ತಮ್ಮದೇ ಕೊಡುಗೆ ನೀಡುತ್ತಿರುವ ಹೆಮ್ಮೆಯ ರೈತ .

ಇನ್ನೂ ಹೆಚ್ಚಳವಾಗಲಿದೆ:

ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ವೇಳೆ ಅಂದರೆ ಜೂನ್‌ನಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಇಷ್ಟುದೊಡ್ಡ ಮೊತ್ತ ಏಕಾಏಕಿ ಏರಿಕೆ ಮಾಡಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಮಾಚ್‌ರ್‍, ಏಪ್ರಿಲ್‌ಗಳಲ್ಲಿ ಏರಿಸಲಾಗುತ್ತಿದೆ. ಈಗ ರೈತರು ಗೊಬ್ಬರ ಖರೀದಿ ಮಾಡುವ ಸಮಯವಲ್ಲವಾದ್ದರಿಂದ ಅವರಿಗೆ ನೇರವಾಗಿ ಬಿಸಿ ತಟ್ಟುವುದಿಲ್ಲವಾದ್ದರಿಂದ ರೈತರು ಅಷ್ಟಾಗಿ ಆಕ್ರೋಶಗೊಳ್ಳುವುದಿಲ್ಲ ಎಂದೇ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಜೂನ್‌ ವೇಳೆಗೆ ಇನ್ನಷ್ಟುಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬೆಲೆ ಏರಿಕೆಗೆ ಕಾರಣವೇನು?

ರಾಸಾಯನಿಕ ಗೊಬ್ಬರಕ್ಕೆ ಬೇಕಾಗುವ ಕಚ್ಚಾವಸ್ತುಗಳ ಬೆಲೆ ಮಿತಿಮೀರಿ ಹೆಚ್ಚಳವಾಗಿದೆ. ಇವುಗಳನ್ನು ಚೀನಾ, ಆಫ್ರಿಕಾ ಮತ್ತಿತರ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ಫಾಸ್ಪರಿಕ್‌ ಆ್ಯಸಿಡ್‌ ದರ ಬ್ಯಾರಲ್‌ಗೆ 400 ಡಾಲರ್‌ ಇದ್ದಿದ್ದು 790 ಡಾಲರ್‌ಗೆ ಏರಿಕೆಯಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದ್ದು, ಬೆಲೆ ಏರಿಕೆ ಅನಿವಾರ್ಯ ಎನ್ನಲಾಗಿದೆ. ಕೇಂದ್ರ ಸರ್ಕಾರ ರಸಗೊಬ್ಬರ ಬಳಕೆ ಕಡಿಮೆಗೊಳಿಸಲು ಪರೋಕ್ಷವಾಗಿ ದರ ಏರಿಕೆ ಮಾಡುತ್ತಿದೆ ಎನ್ನುವ ಮಾತೂ ಇದೆ.

ರಸಗೊಬ್ಬರಕ್ಕೆ ಬೇಕಾಗುವ ಕಚ್ಚಾವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಚೀನಾ, ಆಫ್ರಿಕಾ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳುವ ದರದ ಆಧಾರದ ಮೇಲೆ ರಸಗೊಬ್ಬರ ದರ ಈ ಪರಿ ಏರಿಕೆಯಾಗಿದೆ. ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದು ಇದೇ ಮೊದಲು.

- ಡಾ.ನಾರಾಯಣಸ್ವಾಮಿ, ಮುಖ್ಯಸ್ಥರು, ಇಫ್ಕೋ ಮಾರುಕಟ್ಟೆ ಕರ್ನಾಟಕ ವಿಭಾಗ

ರಸಗೊಬ್ಬರ- ಹಳೆ ದರ - ಹೊಸ ದರ

ಡಿಎಪಿ-1200 - 1900

ಎನ್‌ಪಿಕೆ 10.26.26 -1175 - 1775

ಎನ್‌ಪಿಕೆ 12.32.16- 1185 - 1800

20.20.20- 925 - 1350

ಕೃತಕ ಅಭಾವ ಸೃಷ್ಟಿಸಾಧ್ಯತೆ

ರಾಜ್ಯದಲ್ಲಿ ಪ್ರಸಕ್ತ ಮುಂಗಾರಿಗೆ 15- 20 ಲಕ್ಷ ಟನ್‌ ರಸಗೊಬ್ಬರದ ಅಗತ್ಯವಿದೆ. ಈಗಿರುವ ಕಚ್ಚಾವಸ್ತುಗಳ ದರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಕಂಪನಿಗಳು ಹಿಂದೇಟು ಹಾಕುತ್ತಿವೆ. ಹಾಗೊಂದು ವೇಳೆ ಉತ್ಪಾದನೆ ಕಡಿಮೆಯಾದರೆ ಆಗ ಕೃತಕ ಅಭಾವ ಸೃಷ್ಟಿಯಾಗಿ ಪ್ರಸಕ್ತ ಮುಂಗಾರಿಗೆ ರಸಗೊಬ್ಬರ ಅಭಾವ ಸೃಷ್ಟಿಯಾಗಬಹುದು. ಆದ್ದರಿಂದ ಸರ್ಕಾರ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇದೇವೇಳೆ ದೇಶಾದ್ಯಂತ ಮುಂಗಾರು ಹಂಗಾಮಿಗೆ ಹೆಚ್ಚೂಕಮ್ಮಿ 500 ಲಕ್ಷ ಟನ್‌ ರಸಗೊಬ್ಬರದ ಬೇಡಿಕೆ ಇದೆ. ಇಷ್ಟುದೊಡ್ಡ ಮೊತ್ತದ ರಸಗೊಬ್ಬರ ಉತ್ಪಾದನೆಗೆ ಈ ಪರಿ ದರ ಏರಿಕೆಯಾಗುತ್ತಿರುವುದನ್ನು ನೋಡಿದರೆ ಕೃಷಿ ವಲಯಕ್ಕೆ ಸಾವಿರಾರು ಕೋಟಿ ರುಪಾಯಿ ಹೊರೆಯಾಗಲಿದೆ. ಇದು ಸಹಜವಾಗಿಯೇ ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದ್ದು ವಿದೇಶಿ ವಿನಿಮಯದ ಹೊರೆಯೂ ಹೆಚ್ಚಾಗಲಿದೆ.