ಬೆಂಗಳೂರು(ಮಾ.26): ರಾಜ್ಯದಲ್ಲಿ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ಎರಡೂವರೆ ಸಾವಿರದ ಗಡಿ ದಾಟುತ್ತಿದ್ದಂತೆ ಧಾರ್ಮಿಕ ಹಬ್ಬಗಳ ಸಾರ್ವಜನಿಕ ಆಚರಣೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯವಾಗಿ ಯುಗಾದಿ, ಹೋಳಿ, ಶಬ್‌-ಎ-ಬಾರತ್‌, ಗುಡ್‌ ಫ್ರೈಡೆಯಂತಹ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ಸರ್ಕಾರ ನಿರ್ಬಂಧಿಸಿ ಮಾರ್ಗಸೂಚಿ ಹೊರಡಿಸಿದೆ.

ಕೊರೋನಾ ಎರಡನೇ ಅಲೆಯ ಪರಿಣಾಮ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಸಾಲು-ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಚರಣೆ ನೆಪದಲ್ಲಿ ಸಾರ್ವಜನಿಕವಾಗಿ ಜನ ಸೇರುವುದು, ಮೆರವಣಿಗೆ ಮಾಡುವುದು ಹಾಗೂ ಬಹಿರಂಗ ಆಚರಣೆಯನ್ನು ನಿಷೇಧಿಸಿದೆ.

ಯಾವುದೇ ಸಾರ್ವಜನಿಕ ಸ್ಥಳ, ಮೈದಾನ, ಸಾರ್ವಜನಿಕ ಉದ್ಯಾನವನ, ಮಾರುಕಟ್ಟೆಮತ್ತು ಧಾರ್ಮಿಕ ಸ್ಥಳಗಳಲ್ಲಿ ಹಬ್ಬ ಆಚರಿಸಲು ಗುಂಪು ಸೇರಬಾರದು. ಮೆರವಣಿಗೆ ನಡೆಸಬಾರದು. ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ಅದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ- 2005ರಡಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಸರ್ಕಾರ ಹೇಳಿದೆ.

ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿ ಆಯುಕ್ತರು ಮತ್ತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಆದೇಶ ನೀಡಿದ್ದಾರೆ.

ಹೊಸ ಮಾರ್ಗಸೂಚಿ

- ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಅವುಗಳ ಆಚರಣೆ ನೆಪದಲ್ಲಿ ಜನರು ಸಾರ್ವಜನಿಕವಾಗಿ ಸೇರುವಂತಿಲ್ಲ

- ಯುಗಾದಿ, ಹೋಳಿ, ಶಬ್‌-ಎ-ಬಾರಾತ್‌, ಗುಡ್‌ ಫ್ರೈಡೇ ಮುಂತಾದ ಹಬ್ಬಗಳನ್ನು ಮನೆಯಿಂದ ಹೊರಬಂದು ಆಚರಿಸುವಂತಿಲ್ಲ

- ಮೈದಾನ, ಸಾರ್ವಜನಿಕ ಉದ್ಯಾನವನ, ಮಾರುಕಟ್ಟೆಮತ್ತು ಧಾರ್ಮಿಕ ಸ್ಥಳಗಳಲ್ಲಿ ಹಬ್ಬ ಆಚರಿಸಲು ಗುಂಪು ಸೇರಬಾರದು

- ಈ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಬಿಎಂಪಿ ಕಮಿಷನರ್‌, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ನಿರ್ದೇಶನ