ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಮೇ.06): ಒಂದು ಕಡೆ ಆರ್ಥಿಕ ಚಟುವಟಿಕೆ ನಡೆಸಲು ರಾಜ್ಯ ಸರ್ಕಾರ ಲಾಕ್‌ಡೌನ್‌ ಮಾಡುತ್ತಿದ್ದಂತೆ ಮತ್ತೊಂದು ಕಡೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವಲಸೆ ಬಂದಿದ್ದ ಸಾವಿರಾರು ಕಾರ್ಮಿಕರು ಬೆಂಗಳೂರಿನಿಂದ ವಾಪಸ್‌ ತಮ್ಮೂರಿಗೆ ಹೋಗುತ್ತಿದ್ದು, ವಿವಿಧ ಬಗೆಯ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ರಾಜ್ಯ ಸರ್ಕಾರ ಕಾರ್ಮಿಕರಿಗೆ ವಾಪಸ್‌ ಹೋಗದಂತೆ ಮನವಿ ಮಾಡಿದ್ದರೂ ಅದಕ್ಕೆ ಕಿವಿಗೊಡುತ್ತಿಲ್ಲ. ಇದರಿಂದ ದೊಡ್ಡ ಕಂಪನಿಗಳು ಹಾಗೂ ಗುತ್ತಿಗೆದಾರರಿಗೆ ಆತಂಕ ಶುರುವಾಗಿದೆ. ವಿಶೇಷವಾಗಿ ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೃಹತ್‌ ಕಟ್ಟಡ ಕಾಮಗಾರಿಗಳ ಮೇಲೆ ಪರಿಣಾಮ ಬೀರಲಿದೆ.

ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿವಿಧ ಕಾಮಗಾರಿ, ಬೃಹತ್‌ ಅಪಾರ್ಟ್‌ಮೆಂಟ್‌ ನಿರ್ಮಾಣ ಕಾಮಗಾರಿಯಲ್ಲಿ ಅಂದಾಜಿನ ಪ್ರಕಾರ ಎರಡು ಲಕ್ಷಕ್ಕೂ ಹೆಚ್ಚು ಉತ್ತರ ಭಾರತ ಕಾರ್ಮಿಕರಿದ್ದಾರೆ. ಇದರಲ್ಲಿ 90 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೆಂಗಳೂರಲ್ಲಿಯೇ ಇದ್ದಾರೆ. ಮೆಟ್ರೋ ಕಾಮಗಾರಿಯಲ್ಲಿಯೇ 10 ಸಾವಿರದಷ್ಟುಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದೇ ರೀತಿ ಒಡಿಶಾ ರಾಜ್ಯದ 50 ಸಾವಿರ, ಬಿಹಾರ ರಾಜ್ಯದ 30 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು, ಜಾರ್ಖಂಡ್‌, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದವರು ಸಹ ರಾಜ್ಯದ ವಿವಿಧೆಡೆ ವಿವಿಧ ಕಾಮಗಾರಿಯಲ್ಲಿ ದುಡಿಯುತ್ತಿದ್ದಾರೆ.

ದಾವಣಗೆರೆಯಲ್ಲಿ 12 ಸೇರಿ ಕರ್ನಾಟಕದಲ್ಲಿ ನಿನ್ನೆ 22 ಕೇಸ್‌!

ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದಿರುವುದು ಹಾಗೂ ಕೊರೋನಾ ಸೋಂಕಿನ ಭೀತಿ ಆವರಿಸಿದೆ. ಅವರ ಕುಟುಂಬಸ್ಥರು ಸಹ ಭಯಗೊಂಡು ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಬಳಿಕ ಗುತ್ತಿಗೆದಾರರು ಕಾರ್ಮಿಕರ ಯೋಗಕ್ಷೇಮ ವಿಚಾರಿಸಿಕೊಳ್ಳದ್ದಕ್ಕೆ ಹತಾಶರಾಗಿ ಕಾರ್ಮಿಕರು ವಾಪಸ್‌ ತಮ್ಮೂರಿಗೆ ಹೋಗುತ್ತಿದ್ದಾರೆ, ಹೊಂಗಸಂದ್ರದ ಬಿಹಾರಿ ಕಾರ್ಮಿಕನಲ್ಲಿ ಸೋಂಕು ಪತ್ತೆಯಾದ ಬಳಿಕ ಜನರು ಅವರನ್ನು ನೋಡುತ್ತಿರುವ ದೃಷ್ಟಿಯೂ ಬದಲಾಗಿದೆ. ಇದು ಸಹ ತಮ್ಮ ಊರುಗಳಿಗೆ ಹೋಗಲು ಕಾರಣವಾಗಿದೆ. ಇದು ಮುಂದಿನ ದಿನದಲ್ಲಿ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆಗೆ ಕಾರಣವಾಗಲಿದೆ ಎಂದು ಸರ್ಕಾರದ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರ ಭಾರತದವರೇ ಏಕೆ ಹೆಚ್ಚು?

2-3 ದಶಕಗಳ ಹಿಂದೆ ರಾಜ್ಯದಲ್ಲಿ ತಮಿಳುನಾಡಿನ ಕಾರ್ಮಿಕರು ಮತ್ತು ಉತ್ತರ ಕರ್ನಾಟಕದ ಕಾರ್ಮಿಕರು ಹೆಚ್ಚಾಗಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದರು. ಆದರೆ, ತಮಿಳುನಾಡು ಸರ್ಕಾರ ಉಚಿತ ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ವಿತರಣೆ ಯೋಜನೆ ಘೋಷಿಸಿದ ಬಳಿಕ ರಾಜ್ಯದಲ್ಲಿನ ಬಹುತೇಕ ತಮಿಳು ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳಿದರು.

ಲಾಕ್‌ಡೌನ್ ಸಡಿಲಿಕೆ ಎಫೆಕ್ಟ್: ಮೇ ತಿಂಗಳ ಅಂತ್ಯದಲ್ಲಿ ರಾಜ್ಯದಲ್ಲಿ 6000 ಕೇಸು?

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಯಿಂದ ಉತ್ತರ ಕರ್ನಾಟಕದ ಕಾರ್ಮಿಕರು ಸಹ ಸ್ವಂತ ಊರುಗಳಿಗೆ ವಾಪಸ್‌ ಹೋದರು. ರಾಜ್ಯದಲ್ಲಿ ಪ್ರಸ್ತುತ ಉತ್ತರ ಕರ್ನಾಟಕ ಕಾರ್ಮಿಕರು ಸಿಗುತ್ತಿದ್ದರೂ ಮೊದಲಿನಂತೆ ಲಭ್ಯವಾಗುತ್ತಿಲ್ಲ. ಹೀಗಾಗಿ ಗುತ್ತಿಗೆದಾರರು ಉತ್ತರ ಭಾರತದ ಕಾರ್ಮಿಕರನ್ನು ಕರೆ ತರಲಾರಂಭಿಸಿದರು. ಜತೆಗೆ ಹೆಚ್ಚಿನ ಕೂಲಿ ಸಿಗಲಿದೆ ಎಂಬ ಕಾರಣಕ್ಕಾಗಿ ಸಾಕಷ್ಟುಸಂಖ್ಯೆಯಲ್ಲಿ ರಾಜ್ಯಕ್ಕೆ ಉತ್ತರ ಭಾರತದ ಕಾರ್ಮಿಕರು ಬೆಂಗಳೂರಿಗೆ ಬರುತ್ತಾರೆ.

ಉತ್ತರ ಭಾರತದವರು ವಾಪಸ್‌ ತೆರಳುತ್ತಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭಾರಿ ಹೊಡೆತ ಬೀಳುತ್ತದೆ. ಒಂದೆರೆಡು ತಿಂಗಳಲ್ಲಿ ಮುಗಿಸುವ ಕೆಲಸ ಈಗ ಬೇರೆ ಕಾರ್ಮಿಕರನ್ನು ಕರೆತಂದು ಮಾಡಬೇಕಿರುವ ಕಾರಣ 5-6 ತಿಂಗಳು ನಡೆಯಲಿದೆ. ಲಾಕ್‌ಡೌನ್‌ ಸಡಿಲಗೊಂಡರೂ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಾರ್ಮಿಕರ ಸಮಸ್ಯೆ ಎದುರಾಗಲಿದೆ.

-ಜಿ.ಗಣೇಶ್‌, ಮರಗೆಲಸದ ಗುತ್ತಿಗೆದಾರ.