ದಲಿತಪರ ಸಂಘಟನೆಗಳು ದಬ್ಬಾಳಿಕೆ ಚಾಳಿ ಬಿಡಿ: ಶಾಸಕ ಇಕ್ಬಾಲ್ ಹುಸೇನ್
ರಾಮನಗರದಲ್ಲಿ ದಲಿತ ಪರ ಸಂಘಟನೆಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದ್ದಾರೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವ ಕೆಟ್ಟ ಚಾಳಿಯನ್ನು ಬಿಡುವಂತೆ ಸಲಹೆ ನೀಡಿದ್ದಾರೆ. ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಕರೆ ನೀಡಿದ್ದಾರೆ.

ರಾಮನಗರ (ಏ.15): ಸರ್ಕಾರಿ ಅಧಿಕಾರಿಗಳು ಕಾನೂನಿನ ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಅವರನ್ನು ದ್ವೇಷದಿಂದ ಕಾಣಬಾರದು. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವ ಕೆಟ್ಟ ಚಾಳಿಯನ್ನು ಸಂಘಟನೆಗಳು ಬಿಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.
ಮಹಾನ್ ನಾಯಕರ ಜಯಂತಿ ಆಚರಿಸಲು ಸರ್ಕಾರಿ ಅಧಿಕಾರಿಗಳಿಗೆ ಒಂದಷ್ಟು ನಿಯಮಗಳಿರುತ್ತವೆ. ಅದರೊಳಗೆ ಜಯಂತಿಗಳನ್ನು ಆಚರಿಸಬೇಕು. ಅಂಬೇಡ್ಕರ್ ಜಯಂತಿ ಎಲ್ಲರ ಹಬ್ಬ. ನಾವು ಬೇಕಾದರೆ ಅದ್ಧೂರಿಯಾಗಿ ಜಯಂತಿಗಳನ್ನು ಆಚರಣೆ ಮಾಡೋಣ. ವಿನಾಕಾರಣ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಇನ್ನು ಮುಂದಾದರೂ ನಿಮ್ಮ ಕೆಟ್ಟ ಚಾಳಿ ಬಿಡಿ ಎಂದು ದಲಿತ ಪರ ಸಂಘಟನೆಗಳ ಮುಖಂಡರಿಗೆ ಸಲಹೆ ನೀಡಿದರು.
ಇದನ್ನೂ ಓದಿ: ಕಾರವಾರ: ಅಂಬೇಡ್ಕರ್ ಜಯಂತಿಗೆ ಗೈರಾದ ಜನಪ್ರತಿನಿಧಿಗಳು!
ಸಮುದಾಯದ ಏಳಿಗೆಗಾಗಿ ಎಲ್ಲರು ಸಂಘಟಿತರಾಗಬೇಕು. ಒಗ್ಗಟ್ಟಾಗಿ ಇರಬೇಕು. ಆದರೆ, ಅನೇಕರು ಸ್ವಾರ್ಥಕ್ಕಾಗಿ ಸಂಘಟನೆ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಅದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ಹಾಗೂ ಸಮಾಜದ ತಾಯಂದಿರಿಗಾಗಿ ಹೋರಾಟ ಮಾಡಬೇಕು. ಈ ಸಮಾಜದಲ್ಲಿ ಉಳಿದು ಸಮಾನತೆ ತಂದುಕೊಂಡು ಬದುಕಬೇಕಾದರೆ, ಎಲ್ಲ ರೀತಿಯಲ್ಲಿ ಅರ್ಹತೆ ಬೇಕಾದರೆ, ಹಕ್ಕು ಪಡೆಯಬೇಕಾದರೆ ಹೋರಾಟ ಮಾಡಬೇಕಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು: ದೇಶದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಪಣ!
ಕಣ್ಮನ ಸೆಳೆದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ
ರಾಮನಗರ: ಆನೆ ಮೇಲೆ ಹಾಗೂ ಬೆಳ್ಳಿ ರಥದಲ್ಲಿ ಸಂವಿಧಾನ ಶಿಲ್ಬಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರ ಇರಿಸಿ ಭವ್ಯವಾದ ಮೆರವಣಿಗೆ ನಡೆಸಲಾಯಿತು. ನಗರದ ಮಿನಿ ವಿಧಾನಸೌಧ ಬಳಿ ಆನೆ ಮೇಲೆ ಹಾಗೂ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿ ಜೂನಿಯರ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಮಾಡಲಾಯಿತು.
ಮಿನಿ ವಿಧಾನಸೌಧದಿಂದ ಆರಂಭವಾದ ಮೆರವಣಿಗೆಯೂ ಮೈಸೂರು - ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಜೂನಿಯರ್ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಉದ್ಧಕ್ಕೂ ನೂರಾರು ಜನರು ಸಾಗಿ ಬಂದರು.