ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂಡಿ ಕೃಷ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗ (ಏ.9): ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂಡಿ ಕೃಷ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸ್ಮಾರ್ಟ್ ಸಿಟಿ ಪ್ರದೇಶಗಳಲ್ಲಿ ಟಿವಿ ಇತ್ಯಾದಿಗಳ ಅಳವಡಿಕೆ ಮತ್ತು ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಈ ಬಂಧನ ನಡೆದಿದೆ.
ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಕೃಷ್ಣಪ್ಪ ಅವರು ಸುಮಾರು 1 ಲಕ್ಷ ರೂಪಾಯಿಗಳ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಾಂಬೆ ಮೂಲದ ಒಂದು ಕಂಪನಿಯಿಂದ ಹಣ ಪಡೆಯಲು ಬೇಡಿಕೆ ಇಟ್ಟಿದ್ದ ಅವರು, ಹಣ ನೀಡದಿದ್ದರೆ 'ನಿರ್ವಹಣೆ ಸರಿಯಾಗಿ ನಡೆದಿಲ್ಲ' ಎಂದು ರಿಪೋರ್ಟ್ ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಲಬುರಗಿ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಾಹಿತಿ ಆಯುಕ್ತ! ಏನಿದು ಪ್ರಕರಣ?
ಈ ದಾಳಿಯನ್ನು ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಈ ಘಟನೆ ಶಿವಮೊಗ್ಗದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ತನಿಖೆ ಚುರುಕುಗೊಂಡಿದೆ.
ನಿವೃತ್ತಿಯ ದಿನವೇ ಲೋಕಾಯುಕ್ತ ಬಲೆಗೆ!
ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ ಅವರಿಗೆ ಇಂಧು ವೃತ್ತಿಯ ಕೊನೆಯ ದಿನವಾಗಿತ್ತು. ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ಲಂಚದ ಆಸೆಯಿಂದ ಕೊನೆಯ ದಿನ ಅರೆಸ್ಟ್ ಆಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಟಿವಿ, ಎಲ್‍ಇಡಿ ಪರದೆ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪೆನಿ ಬಳಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
