Asianet Suvarna News Asianet Suvarna News

ಮಹಾರಾಷ್ಟ್ರ ಗಡಿ ತಂಟೆಗೆ ಸರ್ವಪಕ್ಷ ಖಂಡನೆ: ಸಿಎಂ ನಿರ್ಣಯಕ್ಕೆ ಸರ್ವಾನುಮತದ ಮುದ್ರೆ

ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರದ ನಾಯಕರು ಪ್ರಚೋದನಕಾರಿ ನಡವಳಿಕೆ ತೋರುತ್ತಿರುವುದು ಖಂಡನೀಯ. ರಾಜ್ಯದ ಹಿತರಕ್ಷಣೆಗೆ ಅಗತ್ಯವಿರುವ ಎಲ್ಲ ಸಂವಿಧಾನಾತ್ಮಕ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ನಿರ್ಣಯವನ್ನು ರಾಜ್ಯ ವಿಧಾನಸಭೆ ಗುರುವಾರ ಸರ್ವಾನುಮತದಿಂದ ಕೈಗೊಂಡಿತು.

All Parties Condemn the Maharashtra For Border Dispute grg
Author
First Published Dec 23, 2022, 1:30 AM IST

ವಿಧಾನಸಭೆ(ಡಿ.23): ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್‌ ಆಯೋಗದ ವರದಿಯೇ ಅಂತಿಮ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರ ಮುಗಿದ ಅಧ್ಯಾಯ. ಹೀಗಿದ್ದೂ ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರದ ನಾಯಕರು ಪ್ರಚೋದನಕಾರಿ ನಡವಳಿಕೆ ತೋರುತ್ತಿರುವುದು ಖಂಡನೀಯ. ರಾಜ್ಯದ ಹಿತರಕ್ಷಣೆಗೆ ಅಗತ್ಯವಿರುವ ಎಲ್ಲ ಸಂವಿಧಾನಾತ್ಮಕ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ನಿರ್ಣಯವನ್ನು ರಾಜ್ಯ ವಿಧಾನಸಭೆ ಗುರುವಾರ ಸರ್ವಾನುಮತದಿಂದ ಕೈಗೊಂಡಿತು.

ಗಡಿ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರದ ಮುಖಂಡರ ನಡವಳಿಕೆ ಬಗ್ಗೆ ಎರಡು ದಿನಗಳ ಹಿಂದೆ ಸದಸ್ಯರು ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದ್ದರ ಮುಂದುವರೆದ ಭಾಗವಾಗಿ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಖಂಡನಾ ನಿರ್ಣಯವನ್ನು ಇಡೀ ಸದನ ಮೇಜು ತಟ್ಟಿಸರ್ವಾನುಮತದಿಂದ ಅಂಗೀಕರಿಸಿತು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ, ಎಚ್‌ಕೆಪಿ

ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂವಿಧಾನಾತ್ಮಕವಾಗಿ ನಮ್ಮ ಹಕ್ಕು ರಕ್ಷಿಸಿಕೊಳ್ಳುವುದು ನಮಗೆ ಗೊತ್ತಿದೆ. ಮಹಾರಾಷ್ಟ್ರದ ಪ್ರಚೋದನಕಾರಿ ಹೇಳಿಕೆಗೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ. ಅವರಿಗಿಂತ ಗಡಿ ರಕ್ಷಣೆಯ ವಿಷಯದಲ್ಲಿ ಹೆಚ್ಚು ಸಮರ್ಥವಾಗಿ ನಡೆದುಕೊಳ್ಳುತ್ತೇವೆ ಎಂದು ಸದನದಲ್ಲಿ ಘೋಷಿಸಿದರು.

ಮಹಾರಾಷ್ಟ್ರದ ಮುಖಂಡರು ಹೇಳಿಕೆ ನೀಡಿದ ರೀತಿಯಲ್ಲೇ ನಮಗೂ ಪ್ರತಿಕ್ರಿಯೆ ಕೊಡಲು ಬರುತ್ತದೆ. ಆದರೆ ನಾವು ಸುಸಂಸ್ಕೃತರು. ಹಾಗಾಗಿ ಅವರ ಧಾಟಿಯಲ್ಲಿ ಉತ್ತರ ನೀಡುವುದಿಲ್ಲ. ಮಹಾರಾಷ್ಟ್ರ ಸಂಸದರು, ಶಾಸಕರು ಬಳಸಿರುವ ಭಾಷೆ ಅಪ್ರಬುದ್ಧ ಹಾಗೂ ಅನಾಗರಿಕವಾಗಿದೆ ಎಂದು ಮುಖ್ಯಮಂತ್ರಿಗಳು ಖಾರವಾಗಿ ಹೇಳಿದರು.

ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕೇಂದ್ರದ ಗೃಹ ಸಚಿವರು ಎರಡೂ ರಾಜ್ಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ನೀಡಿರುವ ಸೂಚನೆಯನ್ನು ಸಹ ಮಹಾರಾಷ್ಟ್ರ ಉಲ್ಲಂಘಿಸುತ್ತಿದೆ. ಅದು ಎರಡೂ ರಾಜ್ಯಗಳ ಸಂಬಂಧಕ್ಕೆ ಧಕ್ಕೆ ತರುವಂಥದ್ದಾಗಿದೆ. ಇದನ್ನು ನಿಯಂತ್ರಿಸಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸುತ್ತಾ ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೂ ರಾಜ್ಯ ಸರ್ಕಾರ ತರುತ್ತದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶ ಶಿವರಾಜ ಪಾಟೀಲ್‌ ಅವರನ್ನು ಗಡಿ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ನಮ್ಮ ನಿಲುವನ್ನು ಸಮರ್ಥವಾಗಿ ಪ್ರತಿಪಾದನೆ ಮಾಡಲು ಅವರ ಮಾರ್ಗದರ್ಶನ ಪಡೆಯಲಾಗುತ್ತಿದೆ. ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾದ ಮುಕುಲ್‌ ರೋಹಟಗಿ ನೇತೃತ್ವದಲ್ಲಿ ಐದು ಜನ ನುರಿತ ವಕೀಲರ ತಂಡ ರಚನೆ ಮಾಡಲಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಬೆಳಗಾವಿ ಎಂದೆಂದಿಗೂ ನಮ್ಮದೇ: ಸಿದ್ದರಾಮಯ್ಯ

ರಾವುತ್‌ ದೇಶದ್ರೋಹಿ, ಉಳಿದವರು ಅಪ್ರಬುದ್ಧ

ಚೀನಾ ರೀತಿ ರಾಜ್ಯಕ್ಕೆ ನುಗ್ಗುವ ಬಗ್ಗೆ ಹೇಳಿಕೆ ನೀಡಿದ ಶಿವಸೇನೆಯ ಸಂಜಯ್‌ ರಾವುತ್‌ ಚೀನಾ ಏಜೆಂಟ್‌, ದೇಶದ್ರೋಹಿ. ಕರ್ನಾಟಕ ಸಿಎಂಗೆ ಮಸ್ತಿ (ಅಹಂಕಾರ) ಎಂದ ಎನ್‌ಸಿಪಿ ಶಾಸಕ ಜಯಂತ್‌ ಪಾಟೀಲ್‌ ಹಾಗೂ ಇತರರು ಅಪ್ರಬುದ್ಧರಾಗಿ ವರ್ತಿಸುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಮಹಾ ನಾಯಕರಿಗೆ ಮಾನ, ಮರ್ಯಾದೆ ಇಲ್ಲ

ಮಹಾರಾಷ್ಟ್ರದ ಜನಪ್ರತಿನಿಧಿಗಳ ಹೇಳಿಕೆ ಖಂಡನೀಯ. ಅವರಿಗೆ ಮಾನ, ಮರ್ಯಾದೆ ಇಲ್ಲ. ಒಕ್ಕೂಟ ವ್ಯವಸ್ಥೆ ಬಗ್ಗೆ ಜ್ಞಾನವೇ ಇಲ್ಲ. ಅವರಿಗೆ ನಾಗರಿಕ ಭಾಷೆಯಲ್ಲೇ ತಕ್ಕ ಉತ್ತರ ಕೊಡಬೇಕು ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 
 

Follow Us:
Download App:
  • android
  • ios