ಗ್ಯಾರಂಟಿ ಯೋಜನೆಗಳ ಬಗ್ಗೆ ಮೂಡಿದ್ದ ಎಲ್ಲ ಗೊಂದಲಗಳೂ ನಿವಾರಣೆಯಾಗಿವೆ. ಯಾವುದಾದರೂ ಗೊಂದಲಗಳಿದ್ದರೆ ಸರ್ಕಾರ ಪರಿಹರಿಸುತ್ತದೆ, ಆದರೆ, ಮಾಧ್ಯಮದವರು ಯೋಜನೆಗಳ ಬಗ್ಗೆ ಗೊಂದಲ ಸೃಷ್ಟಿಸದಿದ್ದರೆ ಸಾಕು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಜೂ.11): ಗ್ಯಾರಂಟಿ ಯೋಜನೆಗಳ ಬಗೆಗಿನ ಎಲ್ಲ ಗೊಂದಲಗಳೂ ನಿವಾರಣೆಯಾಗಿದೆ, ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ಗೃಹಜ್ಯೋತಿ’ ಯೋಜನೆ ಕುರಿತಂತೆ ಸಚಿವ ಕೆ.ಜೆ. ಜಾರ್ಜ್‌ ಜತೆ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಬಗ್ಗೆ ಮೂಡಿದ್ದ ಎಲ್ಲ ಗೊಂದಲಗಳೂ ನಿವಾರಣೆಯಾಗಿವೆ. ಯಾವುದಾದರೂ ಗೊಂದಲಗಳಿದ್ದರೆ ಸರ್ಕಾರ ಪರಿಹರಿಸುತ್ತದೆ, ಆದರೆ, ಮಾಧ್ಯಮದವರು ಯೋಜನೆಗಳ ಬಗ್ಗೆ ಗೊಂದಲ ಸೃಷ್ಟಿಸದಿದ್ದರೆ ಸಾಕು ಎಂದರು.

ಖಾತೆಗೆ 15 ಲಕ್ಷರೂ. ಹಾಕುವ ಕತೆ ಏನಾಯ್ತು? ಬಿಜೆಪಿ ಅಪಪ್ರಚಾರ ಮಾಡೋದು ನಿಲ್ಲಿಸಲಿ: ಶಾಸಕ ಮಾನೆ

ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿತ್ತು. ಆದರೆ, ಸರ್ಕಾರದ ಬಂದಾಗ ಅದನ್ನು ಜಾರಿ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಭರವಸೆಗಳನ್ನು ನೀಡಿದ್ದರು. ಆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಾಧ್ಯಮಗಳು ಬಿಜೆಪಿ ಹಾಗೂ ನರೇಂದ್ರ ಮೋದಿ ನೀಡಿದ್ದ ಭರವಸೆಗಳ ಬಗ್ಗೆಯೂ ಚರ್ಚಿಸಬೇಕು ಎಂದು ಹೇಳಿದರು.

ಜು.11ರಂದು ಸಭೆ:

ಇಂಧನ ಸಚಿವ ಕೆ.ಜೆ. ಜಾಜ್‌ರ್‍ ಮಾತನಾಡಿ, ಹೊಸ ಮನೆಗಳಿಗೆ ಹಾಗೂ ಹೊಸದಾಗಿ ಬಾಡಿಗೆ ಮನೆಗೆ ಹೋಗುವವರಿಗೂ ಉಚಿತ ವಿದ್ಯುತ್‌ ಸಿಗಲಿದೆ. ಆರ್‌ಆರ್‌ ಸಂಖ್ಯೆಗೆ ಮತದಾರರ ಗುರುತಿನ ಚೀಟಿ ಲಿಂಕ್‌ ಆಗಿದ್ದರೆ ಅಥವಾ ಬಾಡಿಗೆ ಕರಾರು ಪತ್ರ ಇದ್ದರೆ 200 ಯುನಿಟ್‌ವರೆಗೆ ವಿದ್ಯುತ್‌ ಉಚಿತವಾಗಿ ದೊರೆಯಲಿದೆ. ಸೋಮವಾರ ಜು.11ರಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಲ್ಲ ಗೊಂದಲಗಳನ್ನು ನಿವಾರಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಯೋಜನೆ ಸಂಬಂಧ ಗೊಂದಲ ಸೇರಿದಂತೆ ಮತ್ತಿತರ ಮಾಹಿತಿಯನ್ನು ಚರ್ಚಿಸಿದ್ದೇನೆ. ಜುಲೈ ತಿಂಗಳಿನಿಂದ ಉಚಿತ ವಿದ್ಯುತ್‌ ದೊರೆಯಲಿದೆ. ಆದರೆ, ಜೂನ್‌ ತಿಂಗಳಲ್ಲಿ ಬಳಸಿದ ವಿದ್ಯುತ್‌ಗೆ ಬಿಲ್‌ ಪಾವತಿಸಬೇಕಿದೆ. ಆಗಸ್ಟ್‌ 1ರಂದು ಕಲಬುರಗಿಯಲ್ಲಿ ಕಾರ್ಯಕ್ರಮ ನಡೆಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.