ಬೆಂಗಳೂರಿಂದ ಕೊಚ್ಚಿಗೆ ಟೇಕಾಫ್‌ ಆಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತುರ್ತಾಗಿ ಇಳಿದಿದೆ.

ಬೆಂಗಳೂರು (ಮೇ.20) ಬೆಂಗಳೂರಿಂದ ಕೊಚ್ಚಿಗೆ ಟೇಕಾಫ್‌ ಆಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತುರ್ತಾಗಿ ಇಳಿದಿದೆ.

ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ವಿಮಾನದಲ್ಲಿದ್ದ 179 ಪ್ರಯಾಣಿಕರು, 6 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನ ಟೇಕಾಫ್ ಆದ ಕೆಲ ಹೊತ್ತಲ್ಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಮಾಹಿತಿ ನೀಡಿ, ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿದರು. ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ಬೆಂಕಿ ನಂದಿಸಲಾಯಿತು.

ವಿಮಾನದಲ್ಲೇ ಕಿತ್ತಾಡಿದ ದಂಪತಿ, ಜರ್ಮನಿಗೆ ಹೋಗಬೇಕಾದ ಫ್ಲೈಟ್ ದೆಹಲಿಯಲ್ಲೇ ತುರ್ತು ಭೂ ಸ್ಪರ್ಶ!

ಘಟನೆಯಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಉಂಟಾಗಿತ್ತು. ಸಿಬ್ಬಂದಿ ಧೈರ್ಯ ತುಂಬಿ ಪ್ರಯಾಣಿಕರು ಗೊಂದಲಕ್ಕೆ ಒಳಗಾಗದಂತೆ ನೋಡಿಕೊಂಡರು. ಬಳಿಕ ಎಲ್ಲ ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವಕ್ತಾರರು ತಿಳಿಸಿದ್ದಾರೆ