ಮಲ್ಲಿಕಾರ್ಜುನ ಖರ್ಗೆ ಪುತ್ರ ಮಿಲಿಂದ್ ಖರ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು (ಜುಲೈ.27): ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಿರಿಯ ಪುತ್ರ ಮಿಲಿಂದ್ ಖರ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಿಲಿಂದ್ ಖರ್ಗೆ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಖರ್ಗೆಯವರ ಮಕ್ಕಳ ಪೈಕಿ ಕಿರಿಯವರಾದ ಮಿಲಿಂದ್ ಖರ್ಗೆ, ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವೀಧರರಾಗಿದ್ದು, ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಹಿರಿಯ ಸಹೋದರ ಪ್ರಿಯಾಂಕ್ ಖರ್ಗೆ ಹೊರತುಪಡಿಸಿದರೆ ಕಿರಿಯ ಸಹೋದರರು ರಾಜಕೀಯದಲ್ಲಾಗಲಿ, ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡವರಲ್ಲ.
ಮಿಲಿಂದ್ ಖರ್ಗೆ ಇತ್ತೀಚಿನ ದಿನಗಳಲ್ಲಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯಕೀಯ ಮೂಲಗಳ ಪ್ರಕಾರ, ಮಿಲಿಂದ್ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಬೆಂಗಳೂರಿನ ಒಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅದ್ಯಾಗೂ ಚಿಕಿತ್ಸೆಯ ವಿವರಗಳನ್ನು ಕುಟುಂಬದವರು ಅಥವಾ ಆಸ್ಪತ್ರೆಯ ಮೂಲಗಳು ಇನ್ನೂ ಸ್ಪಷ್ಟಪಡಿಸಿಲ್ಲ, ಆದರೆ ತಜ್ಞ ವೈದ್ಯರ ತಂಡವು ಅವರ ಆರೈಕೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
