ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿದ್ದ ವೇಳೆ ಅಗ್ನಿಪಥ್ ವಿರುದ್ಧದ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದ ಪರಿಣಾಮ ದಿಕ್ಕೆಟ್ಟಿದ್ದ 164 ಮಂದಿ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸು ಕರೆತರಲಾಗಿದೆ.
ಬೆಂಗಳೂರು (ಜೂ.23): ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿದ್ದ ವೇಳೆ ಅಗ್ನಿಪಥ್ ವಿರುದ್ಧದ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದ ಪರಿಣಾಮ ದಿಕ್ಕೆಟ್ಟಿದ್ದ 164 ಮಂದಿ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸು ಕರೆತರಲಾಗಿದೆ. ಮಂಡ್ಯ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ 164 ಮಂದಿ, ಬುಧವಾರ ಬೆಂಗಳೂರಿನ ಮಹಾಲಕ್ಷ್ಮೇ ಬಡಾವಣೆಯಲ್ಲಿರುವ ಸಚಿವ ಕೆ. ಗೋಪಾಲಯ್ಯ ಕಚೇರಿಗೆ ಆಗಮಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಗೋಪಾಲಯ್ಯ ಅವರು ಪ್ರವಾಸಿಗರ ಯೋಗಕ್ಷೇಮ ವಿಚಾರಿಸಿ ಬಸ್ಸು ವ್ಯವಸ್ಥೆ ಮಾಡಿ ಮನೆಗಳಿಗೆ ಕಳುಹಿಸಿಕೊಟ್ಟರು.
ಪ್ರವಾಸಿಗರು ಕಾಶಿಗೆ ತೆರಳಿದ್ದ ವೇಳೆ ಆ ಭಾಗದಲ್ಲಿ ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. ಹೀಗಾಗಿ ತಮ್ಮನ್ನು ಸುರಕ್ಷಿತವಾಗಿ ಕರೆ ತರುವಂತೆ ಪ್ರವಾಸಿಗರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಮನವಿ ಮಾಡಿದ್ದರು. ಗೋಪಾಲಯ್ಯ ಅವರು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಮೂರು ಪ್ರತ್ಯೇಕ ಬಸ್ಸುಗಳ ವ್ಯವಸ್ಥೆ ಮಾಡಿ ವಾಪಸು ಕರೆತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಪ್ರತಿಭಟನಾಕಾರರು ರೈಲುಗಳಿಗೆ ಬೆಂಕಿ ಹಚ್ಚುತ್ತಿದ್ದರಿಂದ ಪ್ರವಾಸಿಗರು ಅಲ್ಲಿಂದ ವಾಪಸು ಬರಲು ಆಗಿರಲಿಲ್ಲ. ಇವರೆಲ್ಲರೂ ರೈಲು ಪ್ರಯಾಣಕ್ಕಾಗಿ ತಲಾ 800 ರು. ಟಿಕೆಟ್ ಬುಕ್ ಮಾಡಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಹಾಯ ಕೋರಿದ್ದರಿಂದ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಹೇಳಿದರು.
ನಕ್ಸಲ್ ಬೆಂಬಲಿಗರ ಮೇಲೂ ಕಣ್ಣು ,ಹೆಚ್ಚು ಕಮ್ಮಿಯಾದರೆ ಕ್ರಮ: ಅರಗ ಜ್ಞಾನೇಂದ್ರ ಎಚ್ಚರಿಕೆ
ಕಾಶಿಯಲ್ಲಿ ಸಿಲುಕಿದ 72 ಕನ್ನಡಿಗರು ಕೊನೆಗೂ ಪಾರು: ಅಗ್ನಿಪಥ್ ಯೋಜನೆ ವಿರುದ್ಧ ಉತ್ತರ ಪ್ರದೇಶದಲ್ಲಿ ಭುಗಿಲೆದ್ದಿರುವ ಆಕ್ರೋಶದಿಂದ ಮೂರು ದಿನದಿಂದ ತವರಿಗೆ ಮರಳಲಾಗದೆ ಕಾಶಿಯಲ್ಲಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದ ಮಂಡ್ಯದ 72 ಮಂದಿಯನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಿಕೊಡುವ ವ್ಯವಸ್ಥೆಯಾಗಿದೆ. ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿಯವರಾದ ವಾರಾಣಸಿ ಪ್ರಾದೇಶಿಕ ಆಯುಕ್ತ ರವಿಕುಮಾರ್, ಸಚಿವ ಕೆ.ಗೋಪಾಲಯ್ಯ, ಮಂಡ್ಯ ಡಿಸಿ ಎಸ್.ಅಶ್ವಥಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರ ನೆರವಿನೊಂದಿಗೆ 72 ಮಂದಿಯನ್ನು ತವರಿಗೆ ಕಳುಹಿಸಿಕೊಡಲು 2 ಬಸ್ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ ಅಥವಾ ಸಂಜೆ ಬಸ್‌ಗಳು ಮಂಡ್ಯದತ್ತ ಹೊರಡಲಿವೆ.
Agnipath ಅಗ್ನಿವೀರರಿಗೆ ಕರ್ನಾಟಕ ಸರ್ಕಾರದಿಂದಲೂ ಬಂಪರ್ ಆಫರ್
ಜೂ.9ರಂದು ಕಾಶಿ-ಅಯೋಧ್ಯೆ ಯಾತ್ರೆಗೆ ಹೊರಟಿದ್ದ ಮಂಡ್ಯದ 72 ಮಂದಿ ಜೂ.17ರಂದು ಸಂಘಮಿತ್ರ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸಾಗಬೇಕಿತ್ತು. ಅಗ್ನಿಪಥ್ ಯೋಜನೆ ವಿರುದ್ಧದ ಹಿಂಸಾಚಾರದಿಂದಾಗಿ ರೈಲು ಸಂಚಾರ ರದ್ದಾದವು. ಇದರಿಂದ ಕಾಶಿಯ ಜಂಗಮವಾಡಿ ಮಠದಲ್ಲಿ ಆಶ್ರಯ ಪಡೆದಿರುವ ಮಂಡ್ಯ ನಿವಾಸಿಗಳು ವಿಡಿಯೋ ಸಂದೇಶದ ಮೂಲಕ ರಕ್ಷಣೆಗಾಗಿ ಸಿಎಂ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಸ್.ಅಶ್ವತಿ ವಾರಾಣಸಿ ಡಿಸಿಯೊಂದಿಗೆ ಮಾತುಕತೆ ನಡೆಸಿದರು. ಆಗ ವಾರಾಣಸಿ ಪ್ರಾದೇಶಿಕ ಆಯುಕ್ತ ರವಿಕುಮಾರ್ ಮಂಡ್ಯದ ಪ್ರವಾಸಿಗರನ್ನು ಸಂಪರ್ಕಿಸಿ ಊಟ-ತಿಂಡಿ ವೆಚ್ಚ ಪಾವತಿಸಿದರು. ಬೆಂಗಳೂರು, ಮೈಸೂರು ಕಡೆಗೆ ತೆರಳಲಿರುವ ರೈಲುಗಳಲ್ಲಿ 20 ರಿಂದ 25 ಟಿಕೆಟ್ ಬುಕ್ ಮಾಡಿಕೊಡುವ ಭರವಸೆ ನೀಡಿದರು. ಆದರೆ ಮಂಡ್ಯದ ನಿವಾಸಿಗಳು ಎಲ್ಲರೂ ಜತೆಗೇ ಹೊರಡುವುದಾಗಿ ಹಟ ಹಿಡಿದಿದ್ದರಿಂದ ಅಬಕಾರಿ ಸಚಿವ ಗೋಪಾಲಯ್ಯನವರ ನೆರವಿನೊಂದಿಗೆ 2 ಬಸ್‌ಗಳ ವ್ಯವಸ್ಥೆ ಮಾಡಲಾಯಿತು. ಬಸ್ ವೆಚ್ಚ ಗೋಪಾಲಯ್ಯನವರೇ ಭರಿಸುವ ಭರವಸೆ ನೀಡಿದ್ದಾರೆ.
