ಬೇಡಿಕೆ ಈಡೇರಿಕೆಗೆ ಮತ್ತೆ ಕೆಎಸ್‌ಆರ್‌ಟಿಸಿ ನೌಕರರಿಂದ ಹೋರಾಟ
ಡಿ. 19ರಿಂದ ಬೆಳಗಾವಿ ಡಿಸಿ ಕಚೇರಿ ಎದುರು ಕುಟುಂಬ ಸಮೇತ ಉಪವಾಸ, ಬೇಡಿಕೆ ಈಡೇರದಿದ್ದರೆ ಜನವರಿ- ಫೆಬ್ರವರಿಯಲ್ಲಿ ಸಾರಿಗೆ ಸೇವೆ ಸ್ಥಗಿತ
ಬೆಂಗಳೂರು(ಡಿ.13): ಈ ಹಿಂದೆ ನಡೆದ ಸಾರಿಗೆ ಮುಷ್ಕರದ ವೇಳೆ ಅಮಾನತುಗೊಂಡಿರುವ 584 ನೌಕರರನ್ನು ಬೇಷರತ್ತಾಗಿ ಮರು ನೇಮಕ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಡಿ. 19ರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸದಸ್ಯರೊಂದಿಗೆ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದಾರೆ. ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ಹಿನ್ನೆಲೆಯಲ್ಲಿ ಹೋರಾಟ ಆರಂಭಿಸಲು ಉದ್ದೇಶಿಸಿದ್ದು, ಸೇವೆ ನಿಲ್ಲಿಸದೆ ವಾರದ ರಜೆ ಇರುವ ನೌಕರರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್, ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದಲ್ಲಿ ಜನವರಿ, ಫೆಬ್ರವರಿಯಲ್ಲಿ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳಿಗೆ ಸೂಕ್ತ ಬ್ರಾಂಡ್ ನೇಮ್ ನೀಡಿ: 25,000 ಬಹುಮಾನ ಗೆಲ್ಲಿ
ಸಾರಿಗೆ ಮುಷ್ಕರದ ವೇಳೆ ಅಮಾನತು ಮಾಡಿರುವ 584 ನೌಕರರನ್ನು ಬೇಷರತ್ತಾಗಿ ಪುನಃ ನೌಕರರಿಗೆ ಸೇರ್ಪಡೆ ಮಾಡಬೇಕು. ನೌಕರರು ಹಾಗೂ ಕುಟುಂಬದವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಸರ್ಕಾರದ ಇಲಾಖೆ, ನಿಗಮ-ಮಂಡಳಿಯಲ್ಲಿ ಇರುವಂತೆ ಆರನೇ ವೇತನ ಆಯೋಗದ ಮಾದರಿಯನ್ನು ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೂ ಅನ್ವಯಿಸುವಂತೆ ತಕ್ಷಣ ಆದೇಶ ಹೊರಡಿಸಬೇಕು. ಕಾರ್ಮಿಕ ಸಂಘದ ಚುನಾವಣೆ ನಡೆಸುವ ಬಗ್ಗೆ ಕ್ರಮ ವಹಿಸಬೇಕು. ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಧೋರಣೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ವರ್ಕರ್ಸ್ ಫೆಡರೇಶನ್‌ನ ಎಸ್.ನಾಗರಾಜು ಮಾತನಾಡಿ, ನಿವೃತ್ತಿ ನಂತರ ತಕ್ಷಣ ಗ್ರಾಚ್ಯೂಟಿ ಹಣ ನೀಡಬೇಕು, ಕೊರೋನಾದಿಂದ ಮೃತಪಟ್ಟನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು ಎಂಬುದು ಸೇರಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 1938 ಕಿ.ಮೀ. ಸೈಕಲ್ ಸವಾರಿ ಕೈಗೊಂಡು ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಬೇಡಿಕೆ ಪೂರ್ಣ ಪ್ರಮಾಣದಲ್ಲಿ ಈಡೇರದ ಕಾರಣ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು. ಸಾರಿಗೆ ಎಸ್ಸಿ-ಎಸ್ಟಿಅಧಿಕಾರಿಗಳ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಬ್ಯಾಟರಾಜು ಸೇರಿ ಇತರರಿದ್ದರು.