ನಿಲ್ಲದ ಸಾರಿಗೆ ಮುಷ್ಕರ: ಮತ್ತೆ 121 ನೌಕರರ ಅಮಾನತು

ಕರ್ತವ್ಯಕ್ಕೆ ಅಡ್ಡಿ: 121 ನೌಕರರ ಮೇಲೆ ಕೇಸು, 34 ಸೆರೆ| ಹಬ್ಬದ ವೇಳೆ ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ| . ನೋಟಿಸ್‌ಗೆ ಜಗ್ಗದ 300ಕ್ಕೂ ಹೆಚ್ಚು ತರಬೇತಿ ಹಾಗೂ ಪ್ರೊಬೆಷನರಿ ಅವಧಿಯ ನೌಕರರ ವಜಾ| ಅಕ್ರಮ ಮುಷ್ಕರಕ್ಕೂ ಶಿಕ್ಷೆ| 

Again 121 KSRTC Employee Suspension in Karnataka grg

ಬೆಂಗಳೂರು(ಏ.15): ಕಳೆದ ಎಂಟು ದಿನಗಳಿಂದ ಮುಷ್ಕರ ನಿರತ ಸಾರಿಗೆ ನೌಕರರ ಮನವೊಲಿಸಲು ಸರ್ಕಾರದಿಂದ ಯಾವುದೇ ಸಂಧಾನ ಮಾತುಕತೆ ನಡೆಯದ ಹಿನ್ನೆಲೆಯಲ್ಲಿ ಮುಷ್ಕರ ತೀವ್ರಗೊಳಿಸಲು ನೌಕರರು ಹೊಸ ಹೊಸ ಪ್ರಯತ್ನಗಳನ್ನು ನಡೆಸುತ್ತಿದ್ದರೆ, ಮುಷ್ಕರ ಹತ್ತಿಕ್ಕಲು ಸರ್ಕಾರ ಕಾನೂನು ಅಸ್ತ್ರ ಪ್ರಯೋಗ ಮುಂದುವರೆಸಿದೆ. ಈವರೆಗೆ ತರಬೇತಿನಿರತರನ್ನು ಅಮಾನತು ಮಾಡಿದ್ದ ಬಿಎಂಟಿಸಿ, ಬುಧವಾರ ತನ್ನ 221 ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

‘ಸಾರಿಗೆ ನೌಕರರ ಮುಷ್ಕರವನ್ನು ಕಾನೂನು ಬಾಹಿರ ಎಂದು ನಿಷೇಧಿಸಿದ್ದರೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಡಿ ಈ ಎಲ್ಲ ನೌಕರರು ಕಾನೂನು ಬಾಹಿರವಾಗಿ ಮುಷ್ಕರ ನಡೆಸುತ್ತಿದ್ದಾರೆ. ನೋಟಿಸ್‌ ನೀಡಿದರೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಇತರೆ ನೌಕರರೂ ಕರ್ತವ್ಯಕ್ಕೆ ಹಾಜರಾಗದಂತೆ ಪ್ರಚೋದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ 221 ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಬಿಎಂಟಿಸಿ ತಿಳಿಸಿದೆ.

ಬೆಳಗಾವಿಯಲ್ಲಿ ಜೋರಾಯ್ತು ಸಾರಿಗೆ ಮುಷ್ಕರ: ಚಾಲಕನಿಗೆ ಮಾಂಗಲ್ಯ ಹಾಕಲು ಮಹಿಳೆ ಯತ್ನ..!

121 ಕೇಸು:

ಸರ್ಕಾರ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿದ್ದು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 121 ಜನ ನೌಕರರ ವಿರುದ್ಧ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ), ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ(ಕೆಸ್ಮಾ), ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದ್ದು, 34 ಜನರನ್ನು ಬಂಧಿಸಿದೆ.

ಈಗಾಗಲೇ ಸಾರಿಗೆ ನೌಕರರ ಮುಷ್ಕರವನ್ನೇ ಅಕ್ರಮ ಎಂದು ಪರಿಗಣಿಸಿರುವ ಸರ್ಕಾರವು ಕಾರ್ಮಿಕ ಇಲಾಖೆ ಮೂಲಕ ಈ ಮುಷ್ಕರವನ್ನೇ ರದ್ದುಪಡಿಸಿ ಆದೇಶ ಮಾಡಿದೆ. ಇದರ ಜತೆಗೆ ವಿವಿಧ ನಿಗಮಗಳ ಮೂರು ಸಾವಿರಕ್ಕೂ ಹೆಚ್ಚು ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ಗೆ ಜಗ್ಗದ 300ಕ್ಕೂ ಹೆಚ್ಚು ತರಬೇತಿ ಹಾಗೂ ಪ್ರೊಬೆಷನರಿ ಅವಧಿಯ ನೌಕರರ ವಜಾ ಮಾಡಲಾಗಿದೆ. 52 ವರ್ಷ ಮೀರಿದ ನೌಕರರಿಗೆ ಏ.12ರೊಳಗೆ ವೈದ್ಯಕೀಯ ಹಾಗೂ ದೇಹದಾಢ್ರ್ಯ ಪ್ರಮಾಣ ಪತ್ರ ನೀಡದಿದ್ದರೆ ಖಾಯಂ ನಿವೃತ್ತಿಯ ಎಚ್ಚರಿಕೆ ನೀಡಿದೆ. ಇವೆಲ್ಲವುಗಳ ಬಳಿಕ ಇದೀಗ ಎಸ್ಮಾ ಕಾಯ್ದೆ ಅಡಿ ನೌಕರರನ್ನು ಕಟ್ಟಿಹಾಕಲು ಮುಂದಾಗಿರುವ ಸರ್ಕಾರ, 8 ನೌಕರರ ವಿರುದ್ಧ ಎಸ್ಮಾ ಹಾಗೂ 91 ಸಿಬ್ಬಂದಿ ವಿರುದ್ಧ ಕೆಸ್ಮಾ ಕಾಯ್ದೆ ಅಡಿ ಸೇರಿ ಒಟ್ಟು 121 ಜನರ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದ್ದು, 34 ಜನರನ್ನು ಬಂಧಿಸಿದೆ.

KSRTC ಖಾಸಗೀಕರಣಕ್ಕೆ ಸರ್ಕಾರ ಸಂಚು: ಡಿಕೆಶಿ

ಎಸ್ಮಾ ಪೂರ್ಣ ಪ್ರಮಾಣದ್ದಲ್ಲ:

ಅಧಿಕಾರಿಗಳು ಹೇಳುವ ಪ್ರಕಾರ ಎಸ್ಮಾ ಕಾಯ್ದೆಯನ್ನು ಸದ್ಯ ಎಲ್ಲ ನೌಕರರಿಗೂ ಅನ್ವಯಿಸುವಂತೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿಲ್ಲ. ಹಾಗೇನಾದರೂ ಜಾರಿಗೊಳಿಸಿದರೆ ಎಲ್ಲ ನೌಕರರೂ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ತಪ್ಪಿದರೆ ಅವರನ್ನು ಬಲವಂತವಾಗಿ ಕರ್ತವ್ಯಕ್ಕೆ ಹಾಜರುಪಡಿಸುವ, ಅದಕ್ಕೂ ಒಪ್ಪದಿದ್ದರೆ ಅವರ ವೇತನ, ಭತ್ಯೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ತಡೆಹಿಡಿಯಲಾಗುತ್ತದೆ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಬಹುದಾಗಿರುತ್ತದೆ. ಆದರೆ, ಈಗ ಕೇವಲ ಕರ್ತವ್ಯಕ್ಕೆ ಅಡ್ಡಿ ಸೇರಿ ಬೇರೆ ಬೇರೆ ಅಪರಾಧ ಕಾರ್ಯಗಳ ಆರೋಪ ಸಂಬಂಧ ಪ್ರತ್ಯೇಕ ನೌಕರರ ವಿರುದ್ಧ ಎಸ್ಮಾ ಹಾಗೂ ಕೆಸ್ಮಾ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದು ನೌಕರರ ಕೆಲಸಕ್ಕೆ ಅಡ್ಡಿಪಡಿಸುವ, ಬಸ್‌ಗಳ ಮೇಲೆ ದಾಳಿಯಂತಹ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಮಾಡಲಾಗಿದೆ.

ಅಕ್ರಮ ಮುಷ್ಕರಕ್ಕೂ ಶಿಕ್ಷೆ:

ಕಾರ್ಮಿಕ ಇಲಾಖೆ ಮುಷ್ಕರ ನಿಷೇಧಿಸಿರುವ ಕಾರಣ ಸದ್ಯ ಸಾರಿಗೆ ನೌಕರರ ಮುಷ್ಕರ ಅಕ್ರಮ ಎಂದು ಪ್ರತಿಪಾದಿಸಲಾಗುತ್ತಿದೆ. ಎಸ್ಮಾ ಮತ್ತು ಕೆಸ್ಮಾ ಅಡಿ ಅಕ್ರಮ ಮುಷ್ಕರ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಅದೇ ರೀತಿ ಮುಷ್ಕರಕ್ಕೆ ಆರ್ಥಿಕ ನೆರವು ಮತ್ತು ಕುಮ್ಮಕ್ಕು ನೀಡಿದವರ ವಿರುದ್ಧವೂ ಪ್ರಕರಣ ದಾಖಲಿಸಿ ಶಿಕ್ಷೆ ವಿಧಿಸಬಹುದಾಗಿದೆ.

ಹಬ್ಬದ ವೇಳೆ ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ

ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ಮುಂದುವರೆದಿರುವುದರಿಂದ ಯುಗಾದಿ ಹಬ್ಬದ ಸಂದರ್ಭದಲ್ಲೂ ಪ್ರಯಾಣಿಕರು ಸಮರ್ಪಕ ಸಾರಿಗೆ ಸೌಲಭ್ಯಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ಬಸ್ಸುಗಳ ನಡುವೆಯೂ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ಸಂಚರಿಸಿದರೂ ಹಬ್ಬದ ದಿನಗಳಾದ ಮಂಗಳವಾರ ಮತ್ತು ಬುಧವಾರ ತಮ್ಮ ಊರುಗಳಿಗೆ ತೆರಳಿದ ಮತ್ತು ಮರಳಿದ ಪ್ರಯಾಣಿಕರಿಗೆ ಸೂಕ್ತ ಸಾರಿಗೆ ಸೌಲಭ್ಯ ದೊರೆಯದೆ ಪರದಾಡಬೇಕಾಯಿತು.

ಎಲ್ಲ ಭಾಗಗಳಿಗೂ ಖಾಸಗಿ ಬಸ್ಸುಗಳ ಸಂಚರಿಸದ ಕಾರಣ ಹಾಗೂ ಸಾರಿಗೆ ನಿಗಮದ ಬಸ್ಸುಗಳಂತೆ ನಿಗದಿತ ಸಮಯಕ್ಕೆ ನಿರ್ದಿಷ್ಟಸಂಖ್ಯೆಯ ಬಸ್ಸುಗಳ ಕಾರ್ಯಾಚರಣೆ ಇಲ್ಲದ ಕಾರಣ ಗಂಟೆಗಳ ಕಾಲ ನಿಲ್ದಾಣಗಳಲ್ಲೇ ಬಸ್ಸುಗಳಿಗಾಗಿ ಕಾಯುವ ಸ್ಥಿತಿ ಉಂಟಾಗಿತ್ತು.
 

Latest Videos
Follow Us:
Download App:
  • android
  • ios