ಬೆಂಗಳೂರು(ಜ.17):  ಕೊರೋನಾ ಲಸಿಕೆಗಳು ಎಷ್ಟುಅವಧಿಯವರೆಗೆ ರೋಗ ನಿರೋಧಕ ಸಾಮರ್ಥ್ಯ ನೀಡಲಿವೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಈ ಬಗ್ಗೆ ಅಧ್ಯಯನದ ಅಗತ್ಯವಿದೆ ಎಂದು ಮಣಿಪಾಲ್‌ ಆಸ್ಪತ್ರೆಗಳ ಮುಖ್ಯಸ್ಥ ಡಾ. ಎಚ್‌. ಸುದರ್ಶನ್‌ ಬಲ್ಲಾಳ್‌ ಹೇಳಿದ್ದಾರೆ.

ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಕೊಟ್ಟಬಳಿಕ ರೋಗ ನಿರೋಧಕ ಶಕ್ತಿ ಬರುತ್ತದೆ ಅನ್ನುವುದು ಗೊತ್ತಿದೆ. ಆದರೆ ಎಷ್ಟುದಿನ ಅದು ದೇಹದಲ್ಲಿ ಉಳಿಯುತ್ತದೆ ಗೊತ್ತಿಲ್ಲ. ಅದಕ್ಕೆ ದೀರ್ಘ ಕಾಲದ ಅಧ್ಯಯನದ ಅಗತ್ಯವಿದೆ. ಸಾಮಾನ್ಯ ಜ್ವರದ ಲಸಿಕೆ ಕೂಡ ಒಂದು ವರ್ಷದ ಅವಧಿ ಪರಿಣಾಮ ಇರುತ್ತದೆ. ಕೊರೋನಾ ಲಸಿಕೆ ಪ್ರಭಾವ ಎಷ್ಟಿರುತ್ತದೆ ಎಂಬುದನ್ನು ಇನ್ನು ಕಂಡುಕೊಳ್ಳಬೇಕಿದೆ ಎಂದರು.

ಇದೇ ವೇಳೆ ಲಸಿಕೆ ಪಡೆದುಕೊಳ್ಳುವವರು ಆಲ್ಕೋಹಾಲ್‌ (ಮದ್ಯ) ಸೇವಿಸದಂತೆ ಪರೋಕ್ಷವಾಗಿ ಎಚ್ಚರಿಕೆಯನ್ನು ಅವರು ನೀಡಿದರು. ಲಸಿಕೆ ಪಡೆಯುವವರಿಗೆ ಮದ್ಯ ತೆಗೆದುಕೊಳ್ಳಬಹುದು ಎಂಬ ಸಲಹೆಯನ್ನು ನಾನಂತೂ ನೀಡುವುದಿಲ್ಲ. ಆದರೆ, ಕೋವಿಡ್‌ ಲಸಿಕೆ ತೆಗೆದುಕೊಂಡ ನಂತರವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ, ಆಗಾಗ ಸೋಪಿನಿಂದ ಕೈತೊಳೆದುಕೊಳ್ಳುವುದು ಮತ್ತು ಮುಖಗವುಸು ಧರಿಸುವುದನ್ನು ಮರೆಯಬಾರದು ಎಂದರು.

ಲಸಿಕೆ ಪಡೆದ 23 ಮಂದಿ ಸಾವು, ನಡುಗಿದ ನಾರ್ವೆ: ಬೆಲ್ಜಿಯಂನಲ್ಲೂ ಒಂದು ಸಾವು! .

ಲಸಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅವಕಾಶ ಬಂದಾಗ ಎಲ್ಲರೂ ಈ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಹೀಗೆ ಮಾಡಿದರೆ ಕೊರೋನಾವನ್ನು ದೇಶದಿಂದ ಓಡಿಸಬಹುದು. ಕೂಡಲೇ ಈ ಕಾರ್ಯ ಆಗುವುದಿಲ್ಲ ನಿಜ. ಆದರೆ ಕ್ರಮೇಣ ಕೊರೋನಾ ನಿರ್ಮೂಲನೆಯಾಗಲಿದೆ. ಈ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ದೇಶದಲ್ಲೇ ತಯಾರಿಸಿದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ಬಂದಿದ್ದು, ತಜ್ಞರು ಸಾಕಷ್ಟುಪರೀಕ್ಷೆಗೆ ಒಳಪಡಿಸಿದ್ದಾರೆ. ಕೊರೋನಾ ಸೋಂಕಿನ ವಿರುದ್ಧ ಲಸಿಕೆ ಉತ್ತಮವಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಂಡು ಇದೀಗ ಕೊರೋನಾ ವಾರಿಯ​ರ್‍ಸ್ಗೆ ಮೊದಲ ಹಂತದಲ್ಲಿ ಲಸಿಕೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ದೇಶದಲ್ಲಿ ಲಸಿಕೆಯನ್ನು ಅಧಿಕೃತವಾಗಿ ಬಳಕೆ ಮಾಡಿದ್ದೇವೆ. ಈ ದಿನವೇ ಲಸಿಕೆ ಪಡೆಯುವ ಭಾಗ್ಯ ನನ್ನದಾಗಿದ್ದು, ನಾನು ಬಹಳ ಭಾಗ್ಯವಂತ ಎಂದು ಎಣಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.