ರೋಹಿಣಿ, ಶಿಲ್ಪಾನಾಗ್ ಇಬ್ಬರೂ ಎತ್ತಂಗಡಿ!
* ರೋಹಿಣಿ, ಶಿಲ್ಪಾನಾಗ್ ಇಬ್ಬರೂ ಎತ್ತಂಗಡಿ
* ಮೈಸೂರು ಡೀಸಿ, ಪಾಲಿಕೆ ಆಯುಕ್ತೆ ರಾತ್ರೋರಾತ್ರಿ ವರ್ಗಾವಣೆ
* ಐಎಎಸ್‌ಗಳ ತಿಕ್ಕಾಟಕ್ಕೆ ಸರ್ಕಾರದ ಬ್ರೇಕ್
* ಮೈಸೂರಿಗೆ ಬಗಾದಿ ಗೌತಮ್ ಹೊಸ ಜಿಲ್ಲಾಧಿಕಾರಿ
* ಮಹಾನಗರ ಪಾಲಿಕೆಗೆ ಲಕ್ಷ್ಮೇಕಾಂತ್ ರೆಡ್ಡಿ ಹೊಸ ಆಯುಕ್ತ
ಬೆಂಗಳೂರು(ಜೂ.06): ರಾಜಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ತಿಕ್ಕಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ತೆರೆ ಎಳೆದಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಶನಿವಾರ ತಡರಾತ್ರಿ ವರ್ಗಾವಣೆ ಮಾಡಿದೆ.
ರೋಹಿಣಿ ಸಿಂಧೂರಿ ಬಗ್ಗೆ ಒಂದು ಮಾತು ಹೇಳಿದ ಪ್ರಜ್ವಲ್ ರೇವಣ್ಣ
ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ. ಶಿಲ್ಪಾ ನಾಗ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕರ್ನಾಗಿ ನೇಮಿಸಿ ವರ್ಗಾಯಿಸಲಾಗಿದೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕರ್ತವ್ಯ ನಿರ್ವಹಣೆಯಲ್ಲಿ ತಮಗೆ ಕಿರುಕುಳ ನೀಡುತ್ತಿದ್ದಾರೆ, ಅವರು ನೀಡುತ್ತಿರುವ ಕಿರುಕುಳ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿ ಶಿಲ್ಪಾ ರಾಜೀನಾಮೆ ಘೋಷಿಸಿದ್ದರು. ಇದರ ಬೆನ್ನಲ್ಲೇ ಶಿಲ್ಪಾ ನಾಗ್ ಅವರು ಸಿಎಸ್‌ಆರ್ ಅನುದಾನ ಬಳಕೆಯ ಲೆಕ್ಕ ನೀಡಿಲ್ಲ, ಕೊರೋನಾ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ದೂರಿದ್ದರು.
ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಈ ತಿಕ್ಕಾಟ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ, ದೇಶಾದ್ಯಂತ ಸುದ್ದಿಯಾಗಿತ್ತು. ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಖುದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೈಸೂರಿಗೆ ತೆರಳಿ ವರದಿ ಪಡೆದಿದ್ದರು. ಇದರ ಪರಿಣಾಮ ಶನಿವಾರ ತಡರಾತ್ರಿ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಇಬ್ಬರನ್ನೂ ವರ್ಗಾವಣೆ ಮಾಡಲಾಗಿದೆ.
ಐಎಎಸ್ ಅಧಿಕಾರಿಗಳ ಜಟಾಪಟಿ: ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಗಂಭೀರ ಆರೋಪ
ಶನಿವಾರ ತಡರಾತ್ರಿ ಹೊರಬಿದ್ದಿರುವ ಆದೇಶದಲ್ಲಿ ಒಟ್ಟು ಐದು ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿದ್ದ ಎಸ್.ರಾಜೇಂದ್ರ ಚೋಳನ್ ಅವರನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದ್ದು, ಹೆಚ್ಚುವರಿಯಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಹುದ್ದೆಯಲ್ಲೂ ಮುಂದುವರೆಯಲು ತಿಳಿಸಲಾಗಿದೆ.
ಗೌತಮ್ ಮೈಸೂರು ನೂತನ ಜಿಲ್ಲಾಧಿಕಾರಿ:
ರೋಹಿಣಿ ಸಿಂಧೂರಿ ವರ್ಗಾವಣೆಯಿಂದ ತೆರವಾದ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಗೌತಮ್ ಬಗಾದಿ ಅವರನ್ನು ನೇಮಿಸಲಾಗಿದೆ. ಕರ್ನಾಟಕ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಿ.ಲಕ್ಷ್ಮೇಕಾಂತ್ ರೆಡ್ಡಿ ಅವರನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
ಮೈಸೂರಲ್ಲಿ IAS ಸಮರ : ಖರ್ಚಾದ CSR ಫಂಡ್ ಲೆಕ್ಕ ಕೇಳಿದ್ರಂತೆ ರೋಹಿಣಿ
ರೋಹಿಣಿ ಸಿಂಧೂರಿ ಸುತ್ತ ವಿವಾದಗಳು:
ಮೈಸೂರು ಜಿಲ್ಲಾಧಿಕಾರಿ ಹುದ್ದೆ ನಿರ್ವಹಣೆ ವೇಳೆ ರೋಹಿಣಿ ಸಿಂಧೂರಿ ಈ ಹಿಂದೆಯೇ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಮುಖ್ಯವಾಗಿ ಚಾಮರಾಜನಗರದಲ್ಲಿ ಸಂಭವಿಸಿದ್ದ ಆಮ್ಲಜನಕ ಕೊರತೆಯಿಂದ 24 ಮಂದಿ ಕೊರೋನಾ ಸೋಂಕಿತರು ಮೃತಪಟ್ಟದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಸಕಾಲಕ್ಕೆ ಆಮ್ಲಜನಕ ನೀಡದೆ ತಡೆದಿದ್ದೇ ಕಾರಣ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಿಸಿದ್ದರು.
ರೋಹಿಣಿ ಸಿಂಧೂರಿ VS ಶಿಲ್ಪಾ ನಾಗ್: ಈವರೆಗೆ ಏನೇನಾಯ್ತು? ಎಲ್ಲಾ ಅಪ್ಡೇಟ್ಸ್ ಒಂದೇ ಕ್ಲಿಕ್‌ನಲ್ಲಿ
ಕೊರೋನಾ ನಿರ್ವಹಣೆಗಾಗಿ ಮಾಡಿರುವ ಹಣದ ವೆಚ್ಚವೂ ವಿವಾದಕ್ಕೆ ಗುರಿಯಾಗಿದ್ದು, ಸಂಸದ ಪ್ರತಾಪ್‌ಸಿಂಹ ಅವರು ಜಿಲ್ಲಾಧಿಕಾರಿಗಳು ಹಣದ ಲೆಕ್ಕ ನೀಡಬೇಕು ಎಂದು ಬಹಿರಂಗವಾಗಿ ಒತ್ತಾಯಿಸಿದ್ದರು. ಈ ವೇಳೆ ಹಣದ ಲೆಕ್ಕ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸಂಸದರಿಗೆ ತಿರುಗೇಟು ನೀಡುವ ಮೂಲಕ ವಿವಾದಕ್ಕೆ ಒಳಗಾಗಿದ್ದರು. ಅಲ್ಲದೆ ಕೊರೋನಾ ಸಂಕಷ್ಟದಲ್ಲಿ 25 ಲಕ್ಷ ರು. ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಜಿಲ್ಲಾಧಿಕಾರಿ ಹುದ್ದೆ ನಿರ್ವಹಣೆ ವೇಳೆ ಜನಪ್ರತಿನಿಧಿಗಳು ಮಾತ್ರವಲ್ಲ ಸಹದ್ಯೋಗಿ ಅಧಿಕಾರಿಗಳ ಜತೆಗೂ ಹಲವು ಬಾರಿ ಜಟಾಪಟಿ ನಡೆಸಿ ರೋಹಿಣಿ ವಿವಾದದಲ್ಲಿ ಸಿಲುಕಿದ್ದರು.