ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ಪ್ರಾಧಿಕಾರದಿಂದಲೇ ದೂರು, ಮೈಸೂರಿನ ಯುವತಿ ವಶಕ್ಕೆ ಫಲಿತಾಂಶಕ್ಕೆ ತಡೆ ಹಿಡಿದು ಮರು ಪರೀಕ್ಷೆಗೆ ಆಗ್ರಹ

ಬೆಂಗಳೂರು(ಏ.25): ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗವಾದ ಬೆನ್ನಲ್ಲೇ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ಮಾಚ್‌ರ್‍ನಲ್ಲಿ ನಡೆಸಿದ ರಾಜ್ಯ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲೂ ಭಾರೀ ಅಕ್ರಮ ನಡೆದಿರುವ ವಾಸನೆ ಹರಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ (ಕೆಇಎ) ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದಡಿ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

PSI Recruitment Scam ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆಗೆ ಸಿಐಡಿ ನೋಟಿಸ್

ಈ ಸಂಬಂಧ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಾಟ್ಸಾಪ್‌ನಲ್ಲಿ ಹಲವರಿಗೆ ಪ್ರಶ್ನೆ ಪತ್ರಿಕೆ ಫಾವರ್ಡ್‌ ಮಾಡಿದ ಆರೋಪದಡಿ ಮೈಸೂರು ಮೂಲದ ಸೌಮ್ಯಾ(32) ಎಂಬ ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಶ್ನೆ ಪತ್ರಿಕೆ ನೀಡಿದವರು ಯಾರು? ಎಷ್ಟುಮಂದಿಗೆ ಪ್ರಶ್ನೆ ಪತ್ರಿಕೆ ಫಾವರ್ಡ್‌ ಮಾಡಲಾಗಿದೆ? ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್‌ ಪಿನ್‌ ಯಾರು ಎಂಬುದು ಸೇರಿದಂತೆ ಪಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆಗೆ ಪೊಲೀಸರು ಕೈ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂಬಂಧದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 2022ರ ಮಾ.14ರಂದು ನಡೆದ ಭೂಗೋಳಶಾಸ್ತ್ರದ ವಿಷಯದ ಪ್ರಶ್ನೆ ಪತ್ರಿಕೆಯ 18 ಪ್ರಶ್ನೆಗಳು ಪರೀಕ್ಷೆ ಆರಂಭಕ್ಕೂ ಮುನ್ನ ಸೌಮ್ಯಾ ಎಂಬಾಕೆಯ ಮೊಬೈಲ್‌ನ ವಾಟ್ಸಾಪ್‌ನಿಂದ ಬೇರೆ ಬೇರೆ ಮೊಬೈಲ್‌ಗೆ ರವಾನೆಯಾಗಿರುವ ಬಗ್ಗೆ ದೂರು ಬಂದಿದೆ. ಸೌಮ್ಯಾಳ ವಾಟ್ಸಾಪ್‌ನಿಂದ ಫಾವರ್ಡ್‌ ಆಗಿರುವ 4 ಇಮೇಜ್‌ಗಳಲ್ಲಿ 18 ಬಹು ಆಯ್ಕೆ ಮಾದರಿಯ ಉತ್ತರ ಸಹಿತ ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿ ಯಥಾವತ್ತಾಗಿವೆ. ಹೀಗಾಗಿ ಸೌಮ್ಯಾ ಹಾಗೂ ಇತರರು ಸೇರಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ದೂರಿನಲ್ಲಿ ಕೋರಿದ್ದಾರೆ.

PSI Scam : ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಿಐಡಿ ಮತ್ತೊಂದು ಬೇಟೆ

ಅಭ್ಯರ್ಥಿಗಳು ಈಗಾಗಲೇ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ವೇಳೆ ಭೂಗೋಳ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಕ್ಕೆ ಸಂಬಂಧಿಸಿದ ಹಲವು ದಾಖಲೆಗಳ ಸಹಿತ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಪೊಲೀಸರಿಗೆ ದೂರು ನೀಡಿದೆ.

ಆದರೆ, ಇದು ಯಾರೋ ಒಬ್ಬರಿಂದ ಆಗಿರುವ ಅಕ್ರಮವಾಗಿರಲು ಸಾಧ್ಯವೇ ಇಲ್ಲ. ಪ್ರಶ್ನೆ ಪತ್ರಿಕೆ ತಯಾರಕರಿಂದ ಹಿಡಿದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಉನ್ನತ ಶಿಕ್ಷಣ ಇಲಾಖೆ ಕೈಗಳೂ ಆಟ ಆಡಿರುವ ಸಾಧ್ಯತೆಗಳಿವೆ. ಹಾಗಾಗಿ ಸರ್ಕಾರ ಈ ಪ್ರಕರಣವನ್ನು ಸಿಐಡಿ ಅಥವಾ ಇನ್ಯಾವುದೇ ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂಬುದು ಅಭ್ಯರ್ಥಿಗಳ ಆಗ್ರಹವಾಗಿವೆ.

ಈ ಮಧ್ಯೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹೊರಗೆ ಬಿದ್ದಿರುವುದು ಭೂಗೋಳಶಾಸ್ತ್ರ ವಿಷಯದ್ದು ಮಾತ್ರ. ಆದರೆ, ಈ ವಿಷಯದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಬೆರಳೆಣಿಕೆಯಷ್ಟುಹುದ್ದೆಗಳು. ಅಷ್ಟುಕಡಿಮೆ ಹುದ್ದೆಗಳ ವಿಷಯದ ಪ್ರಶ್ನೆ ಪತ್ರಿಕೆಯೇ ಸೋರಿಕೆಯಾಗಿರುವಾಗ ವಾಣಿಜ್ಯ ವಿಷಯ ಸೇರಿದಂತೆ ಎಲ್ಲ ವಿಷಯಗಳಲ್ಲಿ ಒಟ್ಟು 1200 ಹುದ್ದೆಗಳಿಗೆ ಪರೀಕ್ಷೆ ನಡೆದಿದೆ. ಹಾಗಾಗಿ ಇತರೆ ವಿಷಯಗಳ ಪ್ರಶ್ನೆ ಪತ್ರಿಕೆಗಳೂ ವ್ಯವಸ್ಥಿತವಾಗಿ ಇದೇ ರೀತಿ ಸೋರಿಕೆಯಾಗಿ ಅಕ್ರಮ ನಡೆದಿರಬಹುದು. ಹಾಗಾಗಿ ಸರ್ಕಾರ ತನಿಖೆಯನ್ನು ಕೇವಲ ಒಂದು ವಿಷಯಕ್ಕೆ ಸೀಮಿತಗೊಳಿಸದೇ, ಎಲ್ಲ ವಿಷಯಗಳ ಪರೀಕ್ಷೆಗೂ ತನಿಖೆ ನಡೆಸಬೇಕು ಎಂದು ಹೆಸರು ಹೇಳಲು ಇಷ್ಟಪಡದ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳು ಹೇಳುತ್ತಿದ್ದಾರೆ.

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿಗೆ 2022ರ ಮಾಚ್‌ರ್‍ 12 ರಿಂದ 16ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.

ಸಿಐಡಿ ತನಿಖೆಗೆ ಆಗ್ರಹಿಸಿ ಸಿಎಂಗೂ ದೂರು!
ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಅಕ್ರಮದ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡ ಮಾಲಿ ಪಾಟೀಲ್‌ ಎಂಬುವರು ದೂರು ಸಲ್ಲಿಸಿದು,್ದ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಫಲಿತಾಂಶಕ್ಕೆ ತಡೆ ಹಿಡಿದು ಮರು ಪರೀಕ್ಷೆಗೆ ಆಗ್ರಹ
ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಬಹಿರಂಗವಾಗಿರುವುದರಿಂದ, ತಕ್ಷಣ ಫಲಿತಾಂಶ ತಡೆಹಿಡಿದು, ಮರು ಪರೀಕ್ಷೆ ಮಾಡಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದೂರು ನೀಡಿರುವ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರಶ್ನೆ ಪತ್ರಿಕೆ ಗೊಂದಲ, ವೆಬ್‌ಸೈಟ್‌ನಿಂದ ಪ್ರಶ್ನೆ ಪತ್ರಿಕೆಯನ್ನು ಕದ್ದಿರುವುದು ಎಲ್ಲವನ್ನೂ ಕೆಇಎಗೆ ಆಕ್ಷೇಪಣೆ ಮೂಲಕ ಸಲ್ಲಿಸಿದ್ದೇವೆ. ಅವರು ದೂರನ್ನು ಪೊಲೀಸರಿಗೆ ವರ್ಗಾಯಿಸಿ ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ತನಿಖೆ ಮುಗಿಯುವವರೆಗೆ ಫಲಿತಾಂಶ ನೀಡಬಾರದು. ತನಿಖೆ ಆಧರಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಹಗರಣ?
2022ರ ಮಾ.14ರಂದು ನಡೆದ ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆಯ 18 ಪ್ರಶ್ನೆಗಳು ಪರೀಕ್ಷೆ ಆರಂಭಕ್ಕೂ ಮುನ್ನ ಸೌಮ್ಯಾ ಎಂಬಾಕೆಯ ಮೊಬೈಲ್‌ನ ವಾಟ್ಸಾಪ್‌ನಿಂದ ಬೇರೆ ಬೇರೆ ಮೊಬೈಲ್‌ಗೆ ರವಾನೆಯಾಗಿದೆ. ಫಾವರ್ಡ್‌ ಆಗಿರುವ 18 ಬಹು ಆಯ್ಕೆ ಮಾದರಿಯ ಉತ್ತರ ಸಹಿತ ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿ ಯಥಾವತ್ತಾಗಿವೆ. ಈ ಕುರಿತು ಕ್ರಮ ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯಾರಿಂದ ದೂರು ಸಲ್ಲಿಕೆ