Asianet Suvarna News Asianet Suvarna News

ಆಟೋ ಕನಿಷ್ಠ ಪ್ರಯಾಣ ದರ ಇನ್ನು 30 ರುಪಾಯಿ: 9 ವರ್ಷದ ಬಳಿಕ ಪರಿಷ್ಕರಣೆ!

* ಬೆಂಗಳೂರು ನಾಗರಿಕರಿಗೆ ಮತ್ತೊಂದು ಹೊರೆ

* ಆಟೋ ಕನಿಷ್ಠ ಪ್ರಯಾಣ ದರ ಇನ್ನು 30 ರುಪಾಯಿ

* ಪ್ರತಿ ಕಿ.ಮೀ. ಬಾಡಿಗೆ 13ರಿಂದ 15 ರು.ಗೆ ಏರಿಕೆ

* 9 ವರ್ಷದ ಬಳಿಕ ಪರಿಷ್ಕರಣೆ, ಡಿ.1ರಿಂದ ಜಾರಿ

After 9 years Bengaluru auto fares to go up from December 1 pod
Author
Bangalore, First Published Nov 9, 2021, 7:10 AM IST
  • Facebook
  • Twitter
  • Whatsapp

ಬೆಂಗಳೂರು(ನ.09): ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜಧಾನಿ ಬೆಂಗಳೂರಿನ (Bengaluru) ನಾಗರಿಕರು ಇನ್ನು ಮುಂದೆ ಆಟೋ ಪ್ರಯಾಣ (Auto Travel) ದರದ ಹೊರೆ ಹೊರಬೇಕಾಗಿದೆ.

ನಗರದಲ್ಲಿ ಒಂಬತ್ತು ವರ್ಷಗಳ ನಂತರ ಆಟೋ ಪ್ರಯಾಣ ದರ (Auto Fares) ಹೆಚ್ಚಳಗೊಂಡಿದ್ದು, 1.8 ಕಿ.ಮೀ. ದೂರದವರೆಗೂ ಕನಿಷ್ಠ ಪ್ರಯಾಣ ದರದ ಮೊತ್ತವನ್ನು 25 ರು.ಗಳಿಂದ 30 ರು.ಗಳಿಗೆ ಏರಿಕೆ ಮಾಡಲಾಗಿದೆ. ಡಿ.1ರಿಂದ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೆ ಬರಲಿದೆ.

ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿ.ಮೀ.ದರವನ್ನು 13ರಿಂದ 15 ರು.ಗಳಿಗೆ ಹೆಚ್ಚಿಸಲಾಗಿದೆ. ಕಾಯುವಿಕೆಯ ದರ ಮೊದಲ 5 ನಿಮಿಷ ಉಚಿತವಾಗಿರಲಿದೆ. ಆನಂತರ ಪ್ರತಿ 15 ನಿಮಿಷಕ್ಕೆ 5 ರು. ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ. 20 ಕೆ.ಜಿ.ಯಿಂದ 50 ಕೆ.ಜಿ.ವರೆಗೆ 5 ರು. ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಆಟೋ ಪ್ರಯಾಣ ದರ ಸಾಮಾನ್ಯ ದರ ಜತೆಗೆ ಅರ್ಧ ಪಟ್ಟು ಹೆಚ್ಚಳವಾಗಲಿದೆ ಎಂದು ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದ್ದಾರೆ.

ಆಟೋ ದರ ಹೆಚ್ಚಳ : ಸಂಘಟನೆಗಳಲ್ಲೇ ಒಡಕು

ಈ ಕುರಿತು ಹೊರಡಿಸಿರುವ ಆದೇಶದಲ್ಲಿ ಅವರು, ದರಗಳ ವಿವರವನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ನಿರ್ದೇಶಿಸಿದ್ದಾರೆ.

90 ದಿನದಲ್ಲಿ ಮೀಟರ್‌ ಪರಿಷ್ಕರಣೆ:

ಆಟೋ ಪ್ರಯಾಣ ದರದಲ್ಲಿ ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ತಮ್ಮ ಆಟೋಗಳ ಮೀಟರ್‌ಗಳಿಗೆ 2022 ಫೆಬ್ರವರಿ 28 ರೊಳಗೆ ಪುನಃ ಸಾರಿಗೆ ಅಧಿಕಾರಿಗಳಿಂದ ಪ್ರಮಾಣೀಕರಿಸಿಕೊಂಡು ಮುದ್ರೆ ಹಾಕಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ಬೆಲೆ ಏರಿಕೆ ಕಾರಣ ದರ ಪರಿಷ್ಕರಣೆ:

ಆಟೋ ರಿಕ್ಷಾಗಳ ಬೆಲೆಯಲ್ಲಿ 2013ಕ್ಕೆ ಹೋಲಿಕೆ ಮಾಡಿದಲ್ಲಿ ಸುಮಾರು .85 ಸಾವಿರ ಹೆಚ್ಚಳವಾಗಿದೆ. ನೋಂದಣಿ ಶುಲ್ಕ, ಅರ್ಹತಾ ಪತ್ರ ನವೀಕರಣ, ವಾಹನದ ವಿಮೆ, ಆಟೋ ಗ್ಯಾಸ್‌, ಬಿಡಿ ಭಾಗಗಳು, ದಿನ ಬಳಕೆ ವಸ್ತುಗಳಲ್ಲಿ ಶೇ.100ರಿಂದ 200ರವರೆಗೂ ಹೆಚ್ಚಳವಾಗಿದೆ. ಈ ಅಂಶಗಳನ್ನು ಪರಿಗಣಿಸಿ ಆಟೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಅಲ್ಲದೆ, ರಾಜ್ಯದ ಇತರೆ ಮಹಾನಗರಗಳಲ್ಲಿನ ಆಟೋ ಪ್ರಯಾಣ ದರವನ್ನು ಪರಿಶೀಲನೆ ಮಾಡಲಾಗಿದೆ. ಮಂಗಳೂರು ಸೇರಿದಂತೆ ಕೆಲ ನಗರಗಳಲ್ಲಿ ಬೆಂಗಳೂರು ನಗರಕ್ಕಿಂತಲೂ ಹೆಚ್ಚಿನ ದರ ನಿಗದಿ ಮಾಡಲಾಗಿದೆ. ಈ ಅಂಶಗಳನ್ನು ಪರಿಗಣಿಸಿ ಬೆಲೆ ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ಪರಿಷ್ಕೃತ ದರ ಎಷ್ಟು?

ಆಟೋ ದರ ಪ್ರಸ್ತುತ ಪರಿಷ್ಕೃತ (ರು.ಗಳಲ್ಲಿ)
ಕನಿಷ್ಠ ದರ 25 30
2ಕಿ.ಮೀ ಬಳಿಕ (ಪ್ರತಿ ಕಿ.ಮೀ.ಗೆ) 13 15
ಕಾಯುವಿಕೆ 5 ನಿಮಿಷದ ಬಳಿಕ 5 5
ಲಗೇಜು 40 ಕೆ.ಜಿ.ಗೆ ಮೇಲ್ಪಟ್ಟು 2 5

(ಗರಿಷ್ಠ ಲಗೇಜು 50 ಕೆಜಿ)

ಹೋಟೆಲ್‌ ತಿನಿಸು ಶೇ.10 ದುಬಾರಿ

 

ಕೊರೋನಾದಿಂದ ಹೋಟೆಲ್‌ ಉದ್ಯಮ (Hotel Business) ಆರ್ಥಿಕ ಸಂಕಷ್ಟಕ್ಕೆ ತಲುಪಿದೆ. ಆದರೆ, ಕೊರೋನಾ ಬಳಿಕೆ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವ ಹಂತದಲ್ಲಿ ಕಳೆದ ಆರು ತಿಂಗಳಿನಿಂದ ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ (Commercial gas Cylinder) ಬೆಲೆ ಹೆಚ್ಚಾಗಿದೆ. ಹೀಗಾಗಿ ಇನ್ನಷ್ಟು ಆರ್ಥಿಕ ತೊಂದರೆಗೆ (Financial Crisis) ಸಿಲುಕುವ ಮುನ್ನ ಅನಿವಾರ್ಯವಾಗಿ ಊಟ, ತಿಂಡಿ ಮತ್ತು ಕಾಫಿ ಬೆಲೆಗಳಲ್ಲಿ ಶೇ.5ರಿಂದ 10ರವರೆಗೂ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಿದ್ದೇವೆ ಎಂದು ರಾಜ್ಯ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಚಂದ್ರಶೇಖರ ಹೆಬ್ಬಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬಹುತೇಕ ಹೊಟೇಲ್‌ಗಳಲ್ಲಿ ಸೋಮವಾರದಿಂದಲೇ ದರ ಏರಿಕೆಯಾಗಲಿದೆ. ಕೆಲವು ಹೋಟೆಲ್‌ ಮಾಲೀಕರು ಮಾತ್ರ ಒಂದು ವಾರದ ನಂತರ ದರ ಏರಿಸಲು ನಿರ್ಧರಿಸಿದ್ದಾರೆ. ಅಯಾ ಹೋಟೆಲ್‌ಗಳು ನಿಗದಿಪಡಿಸಿರುವ ದರದ ಮೇಲೆ ಶೇ. 5-10ರಷ್ಟುಜಾಸ್ತಿಯಾಗಲಿದೆ ಎಂದರು.

ಪ್ರಸ್ತುತ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ (Gas Cylinder) ಬೆಲೆ 2 ಸಾವಿರ ರು. ತಲುಪಿದೆ. ಅದಕ್ಕೆ ಶೇ.18 ರಷ್ಟು ಸರಕು ಮತ್ತು ಸಾಗಣೆ(GST) ತೆರಿಗೆ ವಿಧಿಸಲಾಗುತ್ತಿದ್ದು, ಪ್ರತಿ ಸಿಲಿಂಡರ್‌ಗೆ 2,230 ರು. ಪಾವತಿ ಮಾಡುತ್ತಿದ್ದೇವೆ. ಅಲ್ಲದೆ, ಎಲ್ಲ ರೀತಿಯ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. 50 ರು.ಗಳಿಗಿಂತ ಕಡಿಮೆ ಬೆಲೆಯಲ್ಲಿ ಯಾವುದೇ ತರಕಾರಿ ಸಿಗುತ್ತಿಲ್ಲ ಇದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ನಗರದಲ್ಲಿ 9 ಸಾವಿರ ಹೋಟೆಲ್‌ಗಳು ಸೇರಿ ರಾಜ್ಯದಲ್ಲಿ ಸುಮಾರು 50 ಸಾವಿರ ಹೋಟೆಲ್‌ಗಳಿವೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಹೋಟೆಲ್‌ ತಿಂಡಿಗಳ ಮೇಲೆ ಬೆಲೆ ಏರಿಕೆಯಾಗಿಲ್ಲ. ಪ್ರಸ್ತುತ ಬೆಲೆ ಏರಿಕೆ (Price Hike) ಮಾಡುವುದಕ್ಕೂ ಹೋಟೆಲ್‌ ಮಾಲೀಕರಲ್ಲಿ ಧೈರ್ಯ ಇಲ್ಲ. ಆದರೆ, ಇಂಧನ ಬೆಲೆ ಹೆಚ್ಚಳ ಮತ್ತು ಕಳೆದ ಕೆಲ ತಿಂಗಳಿಂದ ದಿನಸಿ, ತರಕಾರಿ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ನಷ್ಟಸರಿದೂಗಿಸುವುದಕ್ಕಾಗಿ ಬೆಲೆ ಏರಿಕೆ ಮಾಡುವುದಕ್ಕೆ ನಿರ್ಧಾರ ಮಾಡಿರುವುದಾಗಿ ಅವರು ವಿವರಿಸಿದರು.

Follow Us:
Download App:
  • android
  • ios