ಬೆಂಗಳೂರು(ಅ.29): ಮುಖಕ್ಕೆ ಪೆಪ್ಪರ್‌ ಸ್ಪ್ರೇ ಹೊಡೆದ ದಕ್ಷಿಣ ಆಫ್ರಿಕಾ ದೇಶದ ಪ್ರಜೆಗಳು 15 ಲಕ್ಷ ದೋಚಿಕೊಂಡು ಹೋಗಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಅಪ್ಪಲ್‌ ನಾಯ್ಡು, ಭವಾನಿ ವಂಚನೆಗೊಳಗಾದವರು. ದ.ಆಫ್ರಿಕಾ ಮೂಲದ ಪೌಲ್‌, ಲೋಯಿಸ್‌ ಕೃತ್ಯ ಎಸಗಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೆಪ್ಪರ್‌ ಸ್ಪ್ರೇ ಬಳಸಿ ದರೋಡೆಗೆ ಪ್ರಯತ್ನ

ಅಪ್ಪಲ್‌ ನಾಯ್ಡು, ವಿಶಾಖಪಟ್ಟಣದಲ್ಲಿ ಖಾಸಗಿ ಕಂಪನಿ ಹೊಂದಿದ್ದಾರೆ. ನಾಯ್ಡು ಅವರ ಮೊಬೈಲ್‌ಗೆ ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ಗಳು ಕಡಿಮೆ ಮೊತ್ತಕ್ಕೆ ಸಿಗುತ್ತದೆ ಎಂಬ ಸಂದೇಶ ಬಂದಿತ್ತು. ಅದರಂತೆ ನಾಯ್ಡು ನಗರದ ಹೋಟೆಲ್‌ವೊಂದರಲ್ಲಿ ಆರೋಪಿಗಳನ್ನು ಸಂಪರ್ಕ ಮಾಡಿದ್ದರು. ಹೋಟೆಲ್‌ವೊಂದರಲ್ಲಿ ಭೇಟಿಯಾದ ಆಫ್ರಿಕಾದ ಪ್ರಜೆಗಳು ಲ್ಯಾಪ್‌ಟಾಪ್‌ ಸ್ಯಾಂಪಲ್‌ ತೋರಿಸುವ ಬದಲಿಗೆ ತಾವು ದೊಡ್ಡ ಬಾಕ್ಸ್‌ವೊಂದರಲ್ಲಿ ತಂದಿದ್ದ ನಕಲಿ ನೋಟಿನ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದರು. ನಾಯ್ಡು, ಆರೋಪಿಗಳನ್ನು ಪೊಲೀಸರಿಗೆ ಹಿಡಿದು ಕೊಡಬೇಕೆಂದು ಚಿತ್ರಣವನ್ನು ಮೊಬೈಲ್‌ ವಿಡಿಯೋ ಮಾಡಲು ಮುಂದಾದಾಗ ಮುಖಕಕ್ಕೆ ಪೆಪ್ಪರ್‌ ಸ್ಪ್ರೇ ಮಾಡಿ ಪರಾರಿಯಾಗಿದ್ದರು. ಆದರೆ, ಯಾವುದೇ ಸಾಕ್ಷ್ಯ ಇಲ್ಲದ ಕಾರಣ ನಾಯ್ಡು ಪೊಲೀಸರಿಗೆ ದೂರು ನೀಡಿರಲಿಲ್ಲ.

ಕಳ್ಳರ ಹಿಡಿಯಲು ಹೋಗಿ ಹಣ ಕಳೆದುಕೊಂಡರು:

ಹೇಗಾದರೂ ಮಾಡಿ ಆರೋಪಿಗಳನ್ನು ಹಿಡಿಯಬೇಕೆಂದು ನಿರ್ಧರಿಸಿದ್ದ ನಾಯ್ಡು, ತಮಗೆ ವಾಟ್ಸಾಪ್‌ನಿಂದ ಮೊದಲಿಗೆ ಬಂದಿದ್ದ ಸಂಖ್ಯೆಗೆ ಸಂದೇಶ ಕಳುಹಿಸಿ ನಕಲಿ ನೋಟು ಬದಲಾವಣೆಯಲ್ಲಿ ನಮಗೆ ಆಸಕ್ತಿ ಇದೆ. ಯಾರನ್ನು ಸಂಪರ್ಕ ಮಾಡಬೇಕು ಎಂದು ಕೇಳಿದ್ದರು. ಅದರಂತೆ ಆ ಮೊಬೈಲ್‌ ಸಂಖ್ಯೆಯಿಂದ ಆರೋಪಿಗಳ ವಿಳಾಸದ ಬಗ್ಗೆ ಮೊಬೈಲ್‌ಗೆ ಮಾಹಿತಿ ಬಂದಿತ್ತು.

ಕ್ರೈಂಸ್ಟೋರಿ ನೋಡಿ ವೃದ್ಧ ದಂಪತಿಗಳ ಹತ್ಯೆ ..!...

ನಾಯ್ಡು, ಭವಾನಿ ಇಂದಿರಾನಗರದ ಹೋಟೆಲ್‌ನಲ್ಲಿ ದಂಧೆಕೋರರನ್ನು ಹಿಡಿಯಲು ಬಂದಿದ್ದರು. ಈ ವೇಳೆ ಮೊದಲು ಪೆಪ್ಪರ್‌ ಸ್ಪ್ರೇ ಹೊಡೆದು ಪರಾರಿಯಾಗಿದ್ದವರೇ ಮತ್ತೆ ನಾಯ್ಡು ಅವರಿಗೆ ಎದುರಾಗಿದ್ದಾರೆ. ಇವರನ್ನು ಹಿಡಿಯಲು ಹೋದಾಗ ಮತ್ತೆ ಪೆಪ್ಪರ್‌ ಸ್ಪ್ರೇ ಹೊಡೆದು, .15 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.