ಬೆಂಗಳೂರು(ಅ.29): ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಈ ಸಂಬಂಧ ಯುವ ದಂಪತಿಯೊಂದನ್ನು ಬಂಧಿಸಿದ್ದಾರೆ.

ಅಮೃತಹಳ್ಳಿ ನಿವಾಸಿಗಳಾದ ಸಿ.ಎಚ್‌.ವೆಂಕಟೇಶ್‌ (30) ಹಾಗೂ ಈತನ ಪತ್ನಿ ಅರ್ಪಿತಾ (21) ಬಂಧಿತರು. ಆರೋಪಿಗಳಿಂದ ಐದು ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ದಂಪತಿ ಬಂಧನದಿಂದಾಗಿ ಕಳೆದ ನಾಲ್ಕೈದು ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಸಹ ಬೆಳಕಿಗೆ ಬಂದಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಂ.ಎನ್‌.ಅನುಚೇತ್ ತಿಳಿಸಿದ್ದಾರೆ. ಆರೋಪಿಗಳು ಅ.17ರಂದು ಗರುಡಾಚಾರಪಾಳ್ಯದ ಆರ್‌ಎಚ್‌ಬಿ ಕಾಲೋನಿಯ ದಂಪತಿ ಚಂದ್ರೇಗೌಡ (63) ಮತ್ತು ಇವರ ಪತ್ನಿ ಲಕ್ಷ್ಮಮ್ಮ (55) ಅವರನ್ನು ಹತ್ಯೆ ಮಾಡಿದ್ದರು.

ಏನಿದು ಘಟನೆ?

ಆರೋಪಿ ವೆಂಕಟೇಶ್‌ ಮತ್ತು ಅರ್ಪಿತಾ ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿಹವಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗು ಇದೆ. 10ನೇ ತರಗತಿ ವ್ಯಾಸಂಗ ಮಾಡಿರುವ ವೆಂಕಟೇಶ್‌ ಓಲಾ ಕಂಪನಿಯ ಕಾರು ಚಾಲಕನಾಗಿದ್ದ. ಆರೋಪಿ ಸ್ನೇಹಿತರ ಸಾಲ ಮಾಡಿಕೊಂಡಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ವೃದ್ಧ ದಂಪತಿಯನ್ನು ಆರೋಪಿ ಟಾರ್ಗೆಟ್‌ ಮಾಡಿದ್ದ. ಸುದ್ದಿ ವಾಹಿನಿಗಳಲ್ಲಿ ಬರುತ್ತಿದ್ದ ಕ್ರೈಂ ಸ್ಟೋರಿ ಕಾರ್ಯಕ್ರಮಗಳಿಂದ ವೆಂಕಟೇಶ್‌ ಪ್ರಭಾವಿತನಾಗಿದ್ದ.

ಒಂದು ತಿಂಗಳ ಹಿಂದೆ ಆರೋಪಿಗಳು ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದಾಗ ಅದೇ ಮದುವೆಗೆ ಸಂಬಂಧಿಕರಾದ ಚಂದ್ರೇಗೌಡ ದಂಪತಿ ಕೂಡ ಬಂದಿದ್ದರು. ವೃದ್ಧ ದಂಪತಿ ಚಿನ್ನಾಭರಣ ಧರಿಸಿದ್ದನ್ನು ನೋಡಿದ ಆರೋಪಿಗಳು, ಇವರನ್ನು ಕೊಂದು ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದರು. ವೆಂಕಟೇಶ್‌ ದಂಪತಿ ಒಂದೆರಡು ಬಾರಿ ಚಂದ್ರೇಗೌಡ ಅವರ ಮನೆಗೆ ಭೇಟಿ ಕೊಟ್ಟು ವಿಶ್ವಾಸಗಳಿಸುವ ಪ್ರಯತ್ನ ನಡೆಸಿದ್ದರು.

ಡೆಕಾಥ್ಲಾನ್

ಅ.16ರಂದು ಆರೋಪಿಗಳು ತಮ್ಮ ಮಗುವಿನೊಂದಿಗೆ ಚಂದ್ರೇಗೌಡ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಯಾರಿಗೂ ಅನುಮಾನಬಾರದಂತೆ ಗರುಡಾಚಾರಪಾಳ್ಯದಲ್ಲಿರುವ ಡೆಕಾಥ್ಲಾನ್‌ ಬಳಿ ಕಾರು ನಿಲ್ಲಿಸಿ, ಸಂಜೆ 6.30ರ ವೇಳೆಗೆ ನಡೆದುಕೊಂಡು ಚಂದ್ರೇಗೌಡರ ಮನೆ ತಲುಪಿದ್ದರು. ಈ ವೇಳೆ ವೆಂಕಟೇಶ್‌ನ ತನ್ನ ಪತ್ನಿ ಅರ್ಪಿತಾಳನ್ನು ಮಗುವಿನೊಂದಿಗೆ ಮನೆಯ ಹೊರಗಡೆ ಬಿಟ್ಟು, ಯಾರಾದರೂ ಬಂದರೆ ಸಿಗ್ನಲ್‌ ಕೊಡುವಂತೆ ಸೂಚಿಸಿ ಮನೆ ಒಳಗೆ ಹೋಗಿದ್ದ. ಬಳಿಕ ಮನೆಯೊಳಗೆ ಹೊಕ್ಕು ವೀಲ್‌ ಸ್ಪಾನರ್‌ನಿಂದ ಲಕ್ಷ್ಮಮ್ಮ ಅವರ ತಲೆಗೆ ಕೊಡೆದು ಕೊಲೆ ಮಾಡಿದ್ದ. ಬಳಿಕ ಮೃತ ದೇಹವನ್ನು ರೂಮ್‌ಗೆ ಎಳೆದೊಯ್ದು ಹಾಕಿದ್ದ. ವಾಯುವಿಹಾರಕ್ಕೆ ಹೋಗಿದ್ದ ಲಕ್ಷ್ಮಮ್ಮ ಅವರ ಪತಿಗಾಗಿ ಆರೋಪಿ ಕಾದು ಕುಳಿತಿದ್ದ.

ಸಚಿವರಿಂದ ಹಿಟ್ & ರನ್! ಗಾಯಾಳು ನಿವೃತ್ತ ಯೋಧನಿಗೆ ಅಲ್ಲೇ ಬಿಟ್ಟು ಕಾಲ್ಕಿತ್ತ ಮಿನಿಸ್ಟ್ರು!

ವಾಯುವಿವಾರ ಮುಗಿಸಿ ಬಂದ ಚಂದ್ರೇಗೌಡಗೆ ಮನೆ ಕೆಳಗಡೆ ವೆಂಕಟೇಶ್‌ ಪತ್ನಿ ಅರ್ಪಿತಾ ಎದುರಾಗಿದ್ದು, ಅವಳಿಂದ ಮಗು ಪಡೆದುಕೊಂಡು ಹೋಗಿ ಚಂದ್ರೇಗೌಡರು ಮನೆಗೆ ಆಗಮಿಸಿದ್ದರು. ಚಂದ್ರೇಗೌಡರು ಮನೆಗೆ ಆಗಮಿಸುತ್ತಿದ್ದಂತೆ ಆರೋಪಿ ಹಿಂಭಾಗದಿಂದ ಅವರ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ನಂತರ ಪತ್ನಿಯನ್ನು ಒಳಗೆ ಕರೆದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ .9500 ನಗದು ದೋಚಿ ಪರಾರಿಯಾಗಿದ್ದ. ಕದ್ದ ಚಿನ್ನಾಭರಣವನ್ನು ಮಲ್ಲೇಶ್ವರದಲ್ಲಿರುವ ಧನಲಕ್ಷ್ಮೇ ಚಿನ್ನದ ಮಳಿಗೆಯಲ್ಲಿ ಮಾರಾಟ ಮಾಡಿ .8.67 ಲಕ್ಷ ಹಣ ಪಡೆದಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆ.ಆರ್‌.ಪೇಟೆಯಲ್ಲೂ ಕೃತ್ಯ: ಇನ್ನು ಆರೋಪಿಗಳು ತಮ್ಮ ಸಂಬಂಧಿಕರಾದ ಮಂಡ್ಯದ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ಲಲಿತಮ್ಮ ಮತ್ತು ಇವರ ಪತಿ ಗುಂಡೇಗೌಡ ಅವರನ್ನು ಜು.12ರಂದು ಹತ್ಯೆ ಮಾಡಿ, 60 ಗ್ರಾಂ ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ತಿಳಿಸಿದರು.

ಐಷಾರಾಮಿ ಜೀವನದ ಕನಸು

ವೆಂಕಟೇಶ್‌ ಬಜಾಜ್‌ ಫೈನಾನ್ಸ್‌ನಲ್ಲಿ 1.15 ಲಕ್ಷ ಹಾಗೂ ಸ್ನೇಹಿತರ ಬಳಿ ಒಟ್ಟು ಸುಮಾರು 10 ಲಕ್ಷ ಸಾಲ ಮಾಡಿಕೊಂಡಿದ್ದ. ಮಾಡಿದ್ದ ಸಾಲ ತೀರಿಸಲು ಮತ್ತು ಸ್ವಂತ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸಲು ಅಪರಾಧ ಕೃತ್ಯಕ್ಕೆ ಇಳಿದಿದ್ದ.

ಸುದ್ದಿ ವಾಹಿನಿಗಳಲ್ಲಿ ಬರುತ್ತಿದ್ದ ಕ್ರೈಂ ಸ್ಟೋರಿ ಕಾರ್ಯಕ್ರಮಗಳಿಂದ ಪ್ರಭಾವಿತನಾಗಿದ್ದ ವೆಂಕಟೇಶ್‌, ಮಕ್ಕಳಿಲ್ಲದ ವೃದ್ಧ ದಂಪತಿಯನ್ನು ಟಾರ್ಗೆಟ್‌ ಮಾಡಿಕೊಂಡು ಹತ್ಯೆಗೆ ನಿರ್ಧರಿಸಿದ್ದ. ವೃದ್ಧರನ್ನು ಹತ್ಯೆ ಮಾಡಿ ಚಿನ್ನಾಭರಣ ಮತ್ತು ಹಣ ದೋಚಿದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ, ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ವೆಂಕಟೇಶ್‌ ಹಾಗೂ ಅರ್ಪಿತಾ ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಕಳ್ಳರ ಸುಳಿವು ನೀಡಿದ ಸಿಸಿಟೀವಿ

ಆರೋಪಿ ಕೃತ್ಯ ಎಸಗುವಾಗ ಮೊಬೈಲ್‌ ಬಳಸುತ್ತಿರಲಿಲ್ಲ. ಅಲ್ಲದೆ, ಅರ್ಪಿತಾ ಮಗುವಿನೊಂದಿಗೆ ಮನೆ ಬಳಿ ಬಂದಿದ್ದ ದೃಶ್ಯಾವಳಿಯೊಂದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿತ್ತು. ಅರ್ಪಿತಾ ಚಹರೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲವಾದರೂ ಮಗುವಿನ ಮುಖ ತುಸು ಕಾಣುತ್ತಿತ್ತು. ಚಂದ್ರೇಗೌಡ ದಂಪತಿ ಮನೆ ಬಳಿ ಆರೋಪಿ ದಂಪತಿಯನ್ನು ಸ್ಥಳೀಯರು ಗುರುತಿಸಿದ್ದರು. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಮಾಜಿ ಹೆಂಡ್ತಿಗೆ ಜೀವನಾಂಶ ಕೊಡ್ಲಿಲ್ಲ: ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಕೋರ್ಟ್ ಆದೇಶ