ಬೆಂಗಳೂರು [ಸೆ.30]: ಮುಖಕ್ಕೆ ‘ಪೆಪ್ಪರ್‌ ಸ್ಪ್ರೇ’ ಸಿಂಪಡಿಸಿ ದರೋಡೆಗೆ ವಿಫಲ ಯತ್ನ ನಡೆಸಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರಿಯಣ್ಣ (66) ಎಂಬುವವರ ಮನೆಯಲ್ಲಿ ಮೂವರು ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ಸಂಬಂಧ ಮೂವರು ಅಪರಿಚಿತರ ವಿರುದ್ಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸೆ.27ರಂದು ಮನೆಯಲ್ಲಿ ಕರಿಯಣ್ಣ ಒಬ್ಬರೇ ಇದ್ದಾಗ ಮೂವರು ದುಷ್ಕರ್ಮಿಗಳು ಮನೆ ಬಳಿ ಬಂದು, ‘ನಾವು ಬಿಬಿಎಂಪಿ ಕಚೇರಿಯಿಂದ ಬಂದಿದ್ದೇವೆ. ಶೌಚಾಲಯ ಶುಚಿಗೊಳಿಸುತ್ತೇವೆ, ವೃದ್ಧಾಪ್ಯರಿಗೆ ಪಿಂಚಣಿ ಕೊಡಿಸುತ್ತೇವೆ’ ಎಂದು ಹೇಳಿದ್ದಾರೆ. ಆಗ ಕರಿಯಣ್ಣ ಅವರು, ತಮ್ಮ ಮಗ ಮನೆಗೆ ಬಂದ ಬಳಿಕ ಬನ್ನಿ ಎಂದು ಹೇಳಿದ್ದಾರೆ. ಈ ವೇಳೆ ಏಕಾಏಕಿ ಆರೋಪಿಗಳು ಕರಿಯಣ್ಣ ಅವರನ್ನು ಹಿಡಿದು ಮುಖಕ್ಕೆ ಪೆಪ್ಪರ್‌ ಸ್ಪ್ರೇ ಸಿಂಪಡಿಸಿದಾಗ ಕರಿಯಣ್ಣ ಜೋರಾಗಿ ಕೂಗಿಕೊಂಡಿದ್ದಾರೆ. ಚೀರಾಟದ ಶಬ್ದ ಕೇಳಿ ನೆರೆ ಮನೆ ನಿವಾಸಿ ಮಹಿಳೆ ಕೂಡಲೇ ಸ್ಥಳಕ್ಕೆ ಬಂದಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.