‘ತಾಲಿಬಾನಿಗಳ ಕಪಿಮುಷ್ಟಿಗೆ ಸಿಲುಕಿ ನಿತ್ಯ ನರಕ ಅನುಭವಿಸುತ್ತಿರುವ ಅಫ್ಘಾನಿಸ್ತಾನ ಅಫ್ಘಾನಿಸ್ತಾನದ ಪ್ರಜೆಗಳಿಗೆ ಭಾರತ, ಭಾರತೀಯರ ಬಗ್ಗೆ ಎಲ್ಲಿಲ್ಲದ ಪ್ರೀತಿ, ಗೌರವ ಭಾರತೀಯರನ್ನು ಹಿಂದೂಸ್ತಾನಿಗಳು ಎಂದು ಕರೆಯುವ ಆಫ್ಘನ್ನರು ಹಿಂದೂಸ್ತಾನಿ ಭಾಯಿ ಎಂದೇ ಸಂಬೋಧಿಸುತ್ತಾರೆ.
ಬೆಂಗಳೂರು (ಆ.22): ‘ತಾಲಿಬಾನಿಗಳ ಕಪಿಮುಷ್ಟಿಗೆ ಸಿಲುಕಿ ನಿತ್ಯ ನರಕ ಅನುಭವಿಸುತ್ತಿರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಭಾರತ, ಭಾರತೀಯರ ಬಗ್ಗೆ ಎಲ್ಲಿಲ್ಲದ ಪ್ರೀತಿ, ಗೌರವ. ಭಾರತೀಯರನ್ನು ಹಿಂದೂಸ್ತಾನಿಗಳು ಎಂದು ಕರೆಯುವ ಆಫ್ಘನ್ನರು ಹಿಂದೂಸ್ತಾನಿ ಭಾಯಿ ಎಂದೇ ಸಂಬೋಧಿಸುತ್ತಾರೆ.’
-ಇದು ಅಫ್ಘಾನಿಸ್ತಾನದ ನರಕ ಸದೃಶ ವಾತಾವರಣವನ್ನು ಕಣ್ಣಾರೆ ನೋಡಿ ಕೇಂದ್ರ ಸರ್ಕಾರದ ನೆರವಿನಿಂದ ದೇಶಕ್ಕೆ ವಾಪಸ್ಸಾದ ಕನ್ನಡಿಗ ಮೆಲ್ವಿನ್ ಹಾಗೂ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುವ ಮುನ್ಸೂಚನೆಯಿಂದ ಕಳೆದ ತಿಂಗಳೇ ರಾಜ್ಯಕ್ಕೆ ಮರಳಿದ ಎಂಜಿನಿಯರ್ ಗೋಪಾಲ ಕೃಷ್ಣ ಅವರ ಅನುಭವದ ಮಾತುಗಳು.
ಕಾಬೂಲ್‌ನ ಆಸ್ಪತ್ರೆಯೊಂದರಲ್ಲಿ ಮೇಂಟೆನನ್ಸ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿಯ ಉಳ್ಳಾಲದವರಾದ ಮೆಲ್ವಿನ್, ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಬಳಿಕವೂ ಕೆಲ ದಿನಗಳು ಅಲ್ಲಿದ್ದರು. ನಂತರ ಕೇಂದ್ರ ಸರ್ಕಾರದ ನೆರವಿನಿಂದ ಪಾರಾಗಿ ಕರುನಾಡಿಗೆ ಹಿಂತಿರುಗಿದ್ದಾರೆ.
ಒಂದೆಡೆ ಹಿಂಸೆ, ಇನ್ನೊಂದೆಡೆ ತನಿಖೆ: ತಾಲಿಬಾನ್ ನಾಟಕ!
ಮೆಲ್ವಿನ್ ಪ್ರಕಾರ, ಭಾರತ- ಭಾರತೀಯರ ಬಗ್ಗೆ ಆಫ್ಘನ್ ಪ್ರಜೆಗಳಿಗೆ ತುಂಬಾ ಪ್ರೀತಿ ಮತ್ತು ಗೌರವ. ಏಕೆಂದರೆ ಆಫ್ಘನ್‌ನಲ್ಲಿ ಅಣೆಕಟ್ಟು ನಿರ್ಮಾಣ, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯಗಳಿಗೆ ಭಾರತ ಆರ್ಥಿಕ ನೆರವು ನೀಡಿದೆ. ಇದರ ಕೃತಜ್ಞತೆಗಾಗಿ ಹಿಂದೂಸ್ತಾನಿ ಭಾಯಿ ಭಾಯಿ ಎನ್ನುತ್ತಾರೆ.
ಆಫ್ಘನ್‌ನಲ್ಲಿ ಹಲವು ವರ್ಷಗಳ ಕಾಲ ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ದೇಶಗಳ ಕಂಪನಿಗಳಲ್ಲಿ ನೆಟ್‌ವರ್ಕ್ ಎಂಜಿನಿಯರ್ ಆಗಿ ಕೆಲಸ ಮಾಡಿ ಕಳೆದ ತಿಂಗಳಷ್ಟೇ ರಾಜಕ್ಕೆ ವಾಪಸ್ಸಾಗಿರುವ ಬೆಂಗಳೂರು ಮೂಲದ ರಾಮಕೃಷ್ಣ ಕೂಡ ಇದಕ್ಕೆ ದನಿಗೂಡಿಸುತ್ತಾರೆ. ಭಾರತೀಯರ ಬಗ್ಗೆ ಅಫ್ಘಾನಿಸ್ತಾನದ ಪ್ರಜೆಗಳಿಗೆ ಒಳ್ಳೆಯ ಅಭಿಪ್ರಾಯ ಇದೆ. ನಮ್ಮ ಜತೆ ಸುಮಾರು 600 ಜನ ಆಫ್ಘನ್ ಮೂಲದವರು ಕೆಲಸ ಮಾಡುತ್ತಿದ್ದರು. ಭಾರತ ಸರ್ಕಾರ ಅಷ್ಘಾನಿಸ್ತಾನಕ್ಕೆ ಅಣೆಕಟ್ಟು ನಿರ್ಮಾಣ, ಕೋವಿಡ್ ವ್ಯಾಕ್ಸಿನ್, ವಿಮಾನ ಖರೀದಿ, ಮೂಲಸೌಕರ್ಯ ಅಭಿವೃದ್ಧಿಗೆ ನೀಡಿರುವ ಸಹಕಾರ, ಆರ್ಥಿಕ ನೆರವನ್ನು ಸದಾ ಸ್ಮರಿಸುತ್ತಿದ್ದರು. ಇದರೊಂದಿಗೆ ಭಾರತೀಯರಾದ ನಮಗೂ ಅಷ್ಟೇ ಗೌರವ ನೀಡುತ್ತಿದ್ದರು. ಒಂದು ತರಕಾರಿ ಅಂಗಡಿಗೆ ಹೋದಾಗಲೂ ಭಾರತೀಯರನ್ನು ಅಲ್ಲಿನ ವ್ಯಾಪಾರಿ ನೀವು ನಮ್ಮ ಅತಿಥಿ ಎಂದು ಗೌರವಿಸುತ್ತಿದ್ದರು ಎಂದು ಹೇಳಿದರು.
ಅಮೆರಿಕ ಆಫ್ಘನ್‌ನಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ವಾಪಸ್ ಕರೆದುಕೊಳ್ಳಲು ಆರಂಭಿಸಿ ಎರಡು ತಿಂಗಳೇ ಕಳೆಯುತ್ತಿದೆ. ಅಮೆರಿಕ ಸೇನಾ ಪಡೆ ತೆರವು ಮಾಡಿದ ಒಂದೊಂದೇ ಪ್ರದೇಶಗಳನ್ನು ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾ ಬಂದರು. ಅಮೆರಿಕ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದನ್ನು ಮೊದಲೇ ತಿಳಿದಿದ್ದ ಅಲ್ಲಿನ ಅಮೆರಿಕದ ಕಂಪನಿಗಳು ತಮ್ಮ ನೌಕರರನ್ನು ವಾಪಸ್ ಕಳುಹಿಸಲಾರಂಭಿಸಿದ್ದವು.
ಆಫ್ಘನ್ ಮೂಲದ ಕಂಪನಿಗಳಲ್ಲಿ ಕೆಲಸ ಮಾಡುವವರನ್ನು ಬಿಟ್ಟು ಉಳಿದ ಕಂಪನಿಗಳ ಬಹುತೇಕ ನೌಕರರು ತಮ್ಮ ದೇಶಗಳಿಗೆ ಮರಳಿದ್ದಾರೆ. ನಮ್ಮ ಕಂಪನಿ ಕೂಡ ಇದೇ ಕಾರಣಕ್ಕೆ ಜುಲೈ ತಿಂಗಳಲ್ಲೇ ನಮ್ಮನ್ನು ವಾಪಸ್ ಹೋಗಲು ಸೂಚಿಸಿತು. ನಾನು ಆಫ್ಘನ್‌ನ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆಫ್ಘನ್ ಪರಿಸ್ಥಿತಿ ನಿತ್ಯ ಅಪ್‌ಡೇಟ್ ಆಗುತ್ತಿತ್ತು. ಅಲ್ಲಿನ ಸಿಬ್ಬಂದಿ ನನ್ನನ್ನು ಒಳಗೊಂಡು ಅನೇಕ ಭಾರತೀಯರನ್ನು ವಾಪಸ್ ಕಳಹಿಸಲು ಸಹಕಾರ ನೀಡಿತು ಎಂದು ರಾಮಕೃಷ್ಣ ಹೇಳಿದರು.
