Aero India 2023: ಏರೋ ಇಂಡಿಯಾಕ್ಕೆ ಅದ್ಧೂರಿ ತೆರೆ: ದೇಶ-ವಿದೇಶದ 6.50 ಲಕ್ಷ ಮಂದಿಯಿಂದ ಭೇಟಿ
ಸುಮಾರು 80 ಸಾವಿರ ಕೋಟಿ ರು.ಗಳ ಒಪ್ಪಂದ, ದೇಶ-ವಿದೇಶಗಳ ಪ್ರಸಿದ್ಧ ಕಂಪನಿಗಳ ಭಾಗಿ, ನೀಲ ನಭದಲ್ಲಿ ರೋಮಾಂಚನಕಾರಿ ವೈಮಾನಿಕ ಪ್ರದರ್ಶನ, ದೇಶ-ವಿದೇಶದ ಅಂದಾಜು 6.50 ಲಕ್ಷ ಜನರ ಭೇಟಿ ಮೂಲಕ ಕಳೆದ ಐದು ದಿನಗಳ ಕಾಲ ಯಶಸ್ವಿಯಾಗಿ ನಡೆದ 14ನೇ ಏರೋ ಇಂಡಿಯಾಗೆ ಶುಕ್ರವಾರ ಅದ್ಧೂರಿ ತೆರೆ ಬಿತ್ತು.
ಬೆಂಗಳೂರು (ಫೆ.18): ಸುಮಾರು 80 ಸಾವಿರ ಕೋಟಿ ರು.ಗಳ ಒಪ್ಪಂದ, ದೇಶ-ವಿದೇಶಗಳ ಪ್ರಸಿದ್ಧ ಕಂಪನಿಗಳ ಭಾಗಿ, ನೀಲ ನಭದಲ್ಲಿ ರೋಮಾಂಚನಕಾರಿ ವೈಮಾನಿಕ ಪ್ರದರ್ಶನ, ದೇಶ-ವಿದೇಶದ ಅಂದಾಜು 6.50 ಲಕ್ಷ ಜನರ ಭೇಟಿ ಮೂಲಕ ಕಳೆದ ಐದು ದಿನಗಳ ಕಾಲ ಯಶಸ್ವಿಯಾಗಿ ನಡೆದ 14ನೇ ಏರೋ ಇಂಡಿಯಾಗೆ ಶುಕ್ರವಾರ ಅದ್ಧೂರಿ ತೆರೆ ಬಿತ್ತು. ಕೊನೇ ದಿನವಾದ ಶುಕ್ರವಾರ ಸಾರಂಗ್, ಸೂರ್ಯಕಿರಣ ವಿಮಾನಗಳು ನೀಲಾಕಾಶಾದಲ್ಲಿ ರಂಗೋಲಿ ಬಿಡಿಸಿದರೆ, ಸೂಪರ್ ಸಾನಿಕ್ ಸುಖೋಯ್-30 ಆಕಾಶದಲ್ಲಿ ಸಿಡಿಮದ್ದು ಸಿಡಿಸಿ ಅಚ್ಚರಿ ಮೂಡಿಸಿತ್ತು.
ಇನ್ನು ರಫೇಲ್, ತೇಜಸ್ ಹಾಗೂ ಏರೋ ಇಂಡಿಯಾದ ಹೊಸ ಅತಿಥಿಗಳಾದ ಎಫ್-16 ಮತ್ತು ಎಫ್-35 ರಾಕ್ ಆ್ಯಂಡ್ ರೋಲ್‌ನೊಂದಿಗೆ ಘರ್ಜಿಸುವಿಕೆಯನ್ನು ಕಿಕ್ಕಿರಿದು ತುಂಬಿದ್ದ ಜನ ವೀಕ್ಷಿಸಿ ಸಂಭ್ರಮಿಸಿದರು. ಭಾರತದ ಹೆಮ್ಮೆಯ ತೇಜಸ್, ಸುಖೋಯ್-30, ಹೆಲಿಕಾಪ್ಟರ್ ರುದ್ರಾ, ಪ್ರಚಂಡ್, ರಫೇಲ್, ಎಫ್-16, ಎಫ್-35, ಎಫ್-18, ಎಚ್‌ಟಿಟಿ-40 ಸೇರಿದಂತೆ ಪ್ರಮುಖ ವಿಮಾನ, ಕಾಪ್ಟರ್ಗಳು ಬಾನಂಗಳದಲ್ಲಿ ತಮ್ಮ ಚಾಕಚಕ್ಯತೆ ಮೆರೆದವು.
ಏರೋ ಇಂಡಿಯಾದಲ್ಲಿ ದಾಖಲೆಯ 80 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ
ಬರೊಬ್ಬರಿ 6.5 ಲಕ್ಷ ಭೇಟಿ: ಮೊದಲ ಮೂರು ದಿನ ದೇಶ, ವಿದೇಶ ಸೇರಿ 2 ಲಕ್ಷಕ್ಕೂ ಅಧಿಕ ಉದ್ಯಮಿಗಳು, ವ್ಯಾಪಾರಿಗಳು, ವಾಯು, ನೌಕಾ ಹಾಗೂ ಭೂಸೇನೆಯ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ವೀಕ್ಷಿಸಿದ್ದರು. ಕೊನೆಯ ಎರಡು ದಿನ ತಲಾ 2 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಿದ್ದಾರೆ. ಒಟ್ಟಾರೆ, 6.5 ಲಕ್ಷಕ್ಕೂ ಅಧಿಕ ಮಂದಿ ಏರೋ ಇಂಡಿಯಾಕ್ಕೆ ಭೇಟಿ ನೀಡಿದ್ದಾರೆ.
811 ಪ್ರದರ್ಶಕರು ಭಾಗಿ: ಒಟ್ಟು 811 ಪ್ರದರ್ಶಕರು ಭಾಗಿವಹಿಸಿದ್ದು, ಈ ಪೈಕಿ 110 ವಿದೇಶಿ ಕಂಪನಿ ಹಾಗೂ ರಕ್ಷಣಾ ಇಲಾಖೆಗಳಿವೆ. ಉಳಿದಂತೆ 701 ಸ್ವದೇಶಿ ಉದ್ಯಮಿಗಳು ಭಾಗವಹಿಸಿದ್ದವು. 80 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದಗಳು ಏರ್ಪಟ್ಟಿದೆ.
67 ಏರ್‌ಕ್ರಾಪ್ಟ್ ಪ್ರದರ್ಶನ: ಏರೋ ಇಂಡಿಯಾದಲ್ಲಿ ಅಮೆರಿಕದ ಎಫ್-16, ಎಫ್-35, ರಫೇಲ್, ತೇಜಸ್, ಸೂರ್ಯಕಿರಣ, ಸಾರಂಗ್ ಕಾಪ್ಟರ್ ಸೇರಿ 67 ವಿಮಾನಗಳು ಪ್ರದರ್ಶನ ನೀಡಿವೆ. ಸ್ಟ್ಯಾಟಿಕ್ ಡಿಸ್‌ಪ್ಲೇ 36 ಏರ್‌ಕ್ರಾಪ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಅಮೆರಿಕದ ಎಫ್-16, ಎಫ್-35 ಹಾಗೂ ಎಫ್-18 ಹಾರಾಟ ನಡೆಸಿದರೆ, ಎಚ್‌ಎಎಲ್ ನಿರ್ಮಿತ ಯುದ್ಧ ವಿಮಾನ ಪ್ರಚಂಡ ಶಕ್ತಿ ಪ್ರದರ್ಶನ ಮಾಡಿತ್ತು. ಇನ್ನು ಡಿಆರ್‌ಡಿಓ ಅಭಿವೃದ್ಧಿ ಪಡಿಸಿದ ತಪಸ್ ಯುಎವಿ ಆಗದಲ್ಲಿ ನಿಂತು ವೈಮಾನಿಕ ಪ್ರದರ್ಶನ ನೇರ ಪ್ರಸಾರ ನೀಡಿತ್ತು.
ಧನ್ಯವಾದ ಹೇಳಿದ ಸಾರಂಗ್, ಸೂರ್ಯಕಿರಣ: ಸೂರ್ಯಕಿರಣ ವಿಮಾನಗಳು ತಮ್ಮ ವೈಮಾನಿಕ ಪ್ರದರ್ಶನ ಮುಕ್ತಾಯದ ಬಳಿಕ ವೀಕ್ಷಕರ ಮುಂಭಾಗಕ್ಕೆ ಆಗಮಿಸಿ ತಲೆ ಮೇಲೆ ಹಾರುವ ಮೂಲಕ ಗುಡ್ ಬಾಯ್ ಹೇಳಿದರೆ, ಸಾರಂಗ್‌ನ ನಾಲ್ಕು ಹೆಲಿಕಾಪ್ಟರ್ ಜನರ ಮುಂದೆ ಸಾಲಾಗಿ ಬಂದು ನಿಂತು ವೀಕ್ಷಿಸಿದಕ್ಕೆ ಧನ್ಯವಾದ ರೂಪದಲ್ಲಿ ಪೆರೇಡ್ ನಡೆಸಿದವು.
ಏರೋಸ್ಪೇಸ್ ವಲಯದಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಮುಂದು: ಸಿಎಂ ಬೊಮ್ಮಾಯಿ
ಅಂಕಿ ಅಂಶ
ಒಟ್ಟು ಪ್ರದರ್ಶಕರು- 811
ದೇಶಿಯ ಪ್ರದರ್ಶಕರು-701
ವಿದೇಶಿ ಪ್ರದರ್ಶಕರು-110
ವೈಮಾನಿಕ ಪ್ರದರ್ಶನ ವಿಮಾನ-67
ಭೇಟಿ ನೀಡಿದವರ ಸಂಖ್ಯೆ-6.5 ಲಕ್ಷ
ಒಡಂಬಡಿಕೆ ಮೌಲ್ಯ-80 ಸಾವಿರ ಕೋಟಿ