Asianet Suvarna News Asianet Suvarna News

ಏರೋ ಇಂಡಿಯಾದಲ್ಲಿ ದಾಖಲೆಯ 80 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ವಿವಿಧ ಕಂಪನಿಗಳ ನಡುವೆ 266 ಸಹಭಾಗಿತ್ವ, 201 ಒಪ್ಪಂದ, 53 ಪ್ರಮುಖ ಘೋಷಣೆ, 9 ಉತ್ಪನ್ನ ಬಿಡುಗಡೆ, ಮೂರು ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಒಟ್ಟು 80 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದಗಳು ಏರ್ಪಟ್ಟಿವೆ.

Aero India signs a record 80 thousand crore contract gvd
Author
First Published Feb 16, 2023, 5:20 AM IST

ಬೆಂಗಳೂರು (ಫೆ.16): ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ವಿವಿಧ ಕಂಪನಿಗಳ ನಡುವೆ 266 ಸಹಭಾಗಿತ್ವ, 201 ಒಪ್ಪಂದ, 53 ಪ್ರಮುಖ ಘೋಷಣೆ, 9 ಉತ್ಪನ್ನ ಬಿಡುಗಡೆ, ಮೂರು ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಒಟ್ಟು 80 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದಗಳು ಏರ್ಪಟ್ಟಿವೆ. ಇದು 2021ರಲ್ಲಿ ನಡೆದ ಕಳೆದ ಬಾರಿಯ ಏರೋ ಇಂಡಿಯಾದಲ್ಲಿ ಏರ್ಪಟ್ಟಿದ್ದ 55,000 ಕೋಟಿ ರು. ಒಪ್ಪಂದಕ್ಕಿಂತ 25,000 ಕೋಟಿ ರು.ನಷ್ಟು ಅಧಿಕವಾಗಿದೆ. ತನ್ಮೂಲಕ ಈ ಸಲದ ಏರೋ ಇಂಡಿಯಾ ರಾಜ್ಯದಲ್ಲಿ ನಡೆದ ಎಲ್ಲ ಏರೋ ಇಂಡಿಯಾಗಳ ಪೈಕಿ ಅತಿಹೆಚ್ಚು ಮೌಲ್ಯದ ರಕ್ಷಣಾ ಒಪ್ಪಂದಗಳು ಏರ್ಪಟ್ಟ ಆವೃತ್ತಿ ಎಂಬ ದಾಖಲೆ ಬರೆದಿದೆ.

ಇದೇ ವೇಳೆ 2,900 ಕೋಟಿ ರು. ಗೂ ಹೆಚ್ಚು ಮೌಲ್ಯದ ಹೂಡಿಕೆಯ 32 ಒಪ್ಪಂದಗಳಿಗೆ ಕರ್ನಾಟಕದ ಸಾರ್ವಜನಿಕ ವಲಯದ ಉದ್ಯಮಗಳು ಸಹಿ ಹಾಕಿವೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ‘ಬಂಧನ್‌’ ಕಾರ್ಯಕ್ರಮದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಪ್ರಕಟಿಸಲಾಯಿತು. ಪ್ರಮುಖವಾಗಿ ಹೆಲಿಕಾಪ್ಟರ್‌ ವಿನ್ಯಾಸ ಅಭಿವೃದ್ಧಿ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಎಚ್‌ಎಎಲ್‌ ಹಾಗೂ ಫ್ರಾನ್ಸ್‌ನ ಸಫ್ರಾನ್‌ ಹೆಲಿಕಾಪ್ಟರ್‌ ಇಂಜಿನ್‌ ಸಂಸ್ಥೆಯೊಂದಿಗೆ ಒಡಂಬಡಿಕೆ, ಬಿಇಎಲ್‌ ಮತ್ತು ಎಡಿಎ ನಡುವೆ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗೆ ಐಡಬ್ಲ್ಯೂಬಿಸಿ ಮತ್ತು ಇತರ ಎಲ್‌ಆರ್‌ಯುಗಳಿಗೆ ಸಂಬಂಧಿಸಿದಂತೆ ಒಪ್ಪಂದ, ಭಾರತದಲ್ಲಿ ಖಾಸಗಿ ಕಂಪನಿಯಿಂದ ಮೊದಲನೇ ಪ್ರಯಾಣಿಕ ವಿಮಾನವನ್ನು ತಯಾರಿಸಲು ಮತ್ತು ಜೋಡಿಸಲು ಗೋಪಾಲನ್‌ ಏರೋಸ್ಪೇಸ್‌ ಇಂಡಿಯಾ ಕಂಪನಿಯೊಂದಿಗೆ ಜೆಕ್‌ ರಿಪಬ್ಲಿಕ್‌ನ ಓಮ್ನಿಪೋಲ್‌ ಸಂಸ್ಥೆ ಒಪ್ಪಂದ ಹಾಕಿದೆ.

ಬಿಜೆಪಿಯವರಂತೆ ಅಮಾಯಕರ ಬಲಿಕೊಟ್ಟು ರಾಜಕಾರಣ ಮಾಡಿಲ್ಲ: ಎಚ್‌ಡಿಕೆ

ಇದೇ ವೇಳೆ ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ ಉತ್ಪಾದಿತ ವಿಎಲ್‌ಎಸ್‌ಆರ್‌ಎಸ್‌ಎಎಂ ಕ್ಷಿಪಣಿ, ಡ್ರೋನ್‌ ಆಧಾರಿತ ಕ್ಷಿಪಣಿ ಬಿಡುಗಡೆ ಮಾಡಲಾಯಿತು. ಬಿಇಎಲ್‌ನ ಸುಧಾರಿತ ಸಾಫ್‌್ಟವೇರ್‌ ಆಧಾರಿತ ರೇಡಿಯೋ, ಡಿಆರ್‌ಡಿಒನ ಕೌಂಟರ್‌ ಡ್ರೋನ್‌ ರಾಡಾರ್‌ ಸೇರಿದಂತೆ ವಿವಿಧ ತಂತ್ರಜ್ಞಾನ ಮತ್ತು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಮುರುಗೇಶ್‌ ನಿರಾಣಿ, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಗಿರಿಧರ್‌ ಅರಮಾನೆ, ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌, ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಉಪಸ್ಥಿತರಿದ್ದರು.

ಸ್ವದೇಶಿ ರಕ್ಷಣಾ ಸಮಾಗ್ರಿ ಖರೀದಿ ಮೊತ್ತ 75% ಹೆಚ್ಚಳ: ಕೇಂದ್ರದ 2023-24ನೇ ಸಾಲಿನ ಬಜೆಟ್‌ನಲ್ಲಿ ದೇಶಿಯ ಉದ್ಯಮಗಳಿಂದ ರಕ್ಷಣಾ ಸಾಮಗ್ರಿ ಖರೀದಿಗೆ ಸುಮಾರು 1 ಲಕ್ಷ ಕೋಟಿ ರು. ಮೀಸಲಿಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು. ಏರೋ ಇಂಡಿಯಾದ ‘ಬಂಧನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಕ್ಷಣಾ ಇಲಾಖೆಗೆ ಬಜೆಟ್‌ನಲ್ಲಿ 5.94 ಲಕ್ಷ ಕೋಟಿ ನಿಗದಿ ಪಡಿಸಲಾಗಿದೆ. ಇದು ಕೇಂದ್ರ ಸರ್ಕಾರದ ಒಟ್ಟು ಬಜೆಟ್‌ನ ಶೇ.13.18ರಷ್ಟಾಗಿದ್ದು, ಅದರಲ್ಲಿ 1.63 ಲಕ್ಷ ಕೋಟಿಯನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ಆಧುನಿಕರಣಕ್ಕೆ ಬಳಸಲಾಗುವುದು ಎಂದರು.

ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್‌ ಕಟೀಲ್‌ ವಾಗ್ದಾಳಿ

ದೇಶದ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಿ, ಆಮದು ಅವಲಂಬನೆ ಕಡಿಮೆ ಮಾಡುವ ಅಮೃತ ಕಾಲದಲ್ಲಿದ್ದೇವೆ. ಕೇಂದ್ರ ಸರ್ಕಾರ ದೇಶಿಯ ಸಾಮಗ್ರಿಗಳನ್ನು ಖರೀದಿ ಮಾಡುವುದರಿಂದ ಭಾರತೀಯ ಉದ್ಯಮಗಳಿಗೆ ಪ್ರೋತ್ಸಾಹ ದೊರೆಯಲಿದೆ. ಇದರಿಂದ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಿಂದದೇಶೀಯ ಉದ್ಯಮ-ಸ್ನೇಹಿ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಲಾಗಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವಲ್ಡ್‌ರ್‍’ ದೃಷ್ಟಿಕೋನ ಕಾರಣವಾಗಿದೆ. ‘ಬಂಧನ’ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಲ್ಲ, ಬದಲಿಗೆ ರಕ್ಷಣಾ ಕ್ಷೇತ್ರದಲ್ಲಿ ರಾಷ್ಟ್ರವನ್ನು ಬಲಪಡಿಸುವ ಹೊಸ ನಿರ್ಣಯವಾಗಿದೆ ಎಂದು ಹೇಳಿದರು.

Follow Us:
Download App:
  • android
  • ios