ಎಸ್‌ಸಿ/ಎಸ್ಟಿ ಹೆಸರಿನಲ್ಲಿ ಪ್ರಮಾಣಪತ್ರ ಪಡೆದ ಬೇಡ ಜಂಗಮ ಸಮುದಾಯದ ವಿರುದ್ಧ ಕ್ರಮ ಅನ್ಯಾಯ ಎಂದು ಆರೋಪಿಸಿ ವಿಧಾನಸಭೆಯ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬೇಡ ಜಂಗಮ ಅಭಿವೃದ್ಧಿ ಸಮಿತಿ ಅಧ್ಯಕ್ಷ, ವಕೀಲ ಬಿ.ಡಿ. ಹಿರೇಮಠ ನುಗ್ಗಿ ಬೆದರಿಕೆ ಒಡ್ಡಿ, ಗಲಾಟೆ ಮಾಡಿದ ಪ್ರಸಂಗ ಶಾಸಕರ ಭವನದಲ್ಲಿ ಬುಧವಾರ ನಡೆಯಿತು.
ಬೆಂಗಳೂರು (ಏ.28): ಎಸ್‌ಸಿ/ಎಸ್ಟಿ (SC/ST) ಹೆಸರಿನಲ್ಲಿ ಪ್ರಮಾಣಪತ್ರ ಪಡೆದ ಬೇಡ ಜಂಗಮ ಸಮುದಾಯದ ವಿರುದ್ಧ ಕ್ರಮ ಅನ್ಯಾಯ ಎಂದು ಆರೋಪಿಸಿ ವಿಧಾನಸಭೆಯ ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬೇಡ ಜಂಗಮ ಅಭಿವೃದ್ಧಿ ಸಮಿತಿ ಅಧ್ಯಕ್ಷ, ವಕೀಲ ಬಿ.ಡಿ. ಹಿರೇಮಠ (BD Hiremath) ನುಗ್ಗಿ ಬೆದರಿಕೆ ಒಡ್ಡಿ, ಗಲಾಟೆ ಮಾಡಿದ ಪ್ರಸಂಗ ಶಾಸಕರ ಭವನದಲ್ಲಿ ಬುಧವಾರ ನಡೆಯಿತು.
ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಬೇಡ ಜಂಗಮ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಆಗ ಏಕಾಏಕಿ ಸಭೆಗೆ ನುಗ್ಗಿದ ಹಿರೇಮಠ ಅವರು, ಏರಿದ ಧ್ವನಿಯಲ್ಲಿ ಸಭೆಯ ಅಜೆಂಡಾದಲ್ಲಿ ಬೇಡ ಜಂಗಮ ಸಮುದಾಯ ಪರಿಶಿಷ್ಟಜಾತಿ ಮತ್ತು ಪಂಗಡದ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಕುರಿತು ಚರ್ಚಿಸುವ ಅಂಶ ಇದೆ. ಹೀಗಿರುವಾಗ ನಮ್ಮನ್ನು ಸಭೆಗೆ ಕರೆದು, ಅಭಿಪ್ರಾಯ ಕೇಳದೇ ಇರುವುದು ಸರಿಯಲ್ಲ. ಈಗಾಗಲೇ ಅನೇಕ ನ್ಯಾಯಾಲಯಗಳು ಸಹ ಬೇಡ ಜಂಗಮ ಪರಿಶಿಷ್ಟಜಾತಿ ವ್ಯಾಪ್ತಿಗೆ ಬರುತ್ತದೆ ಎಂದಿವೆ.
ಮೇಕೆದಾಟು ಯೋಜನೆಯ ಡಿಪಿಆರ್ ತಂದಿದ್ದು ಎಚ್ಡಿಕೆ: ನಿಖಿಲ್ ಕುಮಾರಸ್ವಾಮಿ
ಹೀಗಿರುವಾಗ ಸಮಿತಿ ಈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಬೇಡ ಜಂಗಮ ಸಮುದಾಯಕ್ಕೆ ಅನ್ಯಾಯವಾದರೆ ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ, ವಿಧಾನಸೌಧಕ್ಕೆ ಬೆಂಕಿ ಹಚ್ಚುವುದಾಗಿ ಏರಿದ ಧ್ವನಿಯಲ್ಲಿ ಹೇಳತೊಡಗಿದರು. ಇದಕ್ಕೆ ಸಭೆಯಲ್ಲಿ ಇದ್ದ ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ವಕೀಲರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ , ಅನ್ಯಾಯವಾಗಿದ್ದರೆ ಕೋರ್ಚ್‌ಗೆ ಹೋಗಿ ಎಂದು ಉತ್ತರಿಸಿದರು. ಇದಕ್ಕೆ ಸಮಾಧಾನಗೊಳ್ಳದ ಹಿರೇಮಠ, ಎಲ್ಲದಕ್ಕೂ ಕೋರ್ಚ್‌ಗೆ ಹೋಗಬೇಕೆಂದರೆ, ಕಾರ್ಯಾಂಗ, ಶಾಸಕಾಂಗ ಯಾಕೆ ಬೇಕು ಎಂದರು. ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರಸ್ವಾಮಿ ಅವರು, ಸಭೆಗೆ ನಿಮ್ಮನ್ನು ಆಹ್ವಾನಿಸಿಲ್ಲ.
ಸಮಿತಿ ಸರ್ಕಾರಕ್ಕೆ ಶಿಫಾರಸು, ಸಲಹೆ ಮಾತ್ರ ನೀಡುತ್ತದೆ. ಈ ರೀತಿ ಸಭೆಗೆ ಬಂದು ಮಾತನಾಡುವುದು ಸರಿಯಲ್ಲ ಎಂದು ಉತ್ತರಿಸಿದರು. ಈ ಮಧ್ಯೆ ಕೆಲವು ಸದಸ್ಯರು ಡಿಸಿಪಿ ಅವರನ್ನು ಕರೆಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಸಹ ಹಿರೇಮಠ ಅವರನ್ನು ಸಭೆಯಿಂದ ಹೊರಗೆ ಕರೆದುಕೊಂಡು ಹೋದರು. ನಂತರ ಹಿರೇಮಠ ಸಭೆ ನಡೆಯುತ್ತಿದ್ದ ಸಮೀಪದಲ್ಲಿ ಒಬ್ಬರೆ ಕುಳಿತು ಧರಣಿ ನಡೆಸತೊಡಗಿದರು. ಸ್ವಲ್ಪ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಮಂಜುನಾಥ್ ಅವರು ಅಧಿಕಾರಿಗಳಿಂದ ಘಟನೆ ವಿವರ ಪಡೆದುಕೊಂಡು ಹಿರೇಮಠ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದರು.
Covid 19 Spike: ಕೋವಿಡ್ 4ನೇ ಅಲೆ ಭೀತಿ ಎದುರಿಸಲು ರಾಜ್ಯ ಸರ್ಕಾರದಿಂದ ಸಿದ್ದತೆ!
ಹಕ್ಕುಚ್ಯುತಿಗೆ ನಿರ್ಧಾರ?: ಬಿ.ಡಿ. ಹಿರೇಮಠ ಅವರ ವರ್ತನೆ ವಿರುದ್ಧ ಕೆಲವು ಸದಸ್ಯರು ಪೊಲೀಸ್ ದೂರು ಸಲ್ಲಿಸುವಂತೆ ಸಲಹೆ ನೀಡಿದರು. ಆದರೆ ಪೊಲೀಸ್ ದೂರು ನೀಡಿದರೆ ಸಮಿತಿ ಅಧ್ಯಕ್ಷರು ಕೋರ್ಚ್‌ಗೆ ಅಲೆಯಬೇಕಾಗುತ್ತದೆ ಎಂಬ ಕಾರಣದಿಂದ ಹಿರೇಮಠ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
