ಹಾಸನದ ಪೊಲೀಸ್ ತರಬೇತಿ ಶಾಲೆಗೆ ADGP ಅಲೋಕ್ ಕುಮಾರ್ ಭೇಟಿ ನೀಡಿ, ತರಬೇತಿಯ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಬಿರಾರ್ಥಿಗಳ ಡ್ರಿಲ್ ಪ್ರದರ್ಶನ ಸರಿ ಇಲ್ಲದ ಕಾರಣ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಸನ (ಏ.9): ಹಾಸನ ಶಾಂತಿಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಗೆ ಇಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೂತನ ಶಿಬಿರಾರ್ಥಿಗಳು ಮತ್ತು ತರಬೇತಿ ಅಧಿಕಾರಿಗಳಿಗೆ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. ತರಬೇತಿಯ ಗುಣಮಟ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಲೋಕ್ ಕುಮಾರ್, ಶಿಬಿರಾರ್ಥಿಗಳಿಗೆ ಸರಿಯಾದ ತರಬೇತಿ ನೀಡದಿರುವುದಕ್ಕೆ ಸಿಬ್ಬಂದಿ ಮೇಲೆ ಹರಿಹಾಯ್ದರು.

ತರಬೇತಿಯಲ್ಲಿ ಕಂಡ ಅವ್ಯವಸ್ಥೆ

ಭೇಟಿಯ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಕಾರ್ಯಕ್ರಮದ ಮಧ್ಯೆಯೇ ಪೊಲೀಸ್ ಮಾರ್ಚ್ ಡ್ರಿಲ್ ಪರೀಕ್ಷಿಸಿದರು. ಆದರೆ, ಶಿಬಿರಾರ್ಥಿಗಳ ಡ್ರಿಲ್ ಪ್ರದರ್ಶನ ಸರಿಯಾಗಿಲ್ಲದಿರುವುದನ್ನು ಗಮನಿಸಿದ ಅವರು, 'ಮೂರು ತಿಂಗಳ ತರಬೇತಿ ಆಗಿದ್ದರೂ ಒಂದು ಅಟೆನ್ಷನ್ ಕೂಡ ಸರಿಯಾಗಿ ಮಾಡಲು ಬರುತ್ತಿಲ್ಲ. ನಿಮ್ಮ ಮೇಲೆ ಕ್ರಮ ಆಗಬೇಕು' ಎಂದು ಹರಿಹಾಯ್ದರು. ಈ ವೇಳೆ ತಾವೇ ಖುದ್ದು ಡ್ರಿಲ್ ಕಾಷನ್ ಕೊಡಿಸಿ, ಡೆಮೋ ಮಾಡಿ ತೋರಿಸಿದ ಅವರು, 'ಸರಿಯಾಗಿ ತರಬೇತಿ ಪಡೆಯದಿದ್ದರೆ ಇವರಿಗೆ ಔಟ್ ಪಾಸ್ ಕೊಡಬೇಡಿ' ಎಂದು ಸಿಬ್ಬಂದಿಗೆ ಆದೇಶಿಸಿದರು.

ಸಂಬಳ 54 ಸಾವಿರ, ಒಂದು ಡ್ರಿಲ್ ಮಾಡೋಕೆ ಬರೋಲ್ಲ:

ಅಲೋಕ್ ಕುಮಾರ್ ತರಬೇತಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ, 'ನಿಮಗೆ ಸಂಬಳ ಎಷ್ಟು? 54 ಸಾವಿರ ಸಂಬಳ! ಯಾವ ಕೆಲಸವೂ ಮಾಡದೆ ಟ್ರೈನಿಂಗ್‌ನಲ್ಲಿ ಅಷ್ಟು ಸಂಬಳ ನೀಡುತ್ತಿದ್ದಾರೆ. ಆದರೆ ಒಂದು ಡ್ರಿಲ್ ಮಾಡಲು ಸರಿಯಾದ ತರಬೇತಿ ಪಡೆದಿಲ್ಲ. ಆಡೋಕೆ, ಓಡೋಕೆ, ಓದೋಕೆ ಸಂಬಳ ಸಿಗುತ್ತಿದೆ. ಬೇರೆ ರಾಜ್ಯಗಳಲ್ಲಿ ತರಬೇತಿ ಶಿಬಿರಾರ್ಥಿಗಳಿಗೆ ಕೇವಲ ಭತ್ಯೆ ಮಾತ್ರ ನೀಡುತ್ತಾರೆ. ಆದರೆ ಕರ್ನಾಟಕ ಸರ್ಕಾರ ಟ್ರೈನೀ ಪೊಲೀಸ್‌ರನ್ನು ಒಳ್ಳೆ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ನೀವು ಮಾಡ್ತಿರೋದು ಏನು? ಎಂದು ಗರಂ ಆದರು.

ಹೇ, ನಿಮ್ಮ ಬೇರೆ ಶಿಷ್ಯನನ್ನು ಕರೆಯಿರಿ, ಅವರ ಡ್ರಿಲ್ ತೋರಿಸಿ

'ಹೇ, ನಿಮ್ಮ ಬೇರೆ ಶಿಷ್ಯನನ್ನು ಕರೆಯಿರಿ, ಅವರ ಡ್ರಿಲ್ ತೋರಿಸಿ' ಎಂದು ಸಿಬ್ಬಂದಿಗೆ ಸೂಚಿಸಿದರು ಈ ವೇಳೆ ತರಬೇತಿಯ ದುರ್ಬಲತೆಯನ್ನು ಎತ್ತಿ ತೋರಿಸಿದರು. ತರಬೇತಿಯಲ್ಲಿ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಅಲೋಕ್ ಕುಮಾರ್, ಸರಿಯಾಗಿ ತರಬೇತಿ ನೀಡದ ಅಧಿಕಾರಿಗಳ ವಿರುದ್ಧವೂ ಗರಂ ಆದರು. 'ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕು, ಇಂಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದರು.

ಒಟ್ಟಿನಲ್ಲಿ ಹಾಸನ ಪೊಲೀಸ್ ತರಬೇತಿ ಶಾಲೆಯ ಈ ಘಟನೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಶಿಬಿರಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ತರಬೇತಿಯ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿದರು. ಸರಿಯಾದ ಶಿಸ್ತು ಮತ್ತು ತರಬೇತಿ ಇಲ್ಲದಿದ್ದರೆ ಪೊಲೀಸ್ ಇಲಾಖೆಯ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದರು.