ಕನ್ನಡ ಪ್ರಾಧಿಕಾರಕ್ಕೆ ನಟಿ ಪೂಜಾ ಗಾಂಧಿ ವರದಿ: ಕನ್ನಡಿಗರ ಉದ್ಯೋಗಕ್ಕೆ ಹಲವು ಸಲಹೆ
ಮುಖ್ಯವಾಗಿ ಕನ್ನಡಿಗರು, ಕನ್ನಡೇತರರು ಹಾಗೂ ಹೊರ ನಾಡು, ಹೊರ ದೇಶದಲ್ಲಿರುವ ಕನ್ನಡಿಗರಿಗೆ ಪ್ರತ್ಯೇಕ ಗುರುತಿನ ಚೀಟಿ ಕೊಡಬೇಕು. ಆಗ ಸರ್ಕಾರ ಕೊಡುವ ಯೋಜನೆಗಳು ಸುಲಭವಾಗಿ ಕನ್ನಡಿಗರಿಗೆ ಸಿಗುವಂತಾಗುತ್ತದೆ. ಉದ್ಯೋಗಗಳು ಕೂಡ ಕನ್ನಡಿಗರಿಗೆ ಮಾತ್ರ ಲಭ್ಯವಾಗಲು ಸಾಧ್ಯವಾಗುತ್ತದೆ ಎಂಬ 3 ಯೋಜನೆಗಳ ಪ್ರಸ್ತಾವನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ಪೂಜಾಗಾಂಧಿ
ಬೆಂಗಳೂರು(ಸೆ.28): ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೊಸ ತಲೆಮಾರಿನ ಯುವಜನರು ಉದ್ಯೋಗ ಪಡೆಯಲು ಆಧುನಿಕ ಜಗತ್ತು ನಿರೀಕ್ಷಿಸುವ ಕೌಶಲ್ಯಕ್ಕೆ ತಕ್ಕಂತೆ ಹೇಗೆ ತಯಾರು ಮಾಡಬೇಕೆಂಬುದರ ಕುರಿತು ಚಿತ್ರನಟಿ ಪೂಜಾಗಾಂಧಿ ಅಧ್ಯಯನ ನಡೆಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಶುಕ್ರವಾರ ವರದಿ ಸ್ವೀಕರಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿ ಮಲೆ ಅವರು, ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದರು.
ಈ ಸಂದರ್ಭ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಇತರರು ಇದ್ದರು. ನಿರುದ್ಯೋಗಿ ಯುವಜನರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಸಿಗುವಂತೆ ರಾಜ್ಯ ಸರ್ಕಾರವೇ ವೆಬ್‌ಸೈಟ್ ಒಂದನ್ನು ಆರಂಭಿಸಬೇಕು. ಅದರಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಿಗುವ ಉದ್ಯೋಗ, ಬೇಕಾದ ವಿದ್ಯಾರ್ಹತೆ, ಕೌಶಲ್ಯದ ಕುರಿತು ಮಾಹಿತಿ ಲಭಿಸುವಂತೆ ಮಾಡಬೇಕು. ಜೊತೆಗೆ ಈ ವೆಬ್‌ಸೈಟ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ತಾವು ಪಡೆದ ಶಿಕ್ಷಣ, ತಮ್ಮಲ್ಲಿನ ಕೌಶಲ್ಯ ಇತ್ಯಾದಿ ಮಾಹಿತಿ ಅಪ್ ಲೋಡ್ ಮಾಡಬೇಕು. ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ಸಿಗುವಂತೆ ಸೌಲಭ್ಯ ಒದಗಿಸಿದರೆ, ಕಂಪನಿಗಳಿಗೆ ಬೇಕಾದ ಕೌಶಲ್ಯವಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಪದವಿ ಕಾಲೇಜುಗಳಲ್ಲಿ 30 ಅಂಕಗಳನ್ನಿಟ್ಟು ಕೌಶಲ್ಯಾಭಿವೃದ್ಧಿ ವಿಷಯವನ್ನು ಕಡ್ಡಾಯ ಮಾಡಬೇಕು. ಆಗ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ಬರುವಾಗ ಆಧುನಿಕ ಕೌಶಲ್ಯದ ಶಿಕ್ಷಣ ಪಡೆದಿರುತ್ತಾರೆ. ಜೊತೆಗೆ ಆಧುನಿಕ ತಂತ್ರಜ್ಞಾನದ ಬಳಕೆಯ ಕುರಿತು ಕೌಶಲ್ಯ ಕಡಿಮೆ ಇದ್ದಾಗ ಅದನ್ನು ಹೆಚ್ಚು ಮಾಡಲು ಕಾಲೇಜು ಗಳಲ್ಲಿ ಕಾರ್ಯಕ್ರಮ ಮಾಡಬೇಕೆಂದು ಸಲಹೆ ನೀಡಿದ್ದಾರೆ.
ಹೊರಗಿನವರಿಗೆ ಕೋಟಿ ಕೋಟಿ ಕೊಡ್ತಾರೆ... ಕನ್ನಡಿಗರಿಗೆ ಬೆಲೆನೇ ಇಲ್ವಾ: ಪೂಜಾ ಗಾಂಧಿ ಬೇಸರ
ಮುಖ್ಯವಾಗಿ ಕನ್ನಡಿಗರು, ಕನ್ನಡೇತರರು ಹಾಗೂ ಹೊರ ನಾಡು, ಹೊರ ದೇಶದಲ್ಲಿರುವ ಕನ್ನಡಿಗರಿಗೆ ಪ್ರತ್ಯೇಕ ಗುರುತಿನ ಚೀಟಿ ಕೊಡಬೇಕು. ಆಗ ಸರ್ಕಾರ ಕೊಡುವ ಯೋಜನೆಗಳು ಸುಲಭವಾಗಿ ಕನ್ನಡಿಗರಿಗೆ ಸಿಗುವಂತಾಗುತ್ತದೆ. ಉದ್ಯೋಗಗಳು ಕೂಡ ಕನ್ನಡಿಗರಿಗೆ ಮಾತ್ರ ಲಭ್ಯವಾಗಲು ಸಾಧ್ಯವಾಗುತ್ತದೆ ಎಂಬ 3 ಯೋಜನೆಗಳ ಪ್ರಸ್ತಾವನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪೂಜಾಗಾಂಧಿ ಅವರು ಸಲ್ಲಿಸಿದ್ದಾರೆ.
ಸರ್ಕಾರಕ್ಕೆ ಪ್ರಸ್ತಾವನೆ: ಬಿಳಿಮಲೆ
ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಕನ್ನಡ ಅಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಕೌಶಲ್ಯಾಭಿವೃದ್ಧಿ ಕೇಂದ್ರ, ಮುಖ್ಯಕಾರ್ಯದರ್ಶಿ ಮತ್ತು ಇ -ತಂತ್ರಜ್ಞಾನ ವಿಭಾಗ ಸೇರಿ ಬಹುರಾಷ್ಟ್ರೀಯ ಕಂಪನಿಗಳ ಅಪೇಕ್ಷೆ ಏನಿದೆ ಎಂಬುದನ್ನು ಅರಿತು ಯುವಜನರನ್ನು ಅದಕ್ಕೆ ತಕ್ಕಂತೆ ಸಜ್ಜುಗೊಳಿಸಲು ಸಾಧ್ಯವಾಗುತ್ತದೆ. ಇದಕ್ಕೆ ಬಹುರಾಷ್ಟ್ರೀಯ ಕಂಪನಿಗಳ ನೆರವು ಪಡೆದು ಮಾರ್ಗದರ್ಶನ ಮಾಡುವುದರ ಜೊತೆಗೆ ಸಿಎಸ್‌ಆರ್ ಫಂಡ್ ಬಳಸಿ ಯುಜನರಿಗೆ ಆಧುನಿಕ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಸಹಕಾರಿಯಾಗಲಿದೆ. ಈ ಬಗ್ಗೆ ಸರ್ಕಾರದೊಂದಿಗೆ ಪ್ರಸ್ತಾಪಿಸ ಲಾಗುವುದು ಎಂದರು.