Asianet Suvarna News Asianet Suvarna News

ಕಾವೇರಿಗಾಗಿ ನಿಲ್ಲದ ಹೋರಾಟ: ಪ್ರತಿಭಟನೆಗೆ ನಟಿ ಹರ್ಷಿಕಾ ಪೂಣಚ್ಚ ಸಾಥ್

ಮಂಡ್ಯದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ ಶನಿವಾರ ಚಿತ್ರನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಆನಂದ್ ಆರ್ಯ ಪಾಲ್ಗೊಂಡು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. 

Actress Harshika Poonacha joins protest for Cauvery Water Issue At Mandya gvd
Author
First Published Oct 8, 2023, 7:02 AM IST

ಮಂಡ್ಯ (ಅ.08): ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಾದ ಮಂಡ್ಯ ಹಾಗೂ ಚಾಮರಾಜನಗರಗಳಲ್ಲಿ ಶನಿವಾರವೂ ಪ್ರತಿಭಟನೆಗಳು ನಡೆದವು. ಮಂಡ್ಯದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ ಶನಿವಾರ ಚಿತ್ರನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಆನಂದ್ ಆರ್ಯ ಪಾಲ್ಗೊಂಡು ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಬೇಬಿ ಬೆಟ್ಟದ ಶ್ರೀರಾಮಯೋಗೇಶ್ವರ ಮಠದ ಶ್ರೀ ಶಿವಬಸವಸ್ವಾಮಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಈ ಮಧ್ಯೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ರಾಜ್ಯ ಸರ್ಕಾರದ ಪ್ರತಿನಿಧಿಗಳಿಗೆ ಕಾವೇರಿ ಚಳವಳಿ ಸ್ಥಳಕ್ಕೆ ನಿರ್ಬಂಧ ವಿಧಿಸಿರುವುದಾಗಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದ್ದಾರೆ. ಈ ಮಧ್ಯೆ, ಶ್ರೀರಂಗಪಟ್ಟಣದಲ್ಲಿ ಹಳೆ ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಕುವೆಂಪು ವೃತ್ತದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಕಪರನಕೊಪ್ಪಲು ಗ್ರಾಮಸ್ಥರು ಎತ್ತಿನ ಗಾಡಿ ಮೆರವಣಿಗೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಚಾಮರಾಜನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಎದೆ ಮೇಲೆ ಕಲ್ಲು ಚಪ್ಪಡಿ ಹಾಕಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.

Bitcoin Scam: 4 ಪೊಲೀಸ್‌ ಅಧಿಕಾರಿಗಳು ಸೇರಿ 6 ಮಂದಿಗೆ ಎಸ್‌ಐಟಿ ದಾಳಿ

ಎದೆ ಮೇಲೆ ಕಲ್ಲು ಚಪ್ಪಡಿ ಹಾಕಿಕೊಂಡು ಆಕ್ರೋಶ: ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಎದೆ ಮೇಲೆ ಕಲ್ಲು ಚಪ್ಪಡಿ ಹಾಕಿಕೊಂಡು ವಿನೂತನ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯ ತಡೆ ನಡೆಸಿ, ಎದೆ ಮೇಲೆ ಕಲ್ಲು ಚಪ್ಪಡಿ ಹಾಕಿಕೊಂಡು ಕೇಂದ್ರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಲಂಚ ಪಡೆದ ಹಣದಲ್ಲಿ ಬಿಟ್‌ ಕಾಯಿನ್‌ ಖರೀದಿಸಿದ್ದ ಬಿಎಂಟಿಸಿ ಅಧಿಕಾರಿಗಳು!

ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಕನ್ನಡಿಗರ ಪಾಲಿಗೆ ಕಲ್ಲು ಚಪ್ಪಡಿ ಹಾಕಿವೆ. ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರೈತರು, ಕನ್ನಡಿಗರ ಎದೆಮೇಲೆ ಕಲ್ಲುಚಪ್ಪಡಿ ಹಾಕಿದೆ. ಇದನ್ನು ಖಂಡಿಸಿ ನಾವು ಎದೆಮೇಲೆ ಕಲ್ಲು ಚಪ್ಪಡಿ ಹಾಕಿಕೊಂಡು ವಿನೂತನ ಪ್ರತಿಭಟನೆ ಮಾಡಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಚಾ.ಹ.ರಾಮು, ರವಿಚಂದ್ರಪ್ರಸಾದ್ ಕಹಳೆ, ಗು.ಪುರುಷೋತ್ತಮ್, ನಿಜಧ್ವನಿಗೋವಿಂದರಾಜು, ಸೋಮವಾರಪೇಟೆ ಮಂಜು, ಅಂಕಶೆಟ್ಟಿ, ತಾಂಡವಮೂರ್ತಿ ಇತರರು ಭಾಗವಹಿಸಿದ್ದರು.

Follow Us:
Download App:
  • android
  • ios