ಬಿಟ್‌ ಕಾಯಿನ್ ಹಗರಣ ಸಂಬಂಧ ಸಿಸಿಬಿಯಲ್ಲಿ ಹಿಂದೆ ಇದ್ದ ನಾಲ್ವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಆರು ಮಂದಿಗೆ ಸೇರಿದ 9 ಸ್ಥಳಗಳ ಮೇಲೆ ವಿಶೇಷ ತನಿಖಾ ದಳ (ಎಸ್‌ಐಟಿ) ಶನಿವಾರ ದಿಢೀರ್‌ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ. 

ಬೆಂಗಳೂರು (ಅ.08): ಬಿಟ್‌ ಕಾಯಿನ್ ಹಗರಣ ಸಂಬಂಧ ಸಿಸಿಬಿಯಲ್ಲಿ ಹಿಂದೆ ಇದ್ದ ನಾಲ್ವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಆರು ಮಂದಿಗೆ ಸೇರಿದ 9 ಸ್ಥಳಗಳ ಮೇಲೆ ವಿಶೇಷ ತನಿಖಾ ದಳ (ಎಸ್‌ಐಟಿ) ಶನಿವಾರ ದಿಢೀರ್‌ ದಾಳಿ ನಡೆಸಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ. ಡಿವೈಎಸ್ಪಿ ಶ್ರೀಧರ್‌ ಪೂಜಾರ್‌, ಇನ್ಸ್‌ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಚಂದ್ರಾಧರ್, ಜಿ.ಲಕ್ಷ್ಮೀಕಾಂತಯ್ಯ, ಸೈಬರ್‌ ತಜ್ಞರಾದ ಸಂತೋಷ್ ಹಾಗೂ ಗಗನ್ ಅವರ ಮನೆಗಳ ಮೇಲೆ ಎಸ್ಐಟಿ ದಾಳಿ ನಡೆಸಿದ್ದು, ಬಿಟ್‌ ಕಾಯಿನ್‌ ಹಗರಣ ಬೆಳಕಿಗೆ ಬಂದಾಗ ಸಿಸಿಬಿಯಲ್ಲಿ ಈ ನಾಲ್ವರೂ ಇನ್ಸ್‌ಪೆಕ್ಟರ್‌ಗಳಾಗಿದ್ದರು.

ಇನ್ನು ದಾಳಿ ವೇಳೆ 4 ಲ್ಯಾಪ್‌ಟಾಪ್‌, 8 ಮೊಬೈಲ್‌ಗಳು, 2 ಎನ್‌ಎಎಸ್‌ ಸ್ಟೋರೇಜ್‌ ಡಿವೈಸ್‌, 10 ಹಾರ್ಡ್‌ಡಿಸ್ಕ್‌ಗಳು, 5 ಪೆನ್‌ಡ್ರೈವ್‌ಗಳು ಹಾಗೂ 1 ಮೆಮೋರಿ ಕಾರ್ಡ್ ಸೇರಿದಂತೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕ್ಷ್ಯನಾಶ ಮಾಡಿದ ಆರೋಪ ಬಿಟ್‌ ಕಾಯಿನ್ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ ಹಾಗೂ ಕೆಲವು ದಾಖಲೆಗಳನ್ನು ತಿರುಚಿದ ಆರೋಪಕ್ಕೆ ಸಿಸಿಬಿ ಹಳೆಯ ಅಧಿಕಾರಿಗಳು ತುತ್ತಾಗಿದ್ದು, ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ಅನ್ನು ಸಹ ಎಸ್‌ಐಟಿ ದಾಖಲಿಸಿದೆ. 

Bitcoin ಹಗರಣಕ್ಕೆ ಮತ್ತೊಂದು ಟ್ವಿಸ್ಟ್: ಭೂಗತವಾಗಿದ್ದ ನಟೋರಿಯಸ್ ಹ್ಯಾಕರ್ ಅರೆಸ್ಟ್!

ಅದರನ್ವಯ ತನಿಖೆಗಿಳಿದ ಎಸ್‌ಐಟಿ ಅಧಿಕಾರಿಗಳು, ಶನಿವಾರ ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಹುಳಿಮಾವು, ಬೊಮ್ಮನಹಳ್ಳಿ ಹಾಗೂ ಕೋರಮಂಗಲ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಎಸ್‌ಐಟಿ ಕಾರ್ಯಾಚರಣೆ ನಡೆದಿದೆ. ಈ ಅಧಿಕಾರಿಗಳ ಮನೆಗಳು ಹಾಗೂ ಸೈಬರ್ ತಜ್ಞರ ಕಚೇರಿಗಳಲ್ಲಿ ಕೂಡ ಬೆಳಗ್ಗೆಯಿಂದ ಸಂಜೆವರೆಗೆ ಎಸ್‌ಐಟಿ ಜಾಲಾಡಿದೆ. ಈ ವೇಳೆ ಸಿಸಿಬಿಯ ಹಳೆ ಇನ್ಸ್‌ಪೆಕ್ಟರ್‌ಗಳು ಕೂಡಾ ಮನೆಯಲ್ಲೇ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಶ್ರೀಧರ್ ಪೂಜಾರ್ ಹಾಗೂ ಬಿಟ್‌ ಕಾಯಿನ್ ಪ್ರಕರಣಗಳಲ್ಲಿ ಪ್ರಶಾಂತ್ ಬಾಬು, ಚಂದ್ರಾಧರ್‌ ಹಾಗೂ ಲಕ್ಷ್ಮೀಕಾಂತಯ್ಯ ತನಿಖಾಧಿಕಾರಿಗಳಾಗಿದ್ದರು. ಬಿಟ್‌ ಕಾಯಿನ್ ತನಿಖೆಗೆ ಖಾಸಗಿ ಕಂಪನಿಯ ಸೈಬರ್ ತಜ್ಞರಾದ ಸಂತೋಷ್ ಹಾಗೂ ಗಗನ್ ನೆರವನ್ನು ಈ ಅಧಿಕಾರಿಗಳು ಪಡೆದಿದ್ದರು. ಹೀಗಾಗಿ ಬಿಟ್‌ ಕಾಯಿನ್ ಹಗರಣದ ಹಣ ವರ್ಗಾವಣೆ ಸಂಬಂಧ ಸೈಬರ್ ತಜ್ಞರ ಮನೆಗಳು ಹಾಗೂ ಕಚೇರಿಗಳಲ್ಲಿ ಸಹ ತಪಾಸಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಸಿಐಡಿಗೆ ವರ್ಗವಾಗಿರುವ ಶ್ರೀಧರ್ ಪೂಜಾರ್: ಎರಡು ದಿನಗಳ ಹಿಂದಷ್ಟೇ ಬಿಎಂಟಿಎಫ್‌ನಿಂದ ಸಿಐಡಿಗೆ ಡಿವೈಎಸ್ಪಿ ಶ್ರೀಧರ್ ಪೂಜಾರ್ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ಬಿಟ್‌ ಕಾಯಿನ್ ಪ್ರಕರಣದಲ್ಲಿ ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸಿಐಡಿ ಅಧೀನದಲ್ಲಿರುವ ಎಸ್‌ಐಟಿ ವಿರುದ್ಧ ಹೈಕೋರ್ಟ್‌ಗೆ ಶ್ರೀಧರ್ ಪೂಜಾರ್ ಅರ್ಜಿ ಸಲ್ಲಿಸಿದ್ದರು. ಹೀಗಿದ್ದರೂ ಸಿಐಡಿಗೆ ಶ್ರೀಧರ್ ಪೂಜಾರ್ ಅವರನ್ನು ಇಲಾಖೆ ವರ್ಗಾವಣೆಗೊಳಿಸಿದ್ದು, ಇದುವರೆಗೆ ಅವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ.

ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ: ಡಿಕೆಶಿ

ಇನ್ನು ಆಡುಗೋಡಿಯ ವಿಚಾರಣಾ ಕೇಂದ್ರದಲ್ಲಿರುವ ಸಿಸಿಬಿಯ ತಾಂತ್ರಿಕ ವಿಭಾಗದಲ್ಲಿ ಪ್ರಶಾಂತ್ ಬಾಬು ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಸುದೀರ್ಘ ರಜೆ ಪಡೆದು ಅವರು ತೆರಳಿದ್ದಾರೆ. ತುಮಕೂರು ಗ್ರಾಮಾಂತರ ವೃತ್ತಕ್ಕೆ ಲಕ್ಷೀಕಾಂತಯ್ಯ ನಿಯೋಜಿತರಾಗಿದ್ದಾರೆ. ಇನ್ನುಳಿದಂತೆ ಕೇಂದ್ರ ವಲಯದಲ್ಲಿ ಚಂದ್ರಾಧರ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.