ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಆಗಸ್ಟ್‌ 14ರವರೆಗೆ ದರ್ಶನ್‌ ಇನ್ನು ಜೈಲಿನಲ್ಲಿಯೇ ಇರಲಿದ್ದಾರೆ. 


ಬೆಂಗಳೂರು (ಆ.1): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ಗೆ ಜೈಲೇ ಗತಿಯಾಗಿದೆ. ಮತ್ತೊಮ್ಮೆ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೊಲೆ ಕೇಸ್‌ನಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಎಲ್ಲಾ ಆರೋಪಿಗಳನ್ನು 24 ಎಸಿಎಂಎಂ ಕೋರ್ಟ್‌ಗೆ ಜೈಲು ಸಿಬ್ಬಂದಿ ಹಾಜರುಪಡಿಸಿದ್ದರು. ಈ ವೇಳೆ ಜಡ್ಜ್‌ ಎಲ್ಲಾ ಆರೋಪಿಗಳ ಹೆಸರನ್ನು ಕೂಗಿ ಹೇಳಿದ್ದಾರೆ. ಹೆಸರು ಕೂಗುತ್ತಿದ್ದಂತೆ ಆರೋಪಿಗಳು ಕೈ ಎತ್ತಿ ಹಾಜರಿ ಹೇಳಿದ್ದಾರೆ. ಆ ಬಳಿಕ ಎಲ್ಲರನ್ನೂ ಆಗಸ್ಟ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡುವ ಆದೇಶವನ್ನು ಜಡ್ಜ್‌ ವಿಶ್ವನಾಥ ಸಿ.ಗೌಡರ್ ಆದೇಶ ಹೊರಡಿಸಿದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳು ಹಾಜಾರಾದ ಬೆನ್ನಲ್ಲಿಯೇ ಎಲ್ಲರಿಗೂ ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವ ಆದೇಶವನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನೀಡಿತು. ಪರಪ್ಪನ ಅಗ್ರಹಾರ ಜೈಲು ಹಾಗೂ ತುಮಕೂರು ಜೈಲಿನಿಂದ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆಗೆ ಪೊಲೀಸರು ಈ ಕಾರಣಗಳನ್ನು ನೀಡಿದ್ದಾರೆ: ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಕೇಸಿಗೆ ತೊಂದರೆಯಾಗಲಿದೆ. ಸಾಕ್ಷಿದಾರರು ಆರೋಪಿಗಳ ಐಡೆಂಟಿಫಿಕೇಷನ್ ಪೆರೇಡ್ ತಡೆಯುವ ಸಾಧ್ಯತೆಯೂ ಇದೆ. ಗುರುತು ಹಚ್ಚದಂತೆ ತಡೆದು ಸಾಕ್ಷಿಗಳಿಗೆ ಬೆದರಿಕೆ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಅದಲ್ಲದೆ, ತಾಂತ್ರಿಕ ಸಾಕ್ಷಿಗಳ ಪರಿಶೀಲನೆ ವೇಳೆ ಎಲ್ಲಾ ಆರೋಪಿಗಳ ಪಾತ್ರ ದೃಢವಾಗಿದೆ. ಇನ್ನೂ ಹಲವಾರು ತಾಂತ್ರಿಕ & ವೈಜ್ಞಾನಿಕ ಸಾಕ್ಷಿ ಪರಿಶೀಲನೆ ನಡೆಯುತ್ತಿದೆ. ಕೆಲವನ್ನು ತಜ್ಞರ ಪರಿಶೀಲನೆಗೆ ಕಳುಹಿಸಿದ್ದು ಅದರ ವರದಿಗಳು ಬರಬೇಕಿದೆ. ಸೀಜ್ ಆಗಿರುವ ಸಿಡಿಆರ್ ಡಿವಿಆರ್ ಡಾಟಾ ರಿಟ್ರಿವ್ ನಡೆಯುತ್ತಿದೆ. ಈ ಡೇಟಾ ಪಡೆದು ಆರೋಪಿಗಳ ವಿಚಾರಣೆ ನಡೆಸೋದು ಬಾಕಿ ಇದೆ. ನೇರವಾಗಿ ಭಾಗಿಯಾದ ಆರೋಪಿಗಳ ಸಾಕ್ಷಿ ಸಂಗ್ರಹ ಕೂಡ ಬಾಕಿ ಇದೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ.

ಅದರೊಂದಿಗೆ ಕೊಲೆ ಕೃತ್ಯದ ಮುಂಚೆ, ಬಳಿಕ ಅನೇಕರ ಸಂಪರ್ಕ ಇನ್ನೂ ಲಭ್ಯವಿದೆ ಇನ್ನೂ ಅನೇಕ ಸಾಕ್ಷಿ ಲಭ್ಯವಿದ್ದು 164 ಹೇಳಿಕೆ ದಾಖಲಿಸಬೇಕಿದೆ. ಆರೋಪಿಗಳು ಪ್ರಭಾವಿಗಳು, ಹಣಬಲ & ಅಭಿಮಾನಿ ಬಳಗ ಹೊಂದಿದ್ದು, ಜಾಮೀನು ಸಿಕ್ಕರೆ ಅಭಿಮಾನಿಗಳ ಬಳಸಿ ಸಾಕ್ಷಿ ನಾಶ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. ಅದರೊಂದಿಗೆ ಎಫ್ಎಸ್ಎಲ್ ತಜ್ಞರ ವರದಿ‌ ಬರಬೇಕಿದೆ. ಕೃತ್ಯಕ್ಕೆ ಬಳಸಿದ ವಾಹನದಲ್ಲಿ ಫಿಂಗರ್ ಪ್ರಿಂಟ್ ಲಭ್ಯವಾಗಿದೆ, ಅದರ ರಿಕವರಿ ಬಾಕಿ ಇದೆ ಎಂದು ತಿಳಿಸಲಾಗಿದೆ.

ಸಿನೆಮಾ ಸ್ಟಾರ್‌ಗಳಿಗೆ ಯೋಗ್ಯತೆ ಮೀರಿ ಬಿಲ್ಡಪ್‌ ಕೊಡ್ತಿದ್ದಾರೆ: ದರ್ಶನ್‌ ಕೇಸ್ ಬಗ್ಗೆ ಅಹಿಂಸಾ ಚೇತನ್ ಹೇಳಿಕೆ

ಪ್ರಕರಣದ ಆರೋಪಿಗಳು ಪ್ರಭಾವಿಗಳು ಹಾಗೂ ಹಣಬಲ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ತಾವು ಅಥವಾ ತಮ್ಮ ಅಭಿಮಾನಿ ಬಳಗದ ಮೂಲಕ ಪ್ರಕರಣದ ಸಾಕ್ಷಿದಾರರಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಸಾಧ್ಯತೆ ಇದೆ. ಬೆದರಿಕೆ ಮತ್ತು ಹಣದ ಆಮಿಷ ತೋರಿಸಬಹುದು. ಮೃತನ ಕುಟುಂಬದವರಿಗೆ ಹೆದರಿಸುವ ಅಥವಾ ಆಮಿಷ ತೋರಿಸಿ ಸಾಕ್ಷಿ ಹೇಳದಂತೆ ಮಾಡುವ ಸಂಭವ ಇದೆ. ಇತ್ತಿಚೆಗೆ ಆರೋಪಿಗಳ ಪರ ಕೆಲವು ವ್ಯಕ್ತಿಗಳು ಮೃತನ ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಎಂದು ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್: ಜೈಲಿಗೆ ತೆರಳಿ ನಟ ದರ್ಶನ್‌ಗೆ ಕೊಲ್ಲೂರು ಪ್ರಸಾದ ನೀಡಿದ ಪತ್ನಿ