ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಒಟ್ಟು 10 ದಾಖಲೆಗಳನ್ನು ಒಪ್ಪುವಂತೆ ಕೋರಿ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಸೋಮವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು.
ಬೆಂಗಳೂರು (ನ.11): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಒಟ್ಟು 10 ದಾಖಲೆಗಳನ್ನು ಒಪ್ಪುವಂತೆ ಕೋರಿ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಸೋಮವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು. ಸೋಮವಾರ ಪ್ರಕರಣವು ನ್ಯಾಯಾಧೀಶ ಐ.ಪಿ.ನಾಯ್ಕ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಹಾಜರಾಗಿ, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 294 ಅಡಿಯಲ್ಲಿ ಅರ್ಜಿ ಸಲ್ಲಿಸಿದರು.
ಪ್ರಕರಣದ ಮುಖ್ಯ ವಿಚಾರಣೆಗೆ ಒಳಪಡಿಸಬಹುದಾದ ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ವಿವರಗಳನ್ನು ಹೊಂದಿರುವ ಒಟ್ಟು 10 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅವುಗಳನ್ನು ಆರೋಪಿಗಳ ಒಪ್ಪಿಗೆ ಮೇರೆಗೆ ಅಂಗೀಕರಿಸಬೇಕು ಎಂದು ಕೋರಿದರು. ಅದಕ್ಕೆ ಆರೋಪಿಗಳ ಪರ ವಕೀಲರು, ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನಮ್ಮ ನಿಲುವು ತಿಳಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಾಧೀಶರು ಒಪ್ಪಿ ವಿಚಾರಣೆಯನ್ನು ನ.19ಕ್ಕೆ ಮುಂದೂಡಿದರು. ವಿಚಾರಣೆಗೆ ಜೈಲಿನಿಂದ ದರ್ಶನ್ ಮತ್ತು ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
4ನೇ ಆರೋಪಿ ರಾಘವೇಂದ್ರ ಮತ್ತು 16ನೇ ಆರೋಪಿ ಕೇಶವಮೂರ್ತಿ ಹೊರತುಪಡಿಸಿ ಜಾಮೀನು ಮೇಲಿರುವ ಉಳಿದ ಎಂಟು ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಕೇಶವಮೂರ್ತಿ ಮತ್ತು ರಾಘವೇಂದ್ರ ಪರ ವಕೀಲರು ವಿಚಾರಣೆಯಿಂದ ವಿನಾಯ್ತಿ ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಇದೇ ವೇಳೆ ಜೈಲಿನಲ್ಲಿರುವ 6ನೇ ಆರೋಪಿ ಜಗದೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರಿ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು.
ದರ್ಶನ್ ಮೇಲಿನ ಆರೋಪವೇನು?
ರೇಣುಕಾಸ್ವಾಮಿ ಅಪಹರಿಸಿ ಆರ್.ಆರ್.ನಗರದ ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ ಜೂ.8ರಂದು ಸಂಜೆ ಹೋಗಿದ್ದ 2ನೇ ಆರೋಪಿ ದರ್ಶನ್ ‘ನನ್ನ ಹೆಂಡತಿಗೆ ಮೆಸೇಜ್ ಮಾಡ್ತೀಯಾ ಸೂ.. ಮ..ನೇ ಎಂದು ರೇಣುಕಾಸ್ವಾಮಿಗೆ ಬೈದು ಅವಮಾನ ಉಂಟು ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 149, ಕೊಲೆ ಮಾಡುವ ಉದ್ದೇಶದಿಂದ ಎರಡು ಬಾರಿ ಮುಖಕ್ಕೆ ಹೊಡೆದು, ಶೂ ಕಾಲಿನಿಂದ ಎದೆಗೆ ಜೋರಾಗಿ ಒದ್ದು, ಮರದ ರೆಂಬೆಯಿಂದ ಬೆನ್ನು, ಮೊಣಕಾಲುಗಳಿಗೆ ಹಲ್ಲೆ ಮಾಡಿದ್ದಕ್ಕೆ, ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ, ಆತನ ಮರ್ಮಾಂಗಕ್ಕೆ ತುಳಿದು, ಒದ್ದು ಮಾರಾಣಾಂತಿಕ ಹಲ್ಲೆ ಮಾಡಿದ ಅಪರಾಧಕ್ಕೆ ಐಪಿಸಿ ಸೆಕ್ಷನ್ 355 ಅಡಿ, ಜೀವ ಬೆದರಿಕೆ ಹಾಕಿದ್ದು ಮತ್ತು ಕೊಲೆ ಮಾಡಿರುವುದಕ್ಕೆ ಐಪಿಸಿ ಸೆಕ್ಷನ್ 302, ನಂತರ ಕೊಲೆ ಕೃತ್ಯವನ್ನು ಬಚ್ಚಿಡಲು ಹಾಗೂ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದಕ್ಕೆ ಐಪಿಸಿ ಸೆಕ್ಷನ್ 201ರ ಅಡಿ ಸಾಕ್ಷ್ಯನಾಶ ಆರೋಪ ನಿಗದಿಪಡಿಸಲಾಗಿದೆ.
