ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ಅಧಿಕಾರ ನೀಡಿದವರನ್ನು ಸತಾಯಿಸುವ ಕೆಲಸವಾಗಬಾರದು. ಸಕಾಲ ಸೇವೆಯನ್ನು ಅಧಿಕಾರಿಗಳು ಹಗುರವಾಗಿ ತೆಗೆದುಕೊಳ್ಳದೆ, ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಕೆಲಸ ಮಾಡಬೇಕು:  ಕೃಷ್ಣ ಬೈರೇಗೌಡ 

ಬೆಂಗಳೂರು(ಜ.11): ವೈದ್ಯಕೀಯ ಶಿಕ್ಷಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 500ಕ್ಕೂ ಹೆಚ್ಚಿನ ಸೇವೆಗಳನ್ನು ಹೊಸದಾಗಿ ಸಕಾಲ ಸೇವೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಬುಧವಾರ ಸಕಾಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸದ್ಯ ಸಕಾಲ ಅಡಿಯಲ್ಲಿ 100 ಇಲಾಖೆಗಳ 1,201 ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಅದರ ಜತೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಅದರ ಅಧೀನ ಇಲಾಖೆಗಳ 130 ಹೊಸ ಸೇವೆಗಳು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮತ್ತು ಅದರ ಅಧೀನ ಇಲಾಖೆಗಳ ಹೊಸ 63 ಸೇವೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 16 ಸೇವೆಗಳು ಸೇರಿದಂತೆ ಇನ್ನಿತರ ಇಲಾಖೆಗಳ 500ಕ್ಕೂ ಹೆಚ್ಚಿನ ಹೊಸ ಸೇವೆಗಳನ್ನು ಸಕಾಲ ಅಡಿಯಲ್ಲಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅವುಗಳನ್ನು ಪರಿಶೀಲಿಸಿ, ಹೊಸ ಸೇವೆಗಳು ಜನರಿಗೆ ದೊರಕುವಂತೆ ಮಾಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಮೌಲ್ಯಯುತ ರಾಜಕಾರಣಿಗಳಿಗೆ ಬೆಲೆ ಇಲ್ಲ: ಸಚಿವ ಕೃಷ್ಣ ಬೈರೇಗೌಡ

ಇದೇ ವೇಳೆ ಸಕಾಲ ಸೇವೆ ನೀಡುವಲ್ಲಿನ ವಿಳಂಬದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ಅಧಿಕಾರ ನೀಡಿದವರನ್ನು ಸತಾಯಿಸುವ ಕೆಲಸವಾಗಬಾರದು. ಸಕಾಲ ಸೇವೆಯನ್ನು ಅಧಿಕಾರಿಗಳು ಹಗುರವಾಗಿ ತೆಗೆದುಕೊಳ್ಳದೆ, ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಾಲಿನಲ್ಲಿ 29 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ ಶೇ. 5ರಷ್ಟು ಸೇವೆಗಳನ್ನು ಮಾತ್ರ ವಿಳಂಬವಾಗಿ ನೀಡಲಾಗಿದೆ. ಶೇ. 7ರಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸಕಾಲ ಕಾಯ್ದೆ 5(2) ರ ಪ್ರಕಾರ ಯಾವುದೇ ಅರ್ಜಿಯನ್ನು ತಿರಸ್ಕರಿಸಬೇಕಾದರೆ ಸೂಕ್ತ ಕಾರಣವನ್ನು ನಮೂದಿಸಬೇಕು. ಆದರೆ, ಅನೇಕರು ಈ ನಿಯಮವನ್ನು ಪಾಲಿಸಿಲ್ಲ ಎಂದು ವಿವರಿಸಿದರು.

ಜನವರಿ ತಿಂಗಳೊಳಗೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್: ಕಂದಾಯ ಸಚಿವ ಕೃಷ್ಣಬೈರೇಗೌಡ!

ಅನ್‌ಲೈನ್‌ನಲ್ಲೇ ಸಕಾಲ ಸೇವೆಗೆ ಕ್ರಮ

ಕಂದಾಯ ಇಲಾಖೆಯ ಎಲ್ಲ ಸೇವೆಗಳನ್ನೂ ಆನ್‌ಲೈನ್‌ ಮೂಲಕ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಸಕಾಲ ಸೇವೆಗಳನ್ನೂ ಆನ್‌ಲೈನ್‌ ಮೂಲಕ ನೀಡಬೇಕು. ಇನ್ನು ಮುಂದೆ ಸಕಾಲ ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸ್ವೀಕರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಸರ್ಕಾರದ ಗ್ರಾಮ 1 ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಮೊಬೈಲ್‌ನಲ್ಲಿ ಅದನ್ನು ಪಡೆಯುವಂತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಇದರಿಂದ ಜನರು ತಮ್ಮ ಮೊಬೈಲ್‌ ಮೂಲಕವೇ ಸಕಾಲ ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು. ಹಾಗಾದಾಗ ಅರ್ಜಿ ವಿಲೇವಾರಿ, ಸೇವೆ ನೀಡುವಲ್ಲಿನ ವಿಳಂಬದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಸಿಗಲಿದೆ. ಮುಂದಿನ 5 ವರ್ಷಗಳಲ್ಲಿ ಸಕಾಲ ಸಂಪೂರ್ಣ ಡಿಜಿಟಲೀಕರಣ ಆಗಬೇಕು ಎಂದು ಅವರು ತಿಳಿಸಿದರು.