ಬೆಂಗಳೂರು (ನ.20):  ಮಾದಕ ವಸ್ತುಗಳ ಜಾಲ ಪ್ರಕರಣದಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೂ ನಂಟಿದೆ ಎಂದು ಆರೋಪಿಸಿದ್ದ ಪ್ರಶಾಂತ್‌ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಿರುವ ನಗರದ 24ನೇ ಎಸಿಎಂಎಂ ನ್ಯಾಯಾಲಯ, ಪ್ರಕರಣ ಸಂಬಂಧ ಜನವರಿ 21ರಂದು ವಿಚಾರಣೆಗೆ ಹಾಜರಾಗಲು ಸಂಬರಗಿಗೆ ಸೂಚಿಸಿದೆ.

ಪ್ರಶಾಂತ್‌ ಸಂಬರಗಿ ತಮ್ಮ ವಿರುದ್ಧ ಅನಗತ್ಯ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮಕ್ಕೆ ಮುಂದಾಗಿಲ್ಲ. ಆದ್ದರಿಂದ ಅವರ ವಿರುದ್ಧ ಕಾನೂನು ಪ್ರಕಾರ ಶಿಸ್ತುಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು ಎಂದು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ನಗರದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಸಂಬರಗಿ ಮತ್ತೊಂದು ಸ್ಫೋಟಕ ಹೇಳಿಕೆ : ಕಾಂಗ್ರೆಸ್‌ ಮುಖಂಡರತ್ತ ಈ ಮಾತು .

ದೂರಿನ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಪ್ರಶಾಂತ್‌ ಸಂಬರಗಿ ವಿರುದ್ಧ ಐಪಿಸಿ 499 (ಮಾನ ಹಾನಿ) ಹಾಗೂ 500 (ಮಾನನಷ್ಟಕ್ಕೆ ಶಿಕ್ಷೆ) ಸೆಕ್ಷನ್‌ಗಳ ಅಡಿ ಮೊಕ್ಕದಮೆ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

ಪ್ರಶಾಂತ್‌ ಸಂಬರಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಹೇಳಿಕೆ ನೀಡಿ, ನಟಿ ಸಂಜನಾ ಗಲ್ರಾನಿ ಅವರೊಂದಿಗೆ ಶ್ರೀಲಂಕಾದ ಕೊಲಂಬೋದ ಕ್ಯಾಸಿನೋಗಳಿಗೆ ಹೋಗಿದ್ದರು. ಇದಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಸಾಕ್ಷ್ಯಗಳಿರುವುದಾಗಿ ಹೇಳಿದ್ದರು.