ಬೆಂಗಳೂರು(ಸೆ.09): ಘನ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಮತ್ತು ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಪ್ರೈ.ಲಿನ ವ್ಯವಸ್ಥಾಪಕ ನಿರ್ದೇಶಕರಿಗೆ ಸೇರಿದ ನಾಲ್ಕು ಕಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಬಿಂಗಿ ಅವರ ಬನಶಂಕರಿಯ ಎಸ್‌ಬಿಎಂ ಕಾಲೋನಿಯಲ್ಲಿನ ನಿವಾಸ, ಬನಶಂಕರಿ 3ನೇ ಹಂತದಲ್ಲಿನ ಕಚೇರಿ, ಬಿಬಿಎಂಪಿ ನಿವೃತ್ತ ಸಹಾಯಕ ಇಂಜಿನಿಯರ್‌ ಶಿವಲಿಂಗೇಗೌಡ ಅವರ ಮಂಡ್ಯ ಜಿಲ್ಲೆಯ ಚಾಮುಂಡೇಶ್ವರಿ ನಗರದಲ್ಲಿನ ನಿವಾಸ ಮತ್ತು ನಿವೃತ್ತ ಸಹಾಯಕ ಇಂಜಿನಿಯರ್‌ ಎಚ್‌.ಆರ್‌. ಚೆನ್ನಕೇಶವ ಅವರ ಮೈಸೂರಿನ ವಿಜಯನಗರದಲ್ಲಿನ ನಿವಾಸದ ಮೇಲೆ ದಾಳಿ ಮಾಡಿ ಅವ್ಯವಹಾರ ಸಂಬಂಧ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ಮೂವರು ಅರೆಸ್ಟ್‌, 82 ಲಕ್ಷ ಲಂಚ ವಶ

2002 ಡಿ.18ರಂದು ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ಸ್ಥಾಪಿಸುವ ಯೋಜನೆಗಾಗಿ ಬಿಬಿಎಂಪಿ ಅಧಿಸೂಚನೆ ಹೊರಡಿತ್ತು. ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಸಂಸ್ಥೆ ಸ್ಥಾವರ ಸ್ಥಾಪನೆಗೆ ಟೆಂಡರ್‌ ಪಡೆದುಕೊಂಡಿದ್ದರು. ಇದಕ್ಕಾಗಿ 36 ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ, ಸಂಸ್ಥೆ ನಿಗದಿತ ಅವಧಿಯೊಳಗೆ ಘಟಕವನ್ನು ಸ್ಥಾಪಿಸದೇ, ಬಿಬಿಎಂಪಿಯಿಂದ ಸ್ವೀಕರಿಸುತ್ತಿದ್ದ ಘನ ತ್ಯಾಜ್ಯವನ್ನು ಯಾವುದೇ ವೈಜ್ಞಾನಿಕ ಸಂಸ್ಕರಣೆ ಮಾಡದೆಯೇ ನೇರವಾಗಿ ಭೂ ಭರ್ತಿ ಮಾಡುತ್ತಿದ್ದರು.

ಬಿಬಿಎಂಪಿಯವರು ಪೂರೈಕೆ ಮಾಡಿರುವ ಘನ ತ್ಯಾಜ್ಯಕ್ಕೆ ಸಂಸ್ಥೆಗೆ 4.61 ಕೋಟಿ ಟಿಪ್ಪಿಂಗ್‌ ಶುಲ್ಕ ಪಾವತಿಸಲಾಗಿದೆ. ಸಂಸ್ಕರಣೆ ಮಾಡದ ಘನ ತ್ಯಾಜ್ಯಕ್ಕೂ ಸಹ ಹಣ ಬಿಡುಗಡೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.