Asianet Suvarna News Asianet Suvarna News

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ಮೂವರು ಅರೆಸ್ಟ್‌, 82 ಲಕ್ಷ ಲಂಚ ವಶ

ಭೂಹೀನ ರೈತರಿಗೆ ಜಮೀನು ಹಂಚಿಕೆಯಲ್ಲಿ ಲಕ್ಷ ಲಕ್ಷ ಗುಳುಂ| ಭ್ರಷ್ಟ ಅಧಿಕಾರಿಗಳು ಎಸಿಬಿ ಬಲೆಗೆ| ನಿಗಮದ ಪ್ರಧಾನ ವ್ಯವಸ್ಥಾಪಕ ನಾಗೇಶ್‌, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಮತ್ತು ವ್ಯವಸ್ಥಾಪಕ ಸುಬ್ಬಯ್ಯ ಅವರನ್ನು ಬಂಧಿಸಿ ಕಾನೂನು ಕ್ರಮ| 

Seizure of 82 lakh Bribe for Corruption in the Valmiki Corporation
Author
Bengaluru, First Published Aug 29, 2020, 8:57 AM IST

ಬೆಂಗಳೂರು(ಆ.29): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇರೆಗೆ ನಿಗಮದ ಮೂವರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದು, 82 ಲಕ್ಷ ರು. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಿಗಮದ ಪ್ರಧಾನ ವ್ಯವಸ್ಥಾಪಕ ನಾಗೇಶ್‌, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಮಂಜುಳಾ ಮತ್ತು ವ್ಯವಸ್ಥಾಪಕ ಸುಬ್ಬಯ್ಯ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಎಸಿಬಿ ಅಧಿಕಾರಿಗಳು ಗುರುವಾರ (ಆ.27) ಕಚೇರಿಯ ಮೇಲೆ ದಾಳಿ ನಡೆಸಿದಾಗ 22.65 ಲಕ್ಷ ರು. ಲಂಚದ ಹಣ ಪತ್ತೆಯಾಗಿದೆ. ಈ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ನಾಗೇಶ್‌ ಮನೆಯ ಮೇಲೆ ದಾಳಿ ನಡೆಸಿದಾಗ 32.50 ಲಕ್ಷ ರು. ಮತ್ತು ಸುಬ್ಬಯ್ಯ ನಿವಾಸದಲ್ಲಿ 27.50 ಲಕ್ಷ ರು. ಸಿಕ್ಕಿದೆ. ಒಟ್ಟು 82.65 ಲಕ್ಷ ರು. ಲಂಚದ ಹಣ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

ವಾಲ್ಮೀಕಿ ನಿಗಮದ ಮೇಲೆ ಎಸಿಬಿ ದಾಳಿ: 20 ಲಕ್ಷ ರು. ನಗದು ವಶ

ನಿಗಮದಲ್ಲಿ ಅಕ್ರಮವಾಗಿ ಹಣದ ವಹಿವಾಟು ನಡೆಯುತ್ತಿರುವ ಬಗ್ಗೆ ಲಭ್ಯವಾದ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಿಶಿಷ್ಟ ಪಂಗಡದ ಭೂ ಹೀನ ರೈತರಿಗೆ ಭೂ ಒಡೆತನ ಯೋಜನೆಯ ಮೂಲಕ ಸರ್ಕಾರ ಭೂಮಿ ಖರೀದಿಸಿ ಹಂಚಿಕೆ ಮಾಡುತ್ತಿದೆ. ಆದರೆ, ಆರೋಪಿಗಳು ಹೆಚ್ಚಿನ ಬೆಲೆಗೆ ಭೂ ಮಾಲೀಕರಿಂದ ಖರೀದಿ ಮಾಡುತ್ತಿದ್ದರು. ಪ್ರತಿ ಎಕರೆಗೆ 4 ರಿಂದ 5 ಲಕ್ಷ ರು. ವರೆಗೆ ಹೆಚ್ಚಿನ ಬೆಲೆಗೆ ಖರೀದಿಸಿ, ಹೆಚ್ಚುವರಿ ಹಣವನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು. ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದಿದ್ದಾರೆ.

ಭೂ ಒಡೆತನ ಯೋಜನೆಯ ಒಂದು ಪ್ರಕರಣದಲ್ಲಿ ಕಳೆದ ಮಾರ್ಚ್‌ನಲ್ಲಿ 8 ಕೋಟಿ ರು. ರಾಯಚೂರು ಜಿಲ್ಲೆಗೆ ಬಿಡುಗಡೆ ಮಾಡಲು ಕಡತ ಸಿದ್ಧವಾಗಿದ್ದು, ಇದರಲ್ಲಿ ಶೇ.7 ರಷ್ಟು ಹಣ (56 ಲಕ್ಷ ರು.) ಲಂಚ ಕಚೇರಿಯ ವ್ಯವಸ್ಥಾಪಕ ಸುಬ್ಬಯ್ಯ ಅವರಿಗೆ ಕೈ ಸೇರುತ್ತಿತ್ತು. ಲಂಚದ ಹಣವು ಪ್ರಧಾನ ವ್ಯವಸ್ಥಾಪಕ ನಾಗೇಶ್‌ ಅವರಿಗೆ ತಲುಪಲಿರುವ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಯಿತು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಲಂಚದ ಹಣವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios