ಬೆಂಗಳೂರು(ಸೆ.20): ಘನ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಯೋಜನೆಯಲ್ಲಿ ನಡೆದಿರುವ ಅವ್ಯವಹಾರ ಸಂಬಂಧ ಕಾರ್ಯಾಚರಣೆ ಕೈಗೊಂಡಿರುವ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ನಿವೃತ್ತ ಅಧಿಕಾರಿ ಸೇರಿದಂತೆ ಬಿಬಿಎಂಪಿಯ ನಾಲ್ವರು ಅಧಿಕಾರಿಗಳಿಗೆ ಸೇರಿದ ಆರು ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಬಿಬಿಎಂಪಿಯ ಕಾರ್ಯಪಾಲಕ ಎಂಜಿನಿಯರ್‌ ಕೆ.ವಿ.ರವಿ ಅವರ ಜಯನಗರದ 5ನೇ ಬ್ಲಾಕ್‌ನಲ್ಲಿನ ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಪಾಲಿಕೆ ಕೇಂದ್ರ ಕಚೇರಿಯಲ್ಲಿನ ಹೊಸ ಅನೆಕ್ಸ್‌ ಕಟ್ಟಡದ ಕಚೇರಿ, ಕಾರ್ಯಪಾಲಕ ಎಂಜಿನಿಯರ್‌ ವೆಂಕಟೇಶಪ್ಪ ಅವರ ಕಲ್ಯಾಣ ನಗರದ ಮುನಿರೆಡ್ಡಿ ಲೇಔಟ್‌ನಲ್ಲಿನ ವಾಸದ ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಪಾಲಿಕೆ ಕೇಂದ್ರ ಕಚೇರಿಯಲ್ಲಿನ ಟಿವಿಸಿಸಿ ಅನೆಕ್ಸ್‌-2 ಕಟ್ಟಡದಲ್ಲಿನ ಕಚೇರಿ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಸುರೇಶ್‌ ಅವರ ಇಂದಿರಾನಗರದಲ್ಲಿನ ವಾಸದ ಮನೆ ಮತ್ತು ಕಿರಿಯ ಎಂಜಿನಿಯರ್‌ ರಾಘವೇಂದ್ರ ಅವರ ಬನಶಂಕರಿ 1ನೇ ಹಂತದ ರಿಯಲನ್ಸ್‌ ಫ್ರೆಷ್‌ ಬಳಿಯಲ್ಲಿನ ವಾಸದ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಘನ ತ್ಯಾಜ್ಯ ಯೋಜನೆ ಅವ್ಯವಹಾರ: ನಾಲ್ಕು ಕಡೆ ಎಸಿಬಿ ದಾಳಿ

ಇತ್ತೀಚೆಗೆ ಎಸಿಬಿ ಅಧಿಕಾರಿಗಳು ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಬಿಂಗಿ, ಬಿಬಿಎಂಪಿ ನಿವೃತ್ತ ಸಹಾಯಕ ಎಂಜಿನಿಯರ್‌ ಶಿವಲಿಂಗೇಗೌಡ ಮತ್ತು ನಿವೃತ್ತ ಸಹಾಯಕ ಎಂಜಿನಿಯರ್‌ ಎಚ್‌.ಆರ್‌.ಚೆನ್ನಕೇಶವ ನಿವಾಸದ ಮೇಲೆ ದಾಳಿ ಮಾಡಿ ಅವ್ಯವಹಾರ ಸಂಬಂಧ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಅವುಗಳನ್ನು ಪರಿಶೀಲನೆ ನಡೆಸಿದಾಗ ಸಿಕ್ಕ ಮಹತ್ವದ ಮಾಹಿತಿ ಮೇರೆಗೆ ನಾಲ್ವರ ನಿವಾಸಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

2002 ಡಿ.18ರಂದು ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ಸ್ಥಾಪಿಸುವ ಯೋಜನೆಗಾಗಿ ಬಿಬಿಎಂಪಿ ಅಧಿಸೂಚನೆ ಹೊರಡಿತ್ತು. ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಸಂಸ್ಥೆ ಸ್ಥಾವರ ಸ್ಥಾಪನೆಗೆ ಟೆಂಡರ್‌ ಪಡೆದುಕೊಂಡಿದ್ದರು. ಇದಕ್ಕಾಗಿ 36 ಎಕರೆ ಭೂಮಿಯನ್ನು ನೀಡಲಾಗಿತ್ತು. ಆದರೆ, ಸಂಸ್ಥೆ ನಿಗದಿತ ಅವಧಿಯೊಳಗೆ ಘಟಕವನ್ನು ಸ್ಥಾಪಿಸದೇ, ಬಿಬಿಎಂಪಿಯಿಂದ ಸ್ವೀಕರಿಸುತ್ತಿದ್ದ ಘನ ತ್ಯಾಜ್ಯವನ್ನು ಯಾವುದೇ ವೈಜ್ಞಾನಿಕ ಸಂಸ್ಕರಣೆ ಮಾಡದೆಯೇ ನೇರವಾಗಿ ಭೂ ಭರ್ತಿ ಮಾಡುತ್ತಿದ್ದರು.