Asianet Suvarna News Asianet Suvarna News

ಎರಡು ದಿನಗಳೊಳಗೆ ACBಯಲ್ಲಿರುವ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲು ಆದೇಶ

ACB Closure: ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಎಸಿಬಿಯಲ್ಲಿರುವ ಎಲ್ಲಾ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಎಸಿಬಿ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಆದೇಶಿಸಿದ್ದಾರೆ. 

ACB ADGP Seemant Kumar Singh orders to transfer all cases to lokayukta
Author
First Published Sep 10, 2022, 4:19 PM IST

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತ ಪೊಲೀಸರಿಗೆ ಈ ಹಿಂದೆ ಇದ್ದ ಠಾಣಾಧಿಕಾರವನ್ನು ನೀಡುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಎಸಿಬಿ ರದ್ದುಗೊಳಿಸಿ ಆದೇಶಿಸಿತ್ತು. ಇದೀಗ ಎಸಿಬಿಯಲ್ಲಿರುವ ಎಲ್ಲಾ ಪ್ರಕರಣಗಳನ್ನೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡುವಂತೆ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಆದೇಶಿಸಿದ್ದಾರೆ. ಸೆಪ್ಟೆಂಬರ್‌ 12ರೊಳಗ್ಗೆ ಎಲ್ಲಾ ಪ್ರಕರಣಗಳು, ಇಲಾಖಾ ತನಿಖೆಗಳನ್ನು ವರ್ಗಾವಣೆ ಮಾಡಿ ಕಡತಗಳನ್ನು ಲೋಕಾಯುಕ್ತ ಎಸ್‌ಪಿಗಳಿಗೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. 

"ಎಸಿಬಿಯಲ್ಲಿರುವ ಎಲ್ಲ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪ್ರಕರಣ ಹಾಗೂ ಖಾಸಗಿ ದೂರು ಪ್ರಕರಣಗಳ ವರ್ಗಾವಣೆ ಮಾಡಬೇಕು. ಸಂಪೂರ್ಣ ಕಡತಗಳನ್ನ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು," ಎಂದು ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ಎಸಿಬಿಯ ಎಲ್ಲ ಘಟಕಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಕಡತಗಳನ್ನ ವರ್ಗಾಯಿಸಲು ಸೂಚನೆ ನೀಡಲಾಗಿದೆ. ತಮ್ಮ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ಲೋಕಾಯುಕ್ತ ಪೊಲೀಸ್ ಅಧೀಕ್ಷಕರುಗಳಿಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. ಸಂಪೂರ್ಣ ಕಡತಗಳನ್ನ ವರ್ಗಾಯಿಸಿ ಸ್ವೀಕೃತಿ ಪಡೆಯಲು ಆದೇಶಿಸಲಾಗಿದೆ. ಸೆಪ್ಟೆಂಬರ್ 12ರ ಸಂಜೆ 5 ಗಂಟೆಯೊಳಗೆ ವರ್ಗಾಯಿಸಿ ಪಾಲನಾ ವರದಿ ಸಲ್ಲಿಸಲು ಸಿಂಗ್‌ ಸೂಚಿಸಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತಕ್ಕೆ ಬಲ: ಎಸಿಬಿ ರದ್ದತಿ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಇಲ್ಲ

ಎಸಿಬಿ ಆಡಳಿತ ವಿಭಾಗದ ಎಸ್ ಪಿಗೆ ಕಡತಗಳ ವರ್ಗಾವಣೆ ಮೇಲುಸ್ತುವಾರಿ‌ ನೀಡಲಾಗಿದೆ. ರಾಜ್ಯದ ಎಲ್ಲ ವಲಯಗಳ ಕಚೇರಿ ವರದಿ ಪಡೆದು ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಅಸ್ತಿತ್ವಕ್ಕೆ ಬಂದ ಎಸಿಬಿ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿದೆ. ಇಲ್ಲಿರುವ ಅಧಿಕಾರಿಗಳನ್ನು ಬೇರೆ ಕಡೆಗೆ ಇನ್ನೂ ವರ್ಗಾವಣೆ ಮಾಡಿಲ್ಲ. ಎಸಿಬಿಯಲ್ಲಿರುವ ನೂರಾರು ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಗೆ ಸರ್ಕಾರ ವರ್ಗಾಯಿಸಬೇಕಿದೆ. ಇಲ್ಲದಿದ್ದರೆ ಪೋಸ್ಟಿಂಗ್‌ ಇಲ್ಲದೇ ಸರ್ಕಾರದ ಆದೇಶಕ್ಕಾಗಿ ಅಧಿಕಾರಿಗಳು ಕಾಯಬೇಕಾಗಿದೆ.

ಇದನ್ನೂ ಓದಿ: ಭ್ರಷ್ಟರ ಬೇಟೆಗೆ ಲೋಕಾ ಸಜ್ಜು, ಜನರ ದೂರು ಸ್ವೀಕರಿಸಿ, ತನಿಖೆ ನಡೆಸಿ: ಠಾಕೂರ್‌

ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿಯನ್ನು ರದ್ದುಗೊಳಿಸಿ ಹಿಂದಿನಂತೆ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಈ ಕುರಿತು ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದೀಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸಿಬಿಯನ್ನು ರದ್ದುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಎಸಿಬಿಯಲ್ಲಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿದೆ.  ಈ ಹಿಂದಿನಂತೆ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇನ್ಮುಂದೆ ಕರ್ನಾಟಕದಲ್ಲಿ ಮತ್ತೆ ಲೋಕಾಯುಕ್ತ ಅಬ್ಬರಿಸಲಿದೆ.  

ಭ್ರಷ್ಟರ ಬೇಟೆಗೆ ಲೋಕಾ ಸಜ್ಜು:
ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆಯಿಂದ ಮಂಕಾಗಿದ್ದ ಲೋಕಾಯುಕ್ತ ಸಂಸ್ಥೆ, ಈಗ ಎಸಿಬಿ ರದ್ದು ಮಾಡುವ ಹೈಕೋರ್ಚ್‌ ಆದೇಶ ಹಾಗೂ ಅದಕ್ಕೆ ಸರ್ಕಾರದ ಪೂರಕ ಸ್ಪಂದನೆ ದೊರಕಿದ ಕಾರಣ ಚುರುಕುಗೊಂಡಿದೆ. ತಮ್ಮ ಹಿಂದಿನ ಶೈಲಿಯಂತೆ ಲಂಚಗುಳಿತನದ ವಿರುದ್ಧ ಸಮರಕ್ಕೆ ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದು, ‘ಭ್ರಷ್ಟರ ವಿರುದ್ಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸಿ’ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಅವರು ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಚ್‌ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು’ ಎಂದು ಅವರು ಲೋಕಾಯುಕ್ತ ವಿಭಾಗದ ವಿವಿಧ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಎಡಿಜಿಪಿ ಅವರು ಸುತ್ತೋಲೆಯಲ್ಲಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ACB vs Lokayukta ಸಿದ್ದುಗೆ ಮುಖಭಂಗ, ಹೈಕೋರ್ಟ್ ಸೂಚನೆಯಂತೆ ಎಸಿಬಿ ರದ್ದುಗೊಳಿಸಿ ಬೊಮ್ಮಾಯಿ ಸರ್ಕಾರ ಆದೇಶ!

ಹೈಕೋರ್ಟ್ ಆದೇಶ ಸುಪ್ರೀಂನಲ್ಲಿ ಪ್ರಶ್ನೆ:
ಭ್ರಷ್ಟಾಚಾರ ನಿಗ್ರಹ ಪಡೆ(ಎಸಿಬಿ) ರದ್ದುಪಡಿಸಿರುವ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಸುಪ್ರೀಂ ಕೋರ್ಚ್‌ ನೋಟಿಸ್‌ ನೀಡಿದೆ. ಜೊತೆಗೆ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿದೆ. ಎಸಿಬಿ ರದ್ದುಪಡಿಸಿರುವ ರಾಜ್ಯ ಹೈಕೋರ್ಚ್‌ ಆದೇಶ ಪ್ರಶ್ನಿಸಿ ಬೆಂಗಳೂರಿನ ಕನಕರಾಜು ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡಿರುವ ನ್ಯಾ.ಡಿ.ವೈ.ಚಂದ್ರಚೂಡ್‌ ಪೀಠ ಈ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ನೋಟಿಸ್‌ ನೀಡಿತ್ತು. 

Follow Us:
Download App:
  • android
  • ios