ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು: ಎಡಿಜಿಪಿ ಠಾಕೂರ್
ಬೆಂಗಳೂರು(ಆ.27): ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆಯಿಂದ ಮಂಕಾಗಿದ್ದ ಲೋಕಾಯುಕ್ತ ಸಂಸ್ಥೆ, ಈಗ ಎಸಿಬಿ ರದ್ದು ಮಾಡುವ ಹೈಕೋರ್ಟ್ ಆದೇಶ ಹಾಗೂ ಅದಕ್ಕೆ ಸರ್ಕಾರದ ಪೂರಕ ಸ್ಪಂದನೆ ದೊರಕಿದ ಕಾರಣ ಚುರುಕುಗೊಂಡಿದೆ. ತಮ್ಮ ಹಿಂದಿನ ಶೈಲಿಯಂತೆ ಲಂಚಗುಳಿತನದ ವಿರುದ್ಧ ಸಮರಕ್ಕೆ ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದು, ‘ಭ್ರಷ್ಟರ ವಿರುದ್ಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸಿ’ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರು ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಅವರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.
‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು’ ಎಂದು ಅವರು ಲೋಕಾಯುಕ್ತ ವಿಭಾಗದ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಎಡಿಜಿಪಿ ಅವರು ಸುತ್ತೋಲೆಯಲ್ಲಿ ನಿರ್ದೇಶಿಸಿದ್ದಾರೆ.
ACB ರದ್ದು ಬೆನ್ನಲ್ಲೇ ಫೀಲ್ಡಿಗಿಳಿದ ಲೋಕಾಯುಕ್ತ: ಸರ್ಕಾರಿ ಆಸ್ಪತ್ರೆಗಳಿಗೆ ಶಾಕ್
6 ವರ್ಷಗಳ ಹಿಂದೆ ಲೋಕಾಯುಕ್ತರಿಂದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತದಿಂದ ಕಸಿದು ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿತ್ತು. ಆದರೆ, ಎಸಿಬಿ ರದ್ದತಿಗೆ ಇತ್ತೀಚೆಗೆ ಹೈಕೋರ್ಟ್ ಆದೇಶಿಸಿತ್ತು. ಇದರ ನಡುವೆಯೇ, ಹೈಕೋರ್ಟ್ ಆದೇಶದ ವಿರುದ್ಧ ಖಾಸಗಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೂ, ಮೇಲ್ಮನವಿ ಹಾದಿ ತುಳಿಯದೆ ಲೋಕಾಯುಕ್ತ ಸಂಸ್ಥೆಗೆ ಬೆಂಬಲವಾಗಿ ನಿಲ್ಲಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು. ಹೀಗಾಗಿ ಲೋಕಾಯುಕ್ತಕ್ಕೆ ಮರಳಿ ಅಧಿಕಾರ ಸಿಕ್ಕಂತಾಗಿದೆ.
