ಗುವಾಹಟಿ[ಡಿ.02]: ದೇಶದ ಐಟಿ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಬೆಂಗಳೂರಿನ ಕಂಪನಿಯೊಂದರಲ್ಲಿ ಹಿರಿಯ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಯುವಕನೊಬ್ಬ ಈಗ ಉದ್ಯೋಗ ತೊರೆದು ಅಸ್ಸಾಂನಲ್ಲಿ ಉಗ್ರಗಾಮಿಯಾಗಿದ್ದಾನೆ. ಅಸ್ಸಾಂನ ಮೂಲನಿವಾಸಿಗಳ ಅಸ್ತಿತ್ವಕ್ಕೇ ಕಂಟಕ ಎದುರಾಗಿರುವ ಕಾರಣಕ್ಕೆ ತಾನು ಶಸ್ತ್ರಸಜ್ಜಿತ ಹೋರಾಟಕ್ಕೆ ಇಳಿದಿರುವುದಾಗಿ ಸ್ವತಃ ಹೇಳಿಕೊಂಡಿದ್ದಾನೆ.

ಅಸ್ಸಾಂನ ಉಲ್ಫಾ (ಸ್ವತಂತ್ರ) ಸಂಘಟನೆಗೆ ತಾನು ಸೇರ್ಪಡೆಯಾಗಿರುವುದಾಗಿ ಮೂಲತಃ ಪೂರ್ವ ಅಸ್ಸಾಂನ ದಿಬ್ರುಗಢ ಜಿಲ್ಲೆಯ ಮೊರಾನ್‌ ಎಂಬಲ್ಲಿನ ಯುವಕ ಅಭಿಜಿತ್‌ ಗೊಗೊಯ್‌ ಫೇಸ್‌ಬುಕ್‌ನಲ್ಲಿ ವಿಡಿಯೋ ಬಿತ್ತರಿಸಿ ಸಂಚಲನ ಮೂಡಿಸಿದ್ದಾನೆ. 3.59 ನಿಮಿಷಗಳ ವಿಡಿಯೋ ಇದಾಗಿದ್ದು, ಅರಣ್ಯವೊಂದರಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಅಭಿಜಿತ್‌ ಸೇನಾ ಸಮವಸ್ತ್ರ ಧರಿಸಿದ್ದಾನೆ. ಆತನ ಬಳಿ ಎಕೆ 47 ಬಂದೂಕು ಹಾಗೂ ವಾಕಿಟಾಕಿ ಇರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಯಾರು ಈತ?:

ವಿಡಿಯೋದಲ್ಲಿ ಅಭಿಷೇಕ್‌ ತನ್ನ ಪರಿಚಯವನ್ನೂ ಮಾಡಿಕೊಂಡಿದ್ದಾನೆ. ‘2012ರಲ್ಲಿ ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಚೆನ್ನೈನ ಐಟಿ ಕಂಪನಿಯೊಂದಕ್ಕೆ ಸೇರಿದ್ದೆ. ನಂತರ ಬೆಂಗಳೂರು ಬ್ಯುಸಿನೆಸ್‌ ಸ್ಕೂಲ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪಡೆದೆ. ಸಿಂಗಾಪುರ, ಆಸ್ಪ್ರೇಲಿಯಾ, ಮಲೇಷ್ಯಾದಲ್ಲಿ ಕೆಲಸ ಮಾಡಿ, ಬೆಂಗಳೂರು ಮೂಲದ ಐಟಿ ಕಂಪನಿಗೆ ಸೇರ್ಪಡೆಯಾದ. ಅಲ್ಲಿ ಹಿರಿಯ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದೆ’ ಎಂದು ತಿಳಿಸಿದ್ದಾನೆ. ಆದರೆ ತಾನು ಬೆಂಗಳೂರು ಕಂಪನಿಯ ಉದ್ಯೋಗವನ್ನು ಯಾವಾಗ ತೊರೆದ ಎಂಬುದನ್ನು ಆತ ಬಾಯಿಬಿಟ್ಟಿಲ್ಲ. ‘ಚೌ ಅಭಿಜೀತ್‌ ಗೊಗೊಯ್‌ (ಅಭಿ)’ ಎಂಬ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಈ ವಿಡಿಯೋ ಪೋಸ್ಟ್‌ ಆಗಿದೆ. ಸದ್ಯ ಡಿಲೀಟ್‌ ಆಗಿದೆ.

ಉಗ್ರ ಸಂಘಟನೆಗೆ ಸೇರ್ಪಡೆ ಏಕೆ?

ಅಸ್ಸಾಂನ ಎನ್‌ಡಿಎ ಸರ್ಕಾರ ಪೌರತ್ವ (ತಿದ್ದುಪಡಿ) ಮಸೂದೆ- 2016ನ್ನು ಜಾರಿಗೆ ತಂದಿದೆ. ಬಾಂಗ್ಲಾದೇಶ, ಪಾಕಿಸ್ತಾನ, ಆಷ್ಘಾನಿಸ್ತಾನದಿಂದ ವಲಸೆ ಬಂದ ಮುಸ್ಲಿಮೇತರರಿಗೂ ಪೌರತ್ವ ಕೊಡುವ ಅಂಶ ಅದರಲ್ಲಿದೆ. ಇದರಿಂದ ಮೂಲ ಅಸ್ಸಾಮಿಗರು ಅಲ್ಪಸಂಖ್ಯಾತರಾಗುತ್ತಾರೆ ಎಂಬ ವಾದವಿದೆ. ಈ ಕುರಿತು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರೂ ಬಿಜೆಪಿ ಸರ್ಕಾರ ಕೇಳುತ್ತಿಲ್ಲ. ಹೀಗಾಗಿ ಅಭಿಷೇಕ್‌ ರೀತಿ ಹಲವರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.

‘ಕ್ರಾಂತಿಕಾರಿ ಹೋರಾಟ ನಡೆಸುವ ಸಲುವಾಗಿ ಎಲ್ಲವನ್ನೂ ತ್ಯಜಿಸಿದ್ದೇನೆ. ಅಸ್ಸಾಂ ಸಮುದಾಯದ ಹಿತರಕ್ಷಣೆ ಹಾಗೂ ಅದರ ಅಸ್ತಿತ್ವದ ಹೋರಾಟಕ್ಕೆ ನಾನು ಸೇರ್ಪಡೆಯಾಗಿದ್ದೇನೆ. ಅಸ್ಸಾಂನಲ್ಲಿ ಇಂದು ನಡೆಯುತ್ತಿರುವ ಬೆಳವಣಿಗೆಗಳು ದುರದೃಷ್ಟಕರ. ನಾವು ಯಾರನ್ನು ನಂಬುವುದು? ಅಸ್ಸಾಂನಲ್ಲಿ ಸಾಕಷ್ಟುಶಸ್ತ್ರರಹಿತ ಸಂಘಟನೆಗಳು ಇವೆ. ಇವೆಲ್ಲಾ ಭವಿಷ್ಯದ ರಾಜಕೀಯ ನಾಯಕರನ್ನು ಉತ್ಪಾದಿಸುವ ಕಾರ್ಖಾನೆಗಳಂತಾಗಿವೆ. ಸ್ಥಳೀಯ ಜನರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. ತ್ರಿಪುರದಲ್ಲಿ ನಡೆಯುತ್ತಿರುವುದನ್ನು ನಾವೂ ಕಾಣುತ್ತಿದ್ದೇವೆ. ಅಮೆರಿಕದಲ್ಲೂ ಸ್ಥಳೀಯ ಜನರಿಗೆ ಅಪಾಯ ಎದುರಾಗಿದೆ’ ಎಂದು ಅಭಿಜಿತ್‌ ವಿಡಿಯೋದಲ್ಲಿ ಹೇಳಿದ್ದಾನೆ.

ಉಲ್ಫಾ (ಸ್ವತಂತ್ರ) ಸಂಘಟನೆಯನ್ನು ಬಂಡುಕೋರ ನಾಯಕ ಪರೇಶ್‌ ಬರುವಾ ಮುನ್ನಡೆಸುತ್ತಿದ್ದಾನೆ. ಮ್ಯಾನ್ಮಾರ್‌- ಚೀನಾ ಗಡಿಗಳು ಆತನ ಕಾರ್ಯಸ್ಥಳ. ಸರ್ಕಾರ ರೂಪಿಸಿರುವ ಮಸೂದೆ ಬಗ್ಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಲಾಭ ಮಾಡಿಕೊಂಡಿರುವ ಆತ ಸ್ಥಳೀಯ ಯುವಕರನ್ನು ಸಂಘಟನೆಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ತೀವ್ರಗೊಳಿಸಿದ್ದಾನೆ ಎನ್ನಲಾಗಿದೆ.