ಶ್ರೀಕಾಂತ್ ಪೂಜಾರಿಗೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ವಿಶೇಷ ಆಹ್ವಾನ?
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನಾ ಸಮಾರಂಭದಲ್ಲಿ ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಅವರಿಗೆ ವಿಶೇಷ ಆಹ್ವಾನ ನೀಡಲಾಗುತ್ತಿದೆ. ಅಂದು ಸನ್ಮಾನ ಕೂಡ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜ.09): ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನಾ ಸಮಾರಂಭದಲ್ಲಿ ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಅವರಿಗೆ ವಿಶೇಷ ಆಹ್ವಾನ ನೀಡಲಾಗುತ್ತಿದೆ. ಅಂದು ಸನ್ಮಾನ ಕೂಡ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಾಬರಿ ಮಸೀದಿ ಧ್ವಂಸ ಘಟನೆಯ ಹಿಂದಿನ ದಿನ, 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆದಿತ್ತು. ಗಲಾಟೆ ವೇಳೆ ಅಡಕೆ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿತ್ತು. ಈ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿ ಮೂರನೇ ಆರೋಪಿಯಾಗಿದ್ದರು.
ಈ ಮಧ್ಯೆ, ಹಿಂದಿನ ಬಾಕಿ ಪ್ರಕರಣಗಳ ವಿಲೇವಾರಿಗೆ ರಾಜ್ಯ ಸರ್ಕಾರದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಡಿ.29ರಂದು ಶ್ರೀಕಾಂತ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿ ವ್ಯಾಪಕ ಹೋರಾಟ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಮಮಂದಿರ ಉದ್ಘಾಟನೆಯ ವೇಳೆಯೇ ಬಂಧನ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದವು. ''ನಾನೂ ಕರಸೇವಕ ನನ್ನನ್ನೂ ಬಂಧಿಸಿ'' ಎಂದು ಪ್ರತಿಭಟನಾ ಅಭಿಯಾನ ಶುರು ಮಾಡಿದ್ದರು. ಈ ಮಧ್ಯೆ, ಹುಬ್ಬಳ್ಳಿಯಲ್ಲಿ ರಾಮಭಕ್ತನ ಬಂಧನ ಖಂಡಿಸಿ ಅಯೋಧ್ಯೆಯಲ್ಲೂ ಪ್ರತಿಭಟನೆ ನಡೆದಿತ್ತು. ಹೀಗಾಗಿ, ಈ ಘಟನೆ ರಾಷ್ಟ್ರಮಟ್ಟದಲ್ಲೂ ಸಂಚಲನವನ್ನುಂಟು ಮಾಡಿತ್ತು. ಬಂಧನವಾಗಿ 9 ದಿನದ ಬಳಿಕ ಶ್ರೀಕಾಂತ್ ಪೂಜಾರಿ ಅವರಿಗೆ ಜಾಮೀನು ದೊರೆತು ಜೈಲಿನಿಂದ ಬಿಡುಗಡೆ ಆಗಿದ್ದರು.
ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್: ಸಚಿವೆ ಶೋಭಾ ಕರಂದ್ಲಾಜೆ ಆರೋಪ
ವಿಶೇಷ ಆಹ್ವಾನ: ಇವರ ಬಿಡುಗಡೆ ಹಿಂದೂಪರ ಸಂಘಟನೆಗಳಲ್ಲಿ ಸಂತಸವನ್ನುಂಟು ಮಾಡಿದೆ. ಬಿಡುಗಡೆಯಾದ ಬಳಿಕ ಮಾತನಾಡಿದ್ದ ಶ್ರೀಕಾಂತ್ ಪೂಜಾರಿ, ‘ನಾನು ರಾಮನಭಕ್ತ, ಬಜರಂಗ ದಳದ ಕಾರ್ಯಕರ್ತ ಎಂಬ ಕಾರಣಕ್ಕೆ ಬಂಧಿಸಿದ್ದರು. ಮತ್ತೆ ನಾನು ರಾಮನ ಸೇವೆಗೆ ಸದಾ ಸಿದ್ಧ. ಅಯೋಧ್ಯೆಗೆ ಹೋಗಿ ಬರುತ್ತೇನೆ’ ಎಂದು ತಿಳಿಸಿದ್ದಾರೆ. ಹೀಗಾಗಿ, ಅವರೇ ಹೋಗುವ ಬದಲು ನಾವೇ ಕರೆದುಕೊಂಡು ಹೋಗುವುದು ಉತ್ತಮ. ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಅಭಿಪ್ರಾಯ ಹಿಂದೂಪರ ಸಂಘಟನೆಗಳ ಮುಖಂಡರದ್ದು. ಹೀಗಾಗಿ, ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಶ್ರೀಕಾಂತ ಪೂಜಾರಿ ಹಾಗೂ ಅವರ ಕುಟುಂಬಕ್ಕೆ ವಿಶೇಷ ಆಹ್ವಾನ ಪತ್ರಿಕೆ ನೀಡಿ, ಅಂದಿನ ಕಾರ್ಯಕ್ರಮದಲ್ಲಿ ಶ್ರೀಕಾಂತ ಪೂಜಾರಿ ಅವರಿಗೆ ಪ್ರಧಾನ ಮಂತ್ರಿಯವರಿಂದ ಸನ್ಮಾನ ಮಾಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ದಿನಕ್ಕೊಂದು ಹೇಳ್ತಾರೆ: ಸಚಿವ ಪರಮೇಶ್ವರ್ ಟಾಂಗ್
ಬೆಂಗಳೂರಲ್ಲಿ ಸೋಮವಾರ ನಡೆಯಲಿರುವ ಬಿಜೆಪಿ ನಾಯಕರ ಚಿಂತನ-ಮಂಥನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅಲ್ಲಿಂದ ಓಕೆ ಅಂದರೆ 2-3 ದಿನಗಳಲ್ಲಿ ಬಿಜೆಪಿಯ ಹಿರಿಯ ನಾಯಕರೇ ಆಹ್ವಾನ ಪತ್ರಿಕೆಯನ್ನು ಮುಟ್ಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಬಿಜೆಪಿ ಮುಖಂಡರೊಬ್ಬರು ಪತ್ರಿಕೆಯೊಂದಿಗೆ ಮಾತನಾಡಿ, ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಶ್ರೀಕಾಂತ ಪೂಜಾರಿ ಅವರನ್ನು ಕರೆದುಕೊಂಡು ಹೋಗಬೇಕೆಂಬ ಇರಾದೆ ಇದೆ. ಈ ಬಗ್ಗೆ ಹಿರಿಯರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಏನಾಗುತ್ತದೆಯೋ ನೋಡಬೇಕು ಎಂದು ತಿಳಿಸಿದ್ದಾರೆ.