ಉ.ಕರ್ನಾಟಕ ಭಾಗದಲ್ಲಿ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಿದ್ದ ವೈದ್ಯ ಇನ್ನಿಲ್ಲ
ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಿದ್ದ ಖ್ಯಾತ ಕ್ಯಾನ್ಸರ್ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ.ಆರ್.ಬಿ. ಪಾಟೀಲ್ ವಿಧಿವಶರಾಗಿದ್ದಾರೆ.
ಹುಬ್ಬಳ್ಳಿ, [ಫೆ.02] : ಖ್ಯಾತ ಕ್ಯಾನ್ಸರ್ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಆರ್. ಬಿ. ಪಾಟೀಲ್ (95) ಅವರು ನಿಧನರಾಗಿದ್ದಾರೆ.
ಉತ್ತರ ಕರ್ನಾಟಕದ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ್ದ ಡಾ.ಆರ್.ಬಿ.ಪಾಟೀಲ್ (93) ಶನಿವಾರ ಮಧ್ಯಾಹ್ನ ಹುಬ್ಬಳ್ಳಿಯ ವಿದ್ಯಾನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಬೆಳಿಗ್ಗೆ ಆರ್. ಬಿ. ಪಾಟೀಲ್ ಅವರ ಸ್ವಗ್ರಾಮ ವಿಜಯಪುರ ಜಿಲ್ಲೆ ಕೌಲಗಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುವುದು. ನಂತರ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೂಲತಃ ವಿಜಯಪುರ ಜಿಲ್ಲೆ ಕೌಲಗಿ ಗ್ರಾಮದವರಾದ ಪಾಟೀಲರು, 1951 ರಲ್ಲಿ ಮುಂಬೈನಲ್ಲಿ ಎಂಬಿಬಿಎಸ್ ಪದವಿ, 1956 ರಲ್ಲಿ ಇಂಗ್ಲೆಂಡಿನಲ್ಲಿ ಎಫ್ಆರ್ಸಿಎಸ್ ಪದವಿ ಪಡೆದಿದ್ದರು.
1957ರಿಂದ 1970ರವರೆಗೆ ಹುಬ್ಬಳ್ಳಿ ಕೋಅಪರೇಟಿವ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಈ ಅವಧಿಯಲ್ಲಿ 25 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ ಹೆಗ್ಗಳಿಕೆ ಇವರದು.
1969ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದ ಡಾ.ಆರ್.ಬಿ. ಪಾಟೀಲ್, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಿ ಬಡವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಅಂದಿನ ರಾಷ್ಟ್ರಪತಿ ಝಾಕೀರ್ ಹುಸೇನ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದರು.