Asianet Suvarna News Asianet Suvarna News

ನಮಗೆ ಸಿದ್ಧಾಂತಕ್ಕಿಂತ ರಾಜ್ಯದ ಹಿತ ಮುಖ್ಯ; ಮೈತ್ರಿ ಆಯ್ಕೆ ಮುಕ್ತವಾಗಿರಿಸಿದ್ದೇವೆ: ಎಚ್‌ಡಿಕೆ

ಸಿದ್ಧಾಂತಕ್ಕಿಂತ ಹೆಚ್ಚಾಗಿ ನನಗೆ ಬೇಕಾಗಿರುವುದು ನಮ್ಮ ರಾಜ್ಯದ ಜನತೆಯ ಸಮಸ್ಯೆಗಳಿಗೆ ಪರಿಹಾರ. ಅದಕ್ಕೆ ಹೋರಾಟ ಮುಂದುವರಿಸಬೇಕಾದ ಅನಿವಾರ್ಯತೆ ಇದೆ. ಇವತ್ತು ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಸುಮ್ಮನೆ ಕೂಡುವ ಪ್ರಶ್ನೆಯೇ ಇಲ್ಲ. ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭ ಮಾಡುತ್ತೇನೆ. ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ಚರ್ಚೆ ಮಾಡಲು ಇತರರಿಗೆ ನೈತಿಕತೆ ಇಲ್ಲ.

A face-to-face live interview with HD Kumaraswamy bengaluru rav
Author
First Published Jul 20, 2023, 6:08 AM IST

ಮುಖಾಮುಖಿ

- ವಿಜಯ ಮಲಗಿಹಾಳ/ ಪ್ರಭುಸ್ವಾಮಿ ನಟೇಕರ್

ಸದ್ಯ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಜೆಡಿಎಸ್‌ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಹಲವು ನಾಯಕರಿದ್ದರೂ ಕಾಂಗ್ರೆಸ್‌ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಸಕಾಲದಲ್ಲಿ ಹಾಗೂ ತೀಕ್ಷ$್ಣವಾಗಿ ‘ಅಟ್ಯಾಕ್‌’ ಮಾಡುವ ಸಾಮರ್ಥ್ಯ ಇರುವುದು ಜೆಡಿಎಸ್‌ನ ಕುಮಾರಸ್ವಾಮಿ ಅವರಿಗೆ ಮಾತ್ರ. ಇದನ್ನು ಈಗ ಬಿಜೆಪಿಯವರೂ ಒಪ್ಪಿಕೊಂಡಿದ್ದು, ಸರ್ಕಾರದ ವಿರುದ್ಧದ ಹೋರಾಟದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ವಿಸ್ತರಣೆಯಾಗಿ ಸದನದ ಹೊರಗೂ ಕೈಜೋಡಿಸುವ ಸಾಧ್ಯತೆ ಕಂಡುಬರುತ್ತಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದದ್ದು ಹೀಗೆ..

ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಎರಡು ತಿಂಗಳಾಯಿತು. ಜೆಡಿಎಸ್‌ ಸೋಲಿನ ಹೊಡೆತದಿಂದ ಹೊರಬರುವ ಪ್ರಯತ್ನ ಮಾಡುತ್ತಿದೆಯೇ?

ಇದು ಶಾಶ್ವತವಾಗಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗುವ ಫಲಿತಾಂಶವಲ್ಲ. ಇವತ್ತಿನ ಬೆಳವಣಿಗೆಯಾಗಿರುವುದು ಬೇರೆಯವರ ಮೇಲಿದ್ದಂತಹ ಆಕ್ರೋಶ ನಮ್ಮ ಮೇಲೂ ಪರಿಣಾಮ ಬೀರಿದೆ. ಆದರೆ, ಇವತ್ತಿಗೂ ಜೆಡಿಎಸ್‌ಗೆ ಬೆಳೆಯುವ ಅವಕಾಶ ಇದೆ. ರಾಜ್ಯದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದ ನೋಡುವುದಾದರೆ ಎರಡು ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ನೀರಾವರಿ ವಿಷಯದಲ್ಲಿ ಇರಬಹುದು ಮತ್ತು ಹಲವಾರು ವಿಷಯಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಒಂದು ಹಂತಕ್ಕೆ ಜನರಲ್ಲಿ ಜಾಗೃತಿ ಮೂಡಬಹುದು. ಪ್ರಾದೇಶಿಕ ಹಿನ್ನೆಲೆ ಇರುವಂತಹ ಪಕ್ಷವನ್ನು ಬೆಳೆಸಬೇಕು ಎಂಬ ಭಾವನೆ ಬರುವ ಕಾಲ ದೂರ ಇಲ್ಲ. ಈ ಫಲಿತಾಂಶದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಧೃತಿಗೆಡುವ ಅಗತ್ಯವಿಲ್ಲ.

ಮುಖಾಮುಖಿ ಸಂದರ್ಶನ: ಎಚ್‌ಡಿಕೆ ಕಾಲದ ವರ್ಗಾವಣೆ ಮಾಹಿತಿ ಹೊರಬರಲಿ - ಚಲುವರಾಯಸ್ವಾಮಿ

ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾ ಸ್ವರೂಪದಲ್ಲಿ ಏನಾದರೂ ಬದಲಾವಣೆ ಮಾಡಬೇಕು ಅಂತ ಅನ್ನಿಸಿದೆಯೇ?

ಸಂಘಟನೆಗೆ ಸಂಬಂಧಿಸಿದಂತೆ ಹೊಸ ನಾಯಕತ್ವ ಬೆಳೆಸಬೇಕು ಎಂಬ ಆಲೋಚನೆ ಇದೆ. ನಮ್ಮಲ್ಲಿ 2-3 ಬಾರಿ ಶಾಸಕರಾದವರು, ಸಚಿವರಾದವರು ಇಲ್ಲಿ ಭವಿಷ್ಯ ಇಲ್ಲ, ವಿರೋಧ ಪಕ್ಷದಲ್ಲಿಯೇ ಇರಬೇಕಾಗುತ್ತದೆ ಎಂದು ಭಾವಿಸಿ ಬೇರೆ ಕಡೆ ಭವಿಷ್ಯ ಹುಡುಕಿಕೊಳ್ಳುತ್ತಾರೆ. ಆದರೂ ಕೆಲವರು ಪ್ರೀತಿ ವಿಶ್ವಾಸದಲ್ಲಿದ್ದಾರೆ. ಅದರ ಜತೆಗೆ ಯುವಕರಲ್ಲಿ ಸಾಮರ್ಥ್ಯ ಇದೆ. ಅದನ್ನು ನಾವು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಿದರೆ, ಹೊಸ ನಾಯಕತ್ವ ತರುವುದು ಸಮಸ್ಯೆಯಲ್ಲ. ಶ್ರಾವಣ ಮಾಸದಿಂದ ಅದಕ್ಕೆ ಒತ್ತು ಕೊಡುವ ಕೆಲಸ ಮಾಡುತ್ತೇವೆ.

ಜೆಡಿಎಸ್‌ ಅಂದಾಕ್ಷಣ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿಎದ್ದು ಕಾಣುತ್ತದೆಯಲ್ಲ? ಅದನ್ನು ಕಳಚುವುದು ಸಾಧ್ಯವಿಲ್ಲವೇ?

ಈ ಪಕ್ಷ ಉಳಿದಿರುವುದೇ ನಮ್ಮ ಕುಟುಂಬದಿಂದ. ಬೇರೆ ಪಕ್ಷದಲ್ಲಿ ನೋಡುವುದಾದರೆ ಉದಾಹರಣೆ ಡಿ.ಕೆ.ಶಿವಕುಮಾರ್‌ ಕುಟುಂಬದಲ್ಲಿ ನಾಲ್ಕು ಮಂದಿ ಇದ್ದಾರೆ. ಅಲ್ಲಿ ಕುಟುಂಬದ ಬಗ್ಗೆ ಮಾತನಾಡಲ್ಲ. ಬಿಜೆಪಿಯಲ್ಲಿ ಎಷ್ಟುಜನ ಇದ್ದಾರೆ? ಅಲ್ಲೂ ಕುಟುಂಬದ ಬಗ್ಗೆ ಮಾತನಾಡಲ್ಲ. ಸಿದ್ದರಾಮಯ್ಯ ಮಗ ಅಕಾಲಿಕ ಮರಣ ಹೊಂದಿದ್ದಾಗ ಮತ್ತೊಬ್ಬ ಮಗನನ್ನೇ ಪರಿಚಯ ಮಾಡಿಸಿದರು. ಬೇರೊಬ್ಬರನ್ನು ತರಬಹುದಿತ್ತಲ್ಲವೇ? ಇಲ್ಲಿ ಕುಟುಂಬದ ಹೋರಾಟದ ಮೇಲೆ ಪಕ್ಷ ನಿಂತಿದೆ. ಆದರೆ, ಇದು ಶಾಶ್ವತವಾಗಿ ಕುಟುಂಬದ ಮೇಲೆ ಅವಲಂಬಿತವಾಗುವುದು ಬೇಡ ಎಂದು ಹೊಸ ರೀತಿಯಲ್ಲಿ, ಹೊಸ ನಾಯಕತ್ವಕ್ಕೆ ಶಕ್ತಿ ತುಂಬಬೇಕು ಎಂಬುದಿದೆ. ಆದರೆ ನಮ್ಮ ದುರದೃಷ್ಟ. ಇಲ್ಲಿ ಬೆಳೆದವರು ಬೆಳೆದ ಮೇಲೆ ಏನೋ ಒಂದು ಸಬೂಬು ಹೇಳಿ ಪಕ್ಷ ಬಿಟ್ಟು ಹೋಗುತ್ತಾರೆ. ಇದು ನಮಗೆ ಆಗಿರುವ ಹಿನ್ನಡೆ. ಮುಂದೆ ಯಾರು ಪಕ್ಷವನ್ನು ಬೆಳೆಸುತ್ತಾರೆಯೋ ಅಂಥವರನ್ನು ಬೆಳೆಸುವ ಪ್ರಯತ್ನ ಮಾಡುತ್ತೇವೆ.

ಚುನಾವಣೆಯ ಸೋಲಿನ ಹತಾಶೆಯಿಂದ ನೀವು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವರ್ಗಾವಣೆ ಭ್ರಷ್ಟಾಚಾರದ ಆಪಾದನೆ ಮಾಡುತ್ತಿದ್ದೀರಂತೆ?

ಕಾಂಗ್ರೆಸ್‌ನವರು ಹಿಂದೆ ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮೀಷನ್‌ ಆರೋಪ ಮಾಡಿದರು. ಒಂದೂವರೆ ಲಕ್ಷ ಕೋಟಿ ರು. ಲೂಟಿಯಾಗಿದೆ ಎಂದು ಜಾಹೀರಾತು ನೀಡಿದರು. ಹುದ್ದೆಗಳಿಗೆ ಇಂತಹ ರೇಟ್‌ಗಳು ಎಂದು ಜಾಹೀರಾತು ನೀಡಿದರು. ಅವರು ಯಾಕೆ ಮಾಡಿದರು? ಸುಳ್ಳು ಹೇಳಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು ಎಂದು ಮಾಡಿದರಾ? 100 ಸುಳ್ಳು ಹೇಳಿ ಒಂದು ಸತ್ಯ ಮಾತಾಡುತ್ತಾರಲ್ಲ, ಹಾಗೆ ಮಾಡಿದರಾ? ಯಾವುದಾದರೂ ಒಂದು ದಾಖಲೆ ನೀಡಿದರಾ? ಸರ್ಕಾರ ರಚನೆಯಾಗುತ್ತಿದ್ದಂತೆ ವರ್ಗಾವಣೆ ದಂಧೆ ಶುರು ಮಾಡಿದ್ದು ಅವರು. ಅದು ಅಧಿಕಾರಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಾನು ಸೃಷ್ಟಿಮಾಡಿದ್ದಲ್ಲ. ವರ್ಗಾವಣೆ ದಂಧೆ ಪ್ರಾರಂಭಿಸಿ ರೇಟ್‌ ಫಿಕ್ಸ್‌ ಮಾಡಿರುವುದು ಬೀದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಅಧಿಕಾರಿಯೊಬ್ಬರು ಸಿಕ್ಕಿ ಹೇಳುತ್ತಾರೆ. ಆ ಮನುಷ್ಯ ಬಡವ. ಬೇರೆ ರೀತಿಯಲ್ಲಿ ದುಡ್ಡು ಕೊಟ್ಟು ಮಾಡಿಸಿಕೊಳ್ಳಬೇಕಾಯಿತು. ಎರಡು ತಿಂಗಳಲ್ಲಿ 500 ಕೋಟಿ ರು.ಗಿಂತ ಹೆಚ್ಚು ಹಣ ಪರಭಾರೆಯಾಗಿದೆ ಎನ್ನುತ್ತಾರೆ. ಅಧಿಕಾರಿಗಳು ಹೇಳುತ್ತಿರುವ ಮಾಹಿತಿಯೇ ಹೊರತು ನನ್ನ ಊಹೆಯಲ್ಲ.

ಒಂದು ವೇಳೆ ಸಿದ್ದರಾಮಯ್ಯ ಬದಲು ಬೇರೊಬ್ಬರು ಮುಖ್ಯಮಂತ್ರಿಯಾಗಿದ್ದರೆ ಇದೇ ರೀತಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಿರಾ?

ಸರ್ಕಾರದ ನಡೆಯ ವಿರುದ್ಧ ನನ್ನ ಹೋರಾಟವೇ ಹೊರತು, ಸಿದ್ದರಾಮಯ್ಯ ವಿರುದ್ಧ ಅಲ್ಲ. ಯಾವುದೂ ವೈಯಕ್ತಿಕ ದ್ವೇಷದಿಂದ ಅಲ್ಲ. ಇವರಿಗೆ ಏನಾಗಿದೆ? ಎಷ್ಟುಬೇಗ ಎಷ್ಟುಹಣ ದೋಚಬಹುದು ಎಂದು ಸ್ಪರ್ಧೆಗೆ ನಿಂತುಬಿಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ವಾಸ್ತವಾಂಶ ಹೇಳುತ್ತಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ.

ನೀವು ಹಿಟ್‌ ಆ್ಯಂಡ್‌ ರನ್‌ ಮಾಡುತ್ತೀರಿ. ಯಾವುದನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ ಎಂಬುದು ಕಾಂಗ್ರೆಸ್‌ ನಾಯಕರ ದೂರು?

ಕಾಂಗ್ರೆಸ್‌ನವರು ಯಾವುದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದರು ಎಂಬುದನ್ನು ಹೇಳಲಿ. 40 ಪರ್ಸೆಂಟ್‌ ಆರೋಪ ಮಾಡಿ, ಹುದ್ದೆಗಳಿಗೆ ರೇಟ್‌ ಫಿಕ್ಸಾಗಿದೆ ಎಂದಿದ್ದರಲ್ಲ. ಈಗ ಸರ್ಕಾರ ರಚನೆ ಮಾಡಿದ್ದಾರೆ. ದಾಖಲೆ ಇಟ್ಟು ಶಿಕ್ಷೆ ಕೊಡಿಸುತ್ತಾರಾ? ಕೈ ಕೈ ಬದಲಿಸಿಕೊಳ್ಳುವುದನ್ನು ಹುಡುಕಲು ಆಗುತ್ತದಾ? ಜನ ಹೊರಗಡೆ ಮಾತನಾಡುವುದನ್ನು ನಾವು ಹೇಳುತ್ತೇವೆ. ಸರ್ಕಾರ ಹೀಗೆ ನಡೆಯುತ್ತಿದೆ, ಸರಿಪಡಿಸಿಕೊಳ್ಳುವಂತೆ ಹೇಳುತ್ತೇವೆ. ಕೋರ್ಚ್‌ಗೆ ಹೋದಾಗ ಸಾಕ್ಷಿಗಳನ್ನಿಡುತ್ತೇವೆ. ಅದರ ಆಧಾರದ ಮೇಲೆ ತೀರ್ಪು ನೀಡಲಾಗುತ್ತದೆ. ಕೋರ್ಚ್‌ ಬಗ್ಗೆ ಚರ್ಚೆ ಮಾಡಲಾಗುವುದಿಲ್ಲ. ಇದೆಲ್ಲವನ್ನೂ ಸಾಬೀತು ಮಾಡಲು ಹೇಗೆ ಸಾಧ್ಯ? ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ದಾಖಲೆ ಇಟ್ಟು ಸಾಬೀತು ಮಾಡಿದರೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಆಗಲೇ ಇಲ್ಲ. ವ್ಯವಸ್ಥೆ ಆ ರೀತಿ ಇದೆ. ಇಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಶ್ನೆಯಲ್ಲ. ಮೊನ್ನೆ ಅಧಿವೇಶನದಲ್ಲೂ ಅದನ್ನೇ ಹೇಳಿದ್ದೇನೆ. ಸರಿಪಡಿಸಿಕೊಳ್ಳುವುದಾದರೆ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಹಣೆಬರಹ ಎಂದಿದ್ದೇನೆ.

ನೀವು ಬಹಿರಂಗವಾಗಿ ಪ್ರದರ್ಶಿಸಿದ್ದ ಪೆನ್‌ಡ್ರೈವ್‌ ಕತೆ ಮುಂದೇನಾಯಿತು?

ನಾನು ರಾಜಕೀಯವಾಗಿ ಅದನ್ನು ಯಾವಾಗ ಬಳಸಬೇಕೋ ಆಗ ಬಳಸುತ್ತೇನೆ. ಅವರು ಸಾಕ್ಷಿ ಇಲ್ಲ ಎನ್ನುತ್ತಿದ್ದರಲ್ಲ. ಇದೆಯಪ್ಪ, ಆತುರ ಬೇಡ. ಸ್ವಲ್ಪ ಎಚ್ಚರಿಕೆಯಿಂದ ಕೆಲಸ ಮಾಡಿ ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್‌ನವರ ಇಂಡಿಯಾ ಒಕ್ಕೂಟ ಎರಡೂ ಕಡೆಯಿಂದಲೂ ನಿಮಗೆ ಆಹ್ವಾನ ಬಂದಿಲ್ಲವೇ?

ಎರಡೂ ಕಡೆಯಿಂದ ಆಹ್ವಾನ ಬಂದಿಲ್ಲ ಎಂದು ನಾವೇನೂ ಕಾದು ಕುಳಿತಿಲ್ಲ. ಪ್ರಾದೇಶಿಕ ಪಕ್ಷವಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ನಮ್ಮ ಶಕ್ತಿ ಏನಿದೆ ಎಂಬುದು ಗೊತ್ತು. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಈಗ ಹೊರನೋಟಕ್ಕೆ ಬಿಜೆಪಿಯವರಿಗೆ ಜೆಡಿಎಸ್‌ ಅವಶ್ಯಕತೆ ಇದೆ ಎಂದು ನಾನೇನೂ ಸುದ್ದಿ ಹೊರಡಿಸಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಸುದ್ದಿ ಹೊರಗಡೆ ಪ್ರಚಾರವಾಗುತ್ತಿದೆ. ಅದು ಯಾವ ಮೂಲದಿಂದ ಬರುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆಯ್ಕೆಯನ್ನು ಮುಕ್ತವಾಗಿಟ್ಟಿದ್ದೇವೆ. ನಮಗೆ ರಾಜ್ಯ ಮತ್ತು ರಾಜ್ಯದ ಸಮಸ್ಯೆಗಳು ಮುಖ್ಯ. ಅದನ್ನು ಬಗೆಹರಿಸಲು ಯಾರು ತಯಾರಿದ್ದಾರೋ ಅವರ ಜತೆ ಕೈ ಜೋಡಿಸುತ್ತೇವೆ.

‘ಇಂಡಿಯಾ’ ಜತೆ ಈಗಲೂ ಕೈಜೋಡಿಸಲು ಸಿದ್ಧವಿದ್ದೀರಾ?

ಇಂಡಿಯಾ ಎಂದು ಹೊಸದಾಗಿ ಹೆಸರು ಇಟ್ಟುಕೊಂಡಿದ್ದಾರೆ ಅಷ್ಟೆ. ರಾಜ್ಯದಲ್ಲಿ ಸಭೆ ನಡೆಸುವ ಮೊದಲು ಜೆಡಿಎಸ್‌ ಪಕ್ಷವನ್ನು ಕರೆಯಬಾರದು ಎಂಬುದೇ ಕಾಂಗ್ರೆಸ್‌ನ ಮೊದಲ ಷರತ್ತಾಗಿತ್ತು. ಆದ್ದರಿಂದ ಇಲ್ಲಿ ಅವರು ಆಕಾಶದೆತ್ತರಕ್ಕೆ ಹೋಗಿದ್ದಾರೆ. ಅವರಿಗೆ ಜೆಡಿಎಸ್‌ ಅವಶ್ಯಕತೆ ಇಲ್ಲ. ಕರೆಯದೆ ನಾವೇಕೆ ಹೋಗಬೇಕು. ಅದರ ಅವಶ್ಯತೆ ನಮಗೂ ಇಲ್ಲ.

ಹಾಗಾದರೆ ಎನ್‌ಡಿಎ ಜತೆ ಕೈಜೋಡಿಸುತ್ತೀರಾ?

ಇದು ಇನ್ನೂ ಅಪಕ್ವವಾದದ್ದು. ಹಲವಾರು ರೀತಿಯಲ್ಲಿ ಹೊರಗಡೆ ಅಂತೆ-ಕಂತೆಯ ಮಾತುಗಳು ನಡೆಯುತ್ತಿವೆ. ಮುಂದೆ ನೋಡೋಣ. ನಮ್ಮ ಪಕ್ಷದ ಸಂಘಟನೆ ಕಡೆಗೆ ಗಮನ ಕೊಟ್ಟಿದ್ದೇವೆ. ನಮಗೆ ಗೌರವ ಇರಬೇಕು. ನಾವು ಏನೇ ತೀರ್ಮಾನ ಮಾಡಬೇಕಿದ್ದರೂ ಗೌರವಯುತವಾಗಿ ನಡೆಯಬೇಕು. ರಾಜ್ಯದ ಹಲವು ಸಮಸ್ಯೆಗಳಿಗೆ ಪರಿಹಾರ ಬೇಕು. ಅದಕ್ಕೆ ಮೊದಲ ಆದ್ಯತೆ.

ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಕೈಜೋಡಿಸಲು ಸಿದ್ಧಾಂತ ಅಡ್ಡ ಬರುವುದಿಲ್ಲವೇ?

ಸಿದ್ಧಾಂತಕ್ಕಿಂತ ಹೆಚ್ಚಾಗಿ ನನಗೆ ಬೇಕಾಗಿರುವುದು ನಮ್ಮ ರಾಜ್ಯದ ಜನತೆಯ ಸಮಸ್ಯೆಗಳಿಗೆ ಪರಿಹಾರ. ಅದಕ್ಕೆ ಹೋರಾಟ ಮುಂದುವರಿಸಬೇಕಾದ ಅನಿವಾರ್ಯತೆ ಇದೆ. ಇವತ್ತು ಚುನಾವಣೆಯಲ್ಲಿ ಸೋತಿದ್ದೇವೆ ಎಂದು ಸುಮ್ಮನೆ ಕೂಡುವ ಪ್ರಶ್ನೆಯೇ ಇಲ್ಲ. ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭ ಮಾಡುತ್ತೇನೆ. ನಮ್ಮ ಪಕ್ಷದ ಸಿದ್ಧಾಂತದ ಬಗ್ಗೆ ಚರ್ಚೆ ಮಾಡಲು ಇತರರಿಗೆ ನೈತಿಕತೆ ಇಲ್ಲ. ಜಮ್ಮು ಮತ್ತು ಕಾಶ್ಮೀರದ ಫಾರೂಕ್‌ ಅಬ್ದುಲ್ಲಾ ಬಿಜೆಪಿ ಜತೆ ಸೇರಿರಲಿಲ್ಲವೇ? ಮೆಹಬೂಬಾ ಮುಫ್ತಿ ಅವರು ಬಿಜೆಪಿ ಜತೆ ಸರ್ಕಾರ ಮಾಡಿ ಮುಖ್ಯಮಂತ್ರಿಯಾಗಿದ್ದರು. ಡಿಎಂಕೆ ಅಲ್ಲೂ ಇದ್ದರು, ಇಲ್ಲೂ ಇದ್ದಾರೆ. ನಿತೀಶ್‌ ಕುಮಾರ್‌ ಅಲ್ಲಿ ಮತ್ತು ಇಲ್ಲಿಯೂ ಇದ್ದರು. ಇವರು ಯಾವ ಸಿದ್ಧಾಂತ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ ವಿರುದ್ಧ ಶಿವಸೇನೆ ನಿರಂತರ ಹೋರಾಟ ಮಾಡಿತ್ತು.

ಎನ್‌ಡಿಎ ಜತೆ ಕೈಜೋಡಿಸುವ ಬಗ್ಗೆ ತಂದೆಯವರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ನಿಲುವು ಏನು?

ಈವರೆಗೆ ಆ ಚರ್ಚೆಯೇ ನಮ್ಮ ಮುಂದೆ ಬಂದಿಲ್ಲ. ನಮ್ಮ ಮುಂದೆ ಬಾರದಿದ್ದಾಗ ನಾನು ತೀರ್ಮಾನ ಮಾಡುವುದು ಎಲ್ಲಿಂದ ಬಂತು? ಅಂಥ ಸಂದರ್ಭ ಬಂದಾಗ ನಮ್ಮ ಶಾಸಕರು, ಪ್ರಮುಖರ ಸಭೆ ಕರೆಯುತ್ತೇನೆ. ಚರ್ಚೆ ಮಾಡಿ ನಂತರ ತೀರ್ಮಾನ ಮಾಡುತ್ತೇವೆ.

ಒಂದು ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಕೈಜೋಡಿಸಿದರೆ ನಿಮ್ಮ ಪಕ್ಷದ ಜಾತ್ಯತೀತ ನಿಲುವಿಗೆ ಧಕ್ಕೆ ಉಂಟಾಗುವುದಿಲ್ಲವೇ?

ನೋಡಿ ನಾವು ಯಾರ ಜತೆ ಸೇರಿದರೂ ನಮ್ಮ ಪಕ್ಷದ ತತ್ವ-ಸಿದ್ಧಾಂತ, ಜಾತ್ಯತೀತ ನಿಲುವಿಗೆ ಧಕ್ಕೆ ಉಂಟಾಗಲು ಅವಕಾಶ ನೀಡುವುದಿಲ್ಲ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂದು ಕಾಂಗ್ರೆಸ್‌ನವರು ಈಗ ಜಪ ಮಾಡುತ್ತಿದ್ದಾರೆ. ಅದನ್ನು ನಾನು ಮೊದಲು ಪ್ರಸ್ತಾಪಿಸಿದ್ದು. ಹಲಾಲ್‌, ಹಿಜಾಬ್‌ ವಿಷಯ ಬಂದಾಗ ಮೊದಲು ಧ್ವನಿ ಎತ್ತಿದ್ದು ನಾನು. ಇವತ್ತಿಗೂ ಹೇಳುತ್ತೇನೆ. ಎಲ್ಲಾ ಸಮಾಜಗಳ ಗೌರವಯುತ ಬದುಕು ತರುವಂತಹದ್ದು ನಮ್ಮ ಗುರಿ. ಅದು ಹಿಂದು ಇರಲಿ, ಮುಸ್ಲಿಂ ಇರಲಿ, ಜೈನ ಇರಲಿ, ಯಾರೇ ಇರಲಿ, ಒಳ್ಳೆಯ ಗೌರವಯುತ ಬದುಕು ಕಾಣಬೇಕು. ಅದು ನಮ್ಮ ಸಿದ್ಧಾಂತ. ಅದರಲ್ಲಿ ಬದಲಾವಣೆ ಇಲ್ಲ.

ಜಾತ್ಯತೀತ ಸಿದ್ಧಾಂತಕ್ಕೂ ಕೋಮುವಾದಿ ಎಂಬ ಆರೋಪ ಹೊತ್ತಿರುವ ಸಿದ್ಧಾಂತಕ್ಕೂ ವ್ಯತ್ಯಾಸ ಇದೆಯಲ್ಲವೇ?

ನಾನು ಹೇಳಿದೆನಲ್ಲ. ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ರಾಜ್ಯದ ಯಾವುದೇ ಸಮಾಜಕ್ಕೂ ಧಕ್ಕೆ ತರುವಂತಹದ್ದು ಮಾಡಲ್ಲ. 2006ರಲ್ಲಿ ಬಿಜೆಪಿ ಜತೆ ಸರ್ಕಾರ ಮಾಡಿದೆ. ಆಗ ಈಗಿರುವಂತಹ ವ್ಯವಸ್ಥೆಗೆ ಅವಕಾಶ ಕೊಟ್ಟಿದ್ದೇನೆಯೇ? ಕೊಡಲಿಲ್ಲ. ಕರ್ನಾಟಕದಲ್ಲಿ ಈ ವ್ಯವಸ್ಥೆ ಬೇರೆ ಇರಬಹುದು. ಅದನ್ನು ಯಾವ ರೀತಿ ಹ್ಯಾಂಡಲ್‌ ಮಾಡಬೇಕು ಎಂಬುದು ಗೊತ್ತಿದೆ.

ಸಿಎಂ ಸನ್ನೆ ಮೇರೆಗೆ ಶಾಸಕರ ಸಸ್ಪೆಂಡ್‌: ಎಚ್‌ಡಿಕೆ ಆರೋಪ!

ಬಿಜೆಪಿ ಜತೆ ಕೈಜೋಡಿಸಿದರೆ ಮುಸ್ಲಿಮರು ದೂರವಾಗುವ ಹಿಂಜರಿಕೆ ಇಲ್ಲವೇ?

ಮುಸ್ಲಿಂನ ಕೆಲವು ಪಂಗಡಗಳಿವೆ. ನನಗಿರುವ ಮಾಹಿತಿಯಂತೆ ಅವು ಕೆಲ ವಿಷಯದಲ್ಲಿ ಬಿಜೆಪಿಯ ಕೆಲವು ನಿಲುವನ್ನು ಒಪ್ಪಿಕೊಳ್ಳುತ್ತವೆ. ಇತ್ತೀಚಿನ ತೀರ್ಮಾನಕ್ಕೆ ಒಂದು ವರ್ಗ ಸಹಮತ ವ್ಯಕ್ತಪಡಿಸುತ್ತದೆ. ಯಾವುದೇ ಸಮಾಜಕ್ಕೆ ಧಕ್ಕೆ ತರಬಾರದು.

ಒಂದು ವೇಳೆ ಎನ್‌ಡಿಎ ಜತೆ ಹೊಂದಾಣಿಕೆಯಾದರೆ ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ ಎಷ್ಟುಸ್ಥಾನ ಕೇಳುತ್ತೀರಿ?

ಇನ್ನೂ ಆ ಪ್ರಶ್ನೆಯೇ ಉದ್ಭವ ಆಗಿಲ್ಲ. ನಾವು ಆರೇಳು ಸ್ಥಾನ ಕೇಳಿದ್ದೇವೆ ಎನ್ನುವುದೆಲ್ಲ ಊಹಾಪೋಹ.

ನೀವು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಜಿಗಿಯುತ್ತೀರಿ ಎಂಬ ಮಾತು ಕೇಳಿಬರುತ್ತಿದೆ?

ಆ ಪ್ರಶ್ನೆಯೇ ಇಲ್ಲ. ನನಗೆ ಇಲ್ಲಿ ನನ್ನ ಪಕ್ಷ ಕಟ್ಟಬೇಕು. ನನಗೆ ರಾಜ್ಯ ಮುಖ್ಯ. ರಾಷ್ಟ್ರ ರಾಜಕಾರಣದ ಆಸಕ್ತಿ ಇಟ್ಟುಕೊಂಡಿಲ್ಲ. ಅದರ ಅವಶ್ಯಕತೆಯೂ ಇಲ್ಲ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡುವ ಸಾಧ್ಯತೆ ಇದೆಯೇ?

ಖಂಡಿತ ಇಲ್ಲ. ವಿಧಾನಸಭೆಯಲ್ಲಿಯೇ ಇರಬೇಕು ಎಂದುಕೊಂಡಿದ್ದೇನೆ. ರಾಜ್ಯದಲ್ಲಿಯೇ ಇರಬೇಕು ಎಂಬುದು ನನ್ನ ದೃಢ ನಿಲುವು.

Follow Us:
Download App:
  • android
  • ios