ಕಳವು ಆರೋಪ ಹೊರಿಸಿದ್ದ ಮಾಲಿಕರ ವಿರುದ್ಧ ಮರಣಪತ್ರ ಬರೆದಿಟ್ಟು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಲಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಆ.22) :  ಕಳವು ಆರೋಪ ಹೊರಿಸಿದ್ದ ಮಾಲಿಕರ ವಿರುದ್ಧ ಮರಣಪತ್ರ ಬರೆದಿಟ್ಟು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಲಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪುಲಕೇಶಿನಗರ ಮಸೀದಿ ರಸ್ತೆಯ ಗ್ರೀನ್‌ ಅವೆನ್ಯೂ ಅಪಾರ್ಟ್‌ಮೆಂಟ್‌ನ ಜೀಮನ್‌ ವರ್ಗೀಸ್‌(43) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಅಪಾರ್ಚ್‌ಮೆಂಟ್‌ನ ಟೆರೆಸ್‌ನ ಕೋಣೆಯ ಶೌಚಾಲಯದ ಕಿಟಕಿಗೆ ಸೀರೆ ಕಟ್ಟಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Viral video: ಪತಿಯಿಂದ ಜೀವ ಬೆದರಿಕೆ; ವಿಡಿಯೋ ಮಾಡಿ ಸಿಎಂಗೆ ಟ್ಯಾಗ್‌!

ಕೇರಳ ಮೂಲದ ವರ್ಗೀಸ್‌ ಕಳೆದ ಒಂದು ವರ್ಷ ಹಿಂದೆ ಬೆಂಗಳೂರಿಗೆ ಬಂದು, ಗ್ರೀನ್‌ ಅವಿನ್ಯೂ ಅಪಾರ್ಚ್‌ಮೆಂಟ್‌ (Green Avenue Apartment)ನಿವಾಸಿ ಗಾಯತ್ರಿ ಜೆ.ಗೋಪಾಲ್‌(Gayatri J. Gopal) ಎಂಬುವವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೀಗಾಗಿ ಅದೇ ಅಪಾರ್ಚ್‌ಮೆಂಟ್‌ನ ಟೆರೆಸ್‌ನಲ್ಲಿರುವ ಕೋಣೆಯಲ್ಲಿ ತಂಗಿದ್ದರು. ಇತ್ತೀಚೆಗೆ ಗಾಯತ್ರಿ ಅವರ ಫ್ಲ್ಯಾಟ್‌ನಲ್ಲಿ ಸುಮಾರು 250 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದ್ದವು. ಈ ಸಂಬಂಧ ಅವರು ಕಾರು ಚಾಲಕ ವರ್ಗೀಸ್‌, ಹೌಸ್‌ ಕೀಪಿಂಗ್‌ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪುಲಕೇಶಿನಗರ ಠಾಣೆ ಪೊಲೀಸರು ಕಾರು ಚಾಲಕ ವರ್ಗೀಸ್‌ನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಕಳುಹಿಸಿ ಕೊಟ್ಟಿದ್ದರು.

ಮನೆ ಮಾಲಿಕರು ತನ್ನ ಮೇಲೆ ಕಳ್ಳತನ ಆರೋಪ ಹೊರಿಸಿದ್ದಕ್ಕೆ ನೊಂದಿದ್ದ ವರ್ಗೀಸ್‌, ಸೋಮವಾರ ಟೆರೆಸ್‌ನ ಶೌಚಾಲಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ಮಾಡಿದಾಗ ಮಳಯಾಳಂ ಭಾಷೆಯಲ್ಲಿ ಬರೆದಿರುವ ಮರಣ ಪತ್ರ ಸಿಕ್ಕಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪುಲಕೇಶಿನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Bengaluru crime: ಹರಕೆ ಹೊತ್ತು ಸರಗಳ್ಳತನ ಮಾಡಿ ಮುಡಿ ಕೊಟ್ಟರು!

ಡೆತ್‌ನೋಟಲ್ಲಿ ಏನಿದೆ?

ಕಾರು ಚಾಲಕ ವರ್ಗೀಸ್‌ ಬರೆದಿರುವ ಮರಣಪತ್ರದಲ್ಲಿ ಮನೆ ಮಾಲಿಕರ ವಿರುದ್ಧ ಆರೋಪ ಮಾಡಿದ್ದಾನೆ. ನಾನು ಕಳ್ಳತನ ಮಾಡದಿದ್ದರೂ ನನ್ನ ವಿರುದ್ಧ ಕಳ್ಳತನ ಆರೋಪ ಹೊರಿಸಿ ದೂರು ನೀಡಿದ್ದರು. ಹೀಗಾಗಿ ನಾನು ಪೊಲೀಸರ ವಿಚಾರಣೆ ಎದುರಿಸುವಂತಾಯಿತು. ಇದರಿಂದ ನನ್ನ ಮನಸಿಗೆ ನೋವಾಗಿದೆ. ನನ್ನ ಸಾವಿಗೆ ಮನೆ ಮಾಲಿಕರೇ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮನೆ ಮಾಲಿಕರಿಗೆ ಶೀಘ್ರದಲ್ಲೇ ನೋಟಿಸ್‌ ಕೊಟ್ಟು ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.