ನಗರದಲ್ಲಿ ಮಹಿಳೆಯ ಸರಗಳ್ಳತನ ಮಾಡಿ ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದ ಇಬ್ಬರು ಸರಗಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಆ.21):  ನಗರದಲ್ಲಿ ಮಹಿಳೆಯ ಸರಗಳ್ಳತನ ಮಾಡಿ ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಮುಡಿಕೊಟ್ಟು ಹರಕೆ ತೀರಿಸಿದ್ದ ಇಬ್ಬರು ಸರಗಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ಮೂಲದ ಮಂಜುನಾಥ ಮತ್ತು ಉತ್ತರಹಳ್ಳಿಯ ಯತೀಶ್‌ ಬಂಧಿತರು. ಆರೋಪಿಗಳಿಂದ .3.04 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರ ಹಾಗೂ ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆ.13ರಂದು ಬೆಳಗ್ಗೆ ಗಿರಿನಗರ 11ನೇ ಕ್ರಾಸ್‌ನಲ್ಲಿ ಶಾಮಲಾ ಎಂಬುವವರು ವಾಕಿಂಗ್‌ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಶಾಮಲಾ ಅವರ ಕುತ್ತಿಗೆ ಕೈ ಹಾಕಿ 25 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿ(Parappana agrahara jail)ನಲ್ಲಿ ಇರುವಾಗ ಆರೋಪಿ ಮಂಜುನಾಥ ಮತ್ತು ಯತೀಶ್‌ ಪರಿಚಯವಾಗಿ ಸ್ನೇಹಿತರಾಗಿದ್ದರು. ಎರಡು ತಿಂಗಳ ಹಿಂದೆ ಜಾಮೀನು ಪಡೆದು ಹೊರಬಂದ ಬಳಿಕ ಇಬ್ಬರು ಒಟ್ಟಿಗೆ ಸೇರಿ ಅಪರಾಧಕೃತ್ಯಗಳನ್ನು ಎಸೆಗುತ್ತಿದ್ದರು. ಅದರಂತೆ ಇತ್ತೀಚೆಗೆ ಚನ್ನಪಟ್ಟಣದಲ್ಲಿ ಪಲ್ಸರ್‌ ದ್ವಿಚಕ್ರ ವಾಹನ ಕದ್ದಿದ್ದ ಆರೋಪಿಗಳು, ಅದೇ ದ್ವಿಚಕ್ರ ವಾಹನ ಬಳಸಿ ಆ.13ರಂದು ಗಿರಿನಗರದಲ್ಲಿ ಮಹಿಳೆಯ ಸರ ಕದ್ದು ಪರಾರಿಯಾಗಿದ್ದರು.

ಮದರಸಾದೊಳಗೆ 12 ವರ್ಷ ಬಾಲಕನ ರುಂಡ ಬೇರ್ಪಟ್ಟ ಮೃತದೇಹ ಪತ್ತೆ, ಮೂವರ ಬಂಧನ

ಸರಗಳ್ಳತನ ಯಶಸ್ಸಿಗೆ ಹರಕೆ:

ಬಂಧಿತ ಇಬ್ಬರು ಆರೋಪಿಗಳ ಪೈಕಿ ಮಂಜುನಾಥ ಸರಗಳ್ಳತನ ಯಶಸ್ವಿಯಾದರೆ, ಮುಡಿ ಕೊಡುವುದಾಗಿ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರನಿಗೆ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದ. ಅದರಂತೆ ಅಂದು ಸರಗಳ್ಳತನ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಮಂಜುನಾಥ ತಲೆ ಕೂದಲು ಬೋಳಿಸಿಕೊಂಡು ಮಹದೇಶ್ವರನಿಗೆ ಹರಕೆ ತೀರಿಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಒಂದು ಸರಗಳ್ಳತನ, ಎರಡು ದ್ವಿಚಕ್ರ ವಾಹನ ಕಳವು, ಚನ್ನಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಭೂಮಿ ಮಂಜೂರು; ತಹಸೀಲ್ದಾರ್ ಸೇರಿ ಮೂವರ ವಿರುದ್ಧ ಕ್ರಿಮಿನಲ್ ಕೇಸ್

.80 ಸಾವಿರಕ್ಕೆ ಸರ ಅಡಮಾನ

ಆರೋಪಿಗಳು ಮಹಿಳೆಯ ಸರ ಕದ್ದ ಬಳಿಕ ಕನಕಪುರಕ್ಕೆ ತೆರಳಿ ಪರಿಚಿತ ಮಹಿಳೆಯ ಮುಖಾಂತರ ಆ ಚಿನ್ನದ ಸರವನ್ನು ಅಡಮಾನವಿರಿಸಿ .80 ಸಾವಿರ ಪಡೆದಿದ್ದರು. ಬಳಿಕ ಹರಕೆ ತೀರಿಸಲು ನೇರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಸರ ಕಳೆದುಕೊಂಡ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ನಿಗಾವಹಿಸಿದ್ದ ಪೊಲೀಸರು ಆರೋಪಿಗಳು ಹರಕೆ ತೀರಿಸಿ ನಗರಕ್ಕೆ ಬರುತ್ತಿದ್ದಂತೆ ಬಂಧಿಸಿದ್ದಾರೆ.