ಚಿತ್ರದುರ್ಗ(ಜು.09): ಇಲ್ಲಿನ ಹಿರಿಯೂರಿನ 96ರ ಇಳಿವಯಸ್ಸಿನ ಗೋವಿಂದಜ್ಜಿಯ ವಿಲ್ ಪವರ್ ಇದೀಗ ಕೊರೋನಾ ವಿರುದ್ಧದ ಹೋರಾಟಕ್ಕೆ ಒಂದರ್ಥದಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿದೆ. 

ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡಪ್ರಭದಲ್ಲಿ ಬುಧವಾರ ಪ್ರಕಟವಾದ ಕೊರೋನಾ ವಿರುದ್ದ ಹೋರಾಡಿ ಗೆದ್ದ 96ರ ಅಜ್ಜಿ ವರದಿ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ‘ಏನೂ ಆಗೋಲ್ಲ ಕಣ್ರಪ್ಪ ಒಂದಿಷ್ಟು ಗಟ್ಟಿ ಮನಸ್ಸು ಮಾಡಿಕೊಳ್ಳಿ, ಆಸ್ಪತ್ರೆಯಲ್ಲಿ ಖುಷಿಯಾಗಿರಿ’ ಎಂಬ ಹೇಳಿಕೆ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದು ಎಲ್ಲರೂ ಈ ಸಾಲಿಗೆ ಗೋಲಾಕಾರ ಹಾಕಿ ಫೇಸ್‌ಬುಕ್ ವಾಲ್‌ಗೆ ಅಂಟಿಸಿ ಕೊಂಡಿದ್ದಾರೆ. 

ಸಚಿವ ಸುರೇಶ್ ಕುಮಾರ್ ಗೋವಿಂದಮ್ಮನ ಆ ನುಡಿಗಳು ಎಲ್ಲರಲ್ಲೂ ಆತ್ಮ ವಿಶ್ವಾಸ ಹೆಚ್ಚಿಸಲಿ ಎಂದು ಹಾರೈಸಿದರೆ, ಸಂಸದೆ ಶೋಭಾ ಕರಂದ್ಲಾಜೆ ಕೊರೋನಾ ಸಂಕಷ್ಟದಲ್ಲಿ ಇದೊಂದು ಸಂತಸದಾಯಕ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಅಜ್ಜಿಯ ಆತ್ಮಸ್ಥೈರ್ಯವೆಂದು ಈ ವರದಿಗೆ ಘೋಷವಾಕ್ಯ ಬರೆದಿದ್ದಾರೆ. 

 

ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಬಹುತೇಕ ವಾಟ್ಸಾಪ್ ಗ್ರೂಪ್‌ಗಳಲ್ಲಿ ಗೋವಿಂದಜ್ಜಿಯ ಈ ವರದಿ ತುಣುಕು ರಾರಾಜಿಸುತ್ತಿವೆ.‘ಏನೂ ಆಗೋಲ್ಲ ಅಂತ ಅಜ್ಜಿ ಹೇಳಿದ ಮ್ಯಾಲೇ ನಾವ್ಯಾಕೆ ಹೆದರಬೇಕು, ನಕ್ಕಂತ ಇದ್ದರಾಯ್ತು’ ಎಂಬ ಅಭಿಪ್ರಾಯ ವ್ಯಕ್ತವಾಗಿವೆ. ಕೊರೋನಾ ಗೆದ್ದು ಬಂದ ಅಜ್ಜಿಯನ್ನು ಹಿರಿಯೂರಿನ ಕೆಲ ಸಂಘ ಸಂಸ್ಥೆಗಳು ಬುಧವಾರ ಸನ್ಮಾನಿಸಿವೆ.