Asianet Suvarna News Asianet Suvarna News

ಬೆಂಗಳೂರು: ನಗರದ ಕೆರೆಗಳಲ್ಲಿ 9 ಸಾವಿರ ಟನ್‌ ಮೀನು ಉತ್ಪಾದನೆ!

ನಗರದ ಕೆರೆಗಳೆಲ್ಲವೂ ಕಲುಷಿತಗೊಳ್ಳುತ್ತಿದ್ದು, ನೀರನ್ನು ಮುಟ್ಟುವುದೂ ಕಷ್ಟಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ, ಇದೇ ಕರೆಗಳ ನೀರಿನಲ್ಲಿ 2022-23ನೇ ಸಾಲಿನಲ್ಲಿ 9126 ಟನ್‌ ಮೀನು ಉತ್ಪಾದನೆ ಮಾಡಲಾಗಿದೆ.

9000 tons fish production in bengaluru city lakes by Department of Fisheries rav
Author
First Published Jun 30, 2023, 12:57 PM IST

ಗಿರೀಶ್‌ ಗರಗ

ಬೆಂಗಳೂರು (ಜೂ.30) : ನಗರದ ಕೆರೆಗಳೆಲ್ಲವೂ ಕಲುಷಿತಗೊಳ್ಳುತ್ತಿದ್ದು, ನೀರನ್ನು ಮುಟ್ಟುವುದೂ ಕಷ್ಟಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ, ಇದೇ ಕರೆಗಳ ನೀರಿನಲ್ಲಿ 2022-23ನೇ ಸಾಲಿನಲ್ಲಿ 9126 ಟನ್‌ ಮೀನು ಉತ್ಪಾದನೆ ಮಾಡಲಾಗಿದೆ.

ಮೀನುಗಾರಿಕೆ ಇಲಾಖೆಯು ಸಮುದ್ರ, ನದಿಗಳಲ್ಲಿನ ಮೀನುಗಾರಿಕೆಯನ್ನಷ್ಟೇ ಅಲ್ಲದೆ ಬೆಂಗಳೂರಿನಂತಹ ಮಹಾನಗರದಲ್ಲೂ ಮೀನು ಉತ್ಪಾದನೆಗೆ ಒತ್ತು ನೀಡುತ್ತಿದೆ. ನಗರ ಜಿಲ್ಲೆ ವ್ಯಾಪ್ತಿಯ 160 ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡಲಾಗುತ್ತಿದ್ದು, 2022-23ನೇ ಸಾಲಿನಲ್ಲಿ 9,126 ಟನ್‌ ಮೀನು ಉತ್ಪಾದನೆ ಮಾಡಲಾಗಿದೆ. ಆ ಮೂಲಕ ಬೆಂಗಳೂರಿನಂತಹ ನಗರದಲ್ಲೂ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬೆಂಗಳೂರು ನಗರದಲ್ಲಿ ಮೀನುಗಾರಿಕೆ ಉತ್ತಮವಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಅಂದರೆ 2020-21ರಿಂದ 2022-23ರವರೆಗೆ 24,547 ಟನ್‌ ಮೀನು ಉತ್ಪಾದನೆ ಮಾಡಲಾಗಿದೆ.

ಮಲ್ಪೆ ಕಡಲ ತೀರದ ಗಂಗೆ ಕೂದಲಿನ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು!

ಶೇ.30 ಉತ್ಪಾದನೆ ಹೆಚ್ಚಳ:

ಮೀನುಗಾರಿಕೆ ಇಲಾಖೆ ಮಾಹಿತಿಯಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮೀನುಗಾರಿಕೆಗಾಗಿ ಪರವಾನಗಿ ನೀಡಲಾದ ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡಲಾಗುತ್ತಿದೆ. 2020-21ರಲ್ಲಿ 6,061 ಟನ್‌ ಮೀನು ಉತ್ಪಾದನೆಯಾಗಿದೆ. ಅದೇ 2021-22ರಲ್ಲಿ ಆ ಪ್ರಮಾಣ 9,360 ಟನ್‌ಗೆ ಏರಿಕೆಯಾಗಿದ್ದು, ಒಂದೇ ವರ್ಷದಲ್ಲಿ ಶೇ.30ರಷ್ಟುಹೆಚ್ಚಳವಾಗಿದೆ. ಆದರೆ, 2022-23ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತ ಕೊಂಚ ಕಡಿಮೆಯಾಗಿದ್ದು, 9,126 ಟನ್‌ ಮೀನು ಉತ್ಪಾದಿಸಲಾಗಿದೆ.

104 ಕೆರೆಗಳಲ್ಲಿ ಮೀನುಗಾರಿಕೆ:

2023-24ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಈವರೆಗೆ 104 ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅವಕಾಶ ನೀಡಲಾಗಿದೆ. ಅದರಲ್ಲಿ 57 ಕೆರೆಗಳನ್ನು ಮೀನುಗಾರರ ಸಹಕಾರ ಸಂಘಗಳಿಗೆ (ಎಫ್‌ಸಿಎಸ್‌) ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಉಳಿದ 47 ಕೆರೆಗಳನ್ನು ಟೆಂಡರ್‌ ಪ್ರಕ್ರಿಯೆ ನಡೆಸಿ ಖಾಸಗಿ ವ್ಯಕ್ತಿ, ಸಂಸ್ಥೆಗೆ ನೀಡಲಾಗಿದೆ. ಹೀಗೆ ಗುತ್ತಿಗೆ ಆಧಾರದಲ್ಲಿ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅನುಮತಿಸಿದ್ದರಿಂದ ಇಲಾಖೆಗೆ .75 ಲಕ್ಷ ಆದಾಯ ಬರುತ್ತಿದೆ. ಎಫ್‌ಸಿಎಸ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ 57 ಕೆರೆಗಳಿಂದ .14.4 ಲಕ್ಷ ಹಾಗೂ ಟೆಂಡರ್‌ ಪ್ರಕ್ರಿಯೆ ಮೂಲಕ 47 ಕೆರೆಗಳನ್ನು ನೀಡಿದ್ದರಿಂದ .60 ಲಕ್ಷ ಆದಾಯ ಬಂದಿದೆ. ಕಳೆದ ವರ್ಷ 160 ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ಅನುಮತಿಸಲಾಗಿತ್ತು. ಹೀಗಾಗಿ ಈ ವರ್ಷ ಮುಂದಿನ ದಿನಗಳಲ್ಲಿ ಮೀನು ಸಾಕಣೆಗಾಗಿ ಕೆರೆಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ನೀರಿನ ಗುಣಮಟ್ಟ ಆಧರಿಸಿ ಲೈಸೆನ್ಸ್‌

ಕೆರೆಗಳಲ್ಲಿನ ನೀರಿನ ಗುಣಮಟ್ಟವನ್ನು ಆಧರಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಎ, ಬಿ, ಸಿ, ಡಿ ಮತ್ತು ಇ ಎಂದು ವರ್ಗೀಕರಿಸುತ್ತದೆ. ಆ ಪೈಕಿ ‘ಎ’ನಿಂದ ‘ಡಿ’ವರೆಗಿನ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅನುಮತಿಸಲು ಮೀನುಗಾರಿಕಾ ಇಲಾಖೆಗೆ ತಿಳಿಸುತ್ತದೆ. ಅಲ್ಲದೆ ಎ, ಬಿ, ಸಿ ಕೆರೆಗಳು ಮಾನವ ಬಳಕೆಗೆ ಹಾಗೂ ಡಿ ವರ್ಗದ ಕೆರೆ ವನ್ಯ ಜೀವಿ ಬಳಕೆ ಹಾಗೂ ಇ ವರ್ಗವು ಕೈಗಾರಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ನಿಗದಿ ಮಾಡಲಾಗಿದೆ. ಅಲ್ಲದೆ, ‘ಇ’ ವರ್ಗದ ಕೆರೆಗಳು ಮೀನುಗಾರಿಕೆಗೆ ಅರ್ಹವಲ್ಲ ಎಂಬ ಕಾರಣಕ್ಕಾಗಿ ಮೀನುಗಾರಿಕೆ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ.

ಮೀನುಗಾರರಿಗೆ ಪರಿಹಾರ ವಿಳಂಬವಾದರೆ ಅಧಿಕಾರಿಗಳೇ ಹೊಣೆ: ಸಚಿವ ಮಾಂಕಾಳ ವೈದ್ಯ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕೆರೆಗಳಲ್ಲೂ ಮೀನು ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಕೆರೆಗಳ ನೀರಿನ ಗುಣಮಟ್ಟಆಧರಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸುವ ಕೆರೆಗಳಲ್ಲಿ ಮೀನು ಗಣಿಗಾರಿಕೆ ಮಾಡಲು ಪರವಾನಗಿ ನೀಡಲಾಗುತ್ತಿದೆ. ಈ ವರ್ಷ 104 ಕೆರೆಗಳಲ್ಲಿ ಮೀನು ಸಾಕಣೆಗೆ ಪರವಾನಗಿ ನೀಡಲಾಗಿದೆ.

-ಚಿಕ್ಕಣ್ಣ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ (ಬೆಂಗಳೂರು ನಗರ ಜಿಲ್ಲೆ)

Follow Us:
Download App:
  • android
  • ios