ಮೀನುಗಾರರಿಗೆ ಪರಿಹಾರ ವಿಳಂಬವಾದರೆ ಅಧಿಕಾರಿಗಳೇ ಹೊಣೆ: ಸಚಿವ ಮಾಂಕಾಳ ವೈದ್ಯ
ಮೀನುಗಾರಿಕೆಗೆ ತೆರಳಿದ ವೇಳೆ ಅವಘಡ ಸಂಭವಿಸಿದರೆ, ತೊಂದರೆಗೆ ಒಳಗಾಗುವ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಅಧಿಕಾರಿಗಳು ಸಂತ್ರಸ್ತರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ವಿಳಂಬವಾದರೆ ಸಂಬಂಧಪಟ್ಟಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು (ಜೂ.17) : ಮೀನುಗಾರಿಕೆಗೆ ತೆರಳಿದ ವೇಳೆ ಅವಘಡ ಸಂಭವಿಸಿದರೆ, ತೊಂದರೆಗೆ ಒಳಗಾಗುವ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಅಧಿಕಾರಿಗಳು ಸಂತ್ರಸ್ತರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ವಿಳಂಬವಾದರೆ ಸಂಬಂಧಪಟ್ಟಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಮೀನುಗಾರಿಕೆಗೆ ತೆರಳಿದ ಸಂದರ್ಭ ಬೋಟ್‌ಗಳಿಗೆ ಹಾನಿ, ಅವಘಡದಿಂದ ಮೃತಪಟ್ಟಮೀನುಗಾರರಿಗೆ ಪರಿಹಾರ ವಿತರಣೆ ಸೇರಿದಂತೆ ಜಿಲ್ಲೆಯಲ್ಲಿ 20 ಪ್ರಕರಣಗಳು ಒಂದು ವರ್ಷದಿಂದ ಬಾಕಿ ಇದ್ದು, ರಾಜ್ಯ ಸರ್ಕಾರದಿಂದ ನೀಡಬೇಕಾದ ಪರಿಹಾರ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮೀನುಗಾರರಿಗೆ ವಿನಾ ಕಾರಣ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಶಾಸಕ ಟಿ.ಡಿ.ರಾಜೇಗೌಡ ವಾರ್ನಿಂಗ್
ಮೀನುಗಾರರ ಸಂಕಷ್ಟಪರಿಹಾರ ನಿಧಿಯಡಿ ಉತ್ತರ ಕನ್ನಡ, ಉಡುಪಿ, ದ.ಕ. ಈ ಮೂರು ಜಿಲ್ಲೆಗಳಿಗೆ ಒಟ್ಟು 3.60 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ಹಿಂದಿನ ಬಿಜೆಪಿ ಸರ್ಕಾರ ಮೀನುಗಾರರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಹಿಂದಿನ ಬಾಕಿಯಲ್ಲಿ ಮೊದಲ ಹಂತದಲ್ಲಿ 1.60 ಕೋಟಿ ಬಿಡುಗಡೆಗೊಳಿಸಿ, ಆದ್ಯತೆ ಮೇರೆಗೆ ಪರಿಹಾರ ಮೊತ್ತ ವಿತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮೃತ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 6 ಲಕ್ಷ ರು. ಹಾಗೂ ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯ ಗುಂಪು ವಿಮೆ ಸೌಲಭ್ಯದಡಿ 5 ಲಕ್ಷ ರು. ಮೊತ್ತ ಸಿಗುತ್ತದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಪರಿಹಾರ ಮೊತ್ತವನ್ನು ಸಂತ್ರಸ್ತ ಕುಟುಂಬಗಳಿಗೆ ನೀಡಿಲ್ಲ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ವ್ಯಕ್ತಿ ಮೃತಪಟ್ಟಮೂರು ತಿಂಗಳುಗಳ ಒಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂಬ ನಿಯಮಕ್ಕೆ ವಿಧಿಸಲಾಗಿದೆ. ಅನೇಕ ಮೀನುಗಾರರು ಮಾಹಿತಿ ಕೊರತೆಯಿಂದ ದಾಖಲೆ ಸಲ್ಲಿಸಲು ವಿಳಂಬ ಆಗಿರಬಹುದು. ಈ ನಿಯಮಕ್ಕೆ ವಿನಾಯಿತಿ ನೀಡಬೇಕು, ಇಲ್ಲವಾದಲ್ಲಿ ಈಗಾಗಲೇ ಮೃತಪಟ್ಟಿರುವ ಮೀನುಗಾರರ ಕುಟುಂಬಕ್ಕೆ ಅನ್ಯಾಯವಾಗುತ್ತದೆ. ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಿ ಕೇಂದ್ರ ಸರ್ಕಾರಕ್ಕೆ ಈ ವಿಷಯ ಮನವರಿಕೆ ಮಾಡಿಕೊಟ್ಟು, ವಿಮೆ ಹಣ ಫಲಾನುಭವಿಗಳಿಗೆ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು ಎಂದರು.
ಮೀನುಗಾರರು ಇಡೀ ದೇಶದಲ್ಲಿ ಅತಿ ಹೆಚ್ಚು ನಿರ್ಲಕ್ಷಿತರಾಗಿದ್ದಾರೆ. ಕಳೆದ 10 ತಿಂಗಳಲ್ಲಿ ಬಿಜೆಪಿ ಸರ್ಕಾರ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಕೊಟ್ಟಿಲ್ಲ. 10 ತಿಂಗಳದ್ದು ಸೇರಿ ಪ್ರತಿ ತಿಂಗಳು ಡೀಸೆಲ್ ಸಬ್ಸಿಡಿ ಸಿಗುವಂತೆ ಮಾಡುತ್ತೇನೆ. ಅಧಿಕಾರಿಗಳು ಒಂದು ತಿಂಗಳಲ್ಲಿ ಈ ಕೆಲಸವನ್ನು ಮಾಡಬೇಕು. ಕೆಲಸ ಮಾಡದ ಅಧಿಕಾರಿಗಳನ್ನು ನನ್ನ ಇಲಾಖೆಯಲ್ಲಿ ಉಳಿಸಿಕೊಳ್ಳುವುದಿಲ್ಲ ಎಂದು ಖಡಕ್ ಹೇಳಿದರು.
ಸತ್ತವರ ಬಗ್ಗೆಯೂ ಮಾನದಂಡ ಕೇಳಿದ್ರೆ ಕತೆಯೇನ್ರಿ?
ಮೀನುಗಾರಿಕೆಯಲ್ಲಿ ಸತ್ತಿದ್ದಕ್ಕೆ ಪ್ರೂಫ್ ಇದ್ದರೆ ಸಾಕು, ಸತ್ತವರ ಬಗ್ಗೆಯೂ ಮಾನದಂಡ ಕೇಳಿದ್ರೆ ಕತೆಯೇನ್ರಿ?
ಹೀಗೆಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದು ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ. ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ವೇಳೆ, ಮೀನುಗಾರಿಕೆ ನಡೆಸುತ್ತಿದ್ದಾಗ ಸಾವಿಗೀಡಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬ ಅಂಶ ಮೀನುಗಾರರಿಂದ ಗಮನಕ್ಕೆ ಬಂದಾಗ ಸಚಿವರು ಈ ಪ್ರತಿಕ್ರಿಯೆ ನೀಡಿದರು.
ಕರ್ನಾಟಕದ ಕರಾವಳಿಗೆ ಈಗ ಚಂಡಮಾರುತ ದಾಳಿ ಭೀತಿ: ಇಂದಿನಿಂದ ಕರಾವಳಿಯಲ್ಲಿ 3 ದಿನ ಮಳೆ ಸಾಧ್ಯತೆ
ಕೇಂದ್ರ ಸರ್ಕಾರ ಯಾವುದೋ ಏಜೆನ್ಸಿಗೆ ಪರಿಹಾರದ ಹಣ ನೀಡಲು ನೇಮಕ ಮಾಡಿದೆ. ಆದರ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜ್ಯ ಸರ್ಕಾರದಿಂದ ಏನು ಪರಿಹಾರ ಬೇಕೋ ಅದನ್ನು ಒದಗಿಸುತ್ತೇನೆ ಎಂದು ಸಮಾಧಾನಿಸಿದರು.