ಬೆಂಗಳೂರು(ಏ.28): ಕೊರೋನಾ ವೈರಸ್‌ಗೆ ಸೋಮವಾರ ರಾಜ್ಯದಲ್ಲಿ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೋನಾದಿಂದ ರಾಜ್ಯದಲ್ಲಿ ಸಾವು ಸಂಖ್ಯೆ 20ಕ್ಕೇರಿದೆ. ಇದೇ ವೇಳೆ, ರಾಜ್ಯದಲ್ಲಿ ಸೋಮವಾರ 9 ಮಂದಿಗೆ ಕೊರೋನಾ ವೈರಾಣು ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆಯಾಗಿದೆ.

"

ಇನ್ನೊಂದೆಡೆ ಸೋಮವಾರ ಒಟ್ಟು 11 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 193ಕ್ಕೇರಿದೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 319ಕ್ಕೆ ಇಳಿದಂತಾಗಿದೆ.

ಬೆಂಗಳೂರಿನಲ್ಲಿ ಶೇ.50 ಪಿಪಿಇ ಕಿಟ್‌ ಉತ್ಪಾದನೆ: ಕೊರೋನಾ ಸಮರದಲ್ಲಿ ಸಾಧನೆ!

ಅಲ್ಲದೆ, ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಇದಾಗಿದೆ.

ಭಾನುವಾರ ತಿಂಗಳಲ್ಲಿಯೇ ಅತ್ಯಂತ ಕಡಿಮೆ (3) ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. ಅಲ್ಲದೆ, 24 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಸೋಮವಾರ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗಿದ್ದು 9 ಮಂದಿಗೆ ಸೋಂಕು ದೃಢಪಟ್ಟಿದೆ. ಆದರೆ, ಗುಣಮುಖರಾದವರ ಸಂಖ್ಯೆ ಇದಕ್ಕಿಂತ ತುಸು ಹೆಚ್ಚಿರುವುದು (11) ಸಮಾಧಾನದ ವಿಷಯ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಸೋಮವಾರ ದೃಢಪಟ್ಟಒಂಭತ್ತು ಪ್ರಕರಣಗಳ ಪೈಕಿ ಮಂಡ್ಯ, ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ತಲಾ ಇಬ್ಬರಿಗೆ, ಬೆಂಗಳೂರು ನಗರದಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಈ ಎಲ್ಲಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಸರ್ಕಾರ ಸಾಮೂಹಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಕಡ್ಡಾಯವಾಗಿ ಎಲ್ಲರ ಸೋಂಕು ಪರೀಕ್ಷೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಲಾಕ್‌ಡೌನ್‌ನಲ್ಲಿ ಸ್ಮಶಾನದಲ್ಲಿ ಕಟ್ಟಿಗೆ ಒಡೆಯುತ್ತಿದ್ದಾರೆ ಸೂರಿ ಶೆಟ್ಟಿ

ಸೋಂಕಿತರ ಹಿಸ್ಟರಿ:

ಸೋಂಕಿತರ ಪೈಕಿ ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ಸೋಂಕಿನಿಂದ ಮೃತಪಟ್ಟಿದ್ದ 50 ವರ್ಷದ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 78 ವರ್ಷದ ವೃದ್ಧೆಗೆ ಕಳೆದ ಗುರುವಾರ ಸೋಂಕು ತಗುಲಿತ್ತು. ಭಾನುವಾರ ಆ ವೃದ್ಧೆಯಿಂದ 47 ವರ್ಷದ ಮಹಿಳೆಗೆ ಸೋಂಕುಗೆ ಸೋಂಕು ಹರಡಿದೆ. ಮತ್ತೆ ಅದೇ ವೃದ್ಧೆಯಿಂದ 45 ವರ್ಷದ ವ್ಯಕ್ತಿ ಹಾಗೂ 80 ವರ್ಷದ ಮತ್ತೊಬ್ಬ ವೃದ್ಧೆಗೆ ಸೋಂಕು ತಗುಲಿದೆ.

ಬಾಗಲಕೋಟೆಯಲ್ಲಿ ಇನ್ಫೂ ಎಂಜಾ ಲೈಕ್‌ ಇಲ್‌ನೆಸ್‌ (ಐಎಲ್‌ಐ)ನಿಂದ ಬಳಲುತ್ತಿದ್ದ 46 ವರ್ಷದ ಪುರುಷನಿಂದ 32 ವರ್ಷ ಹಾಗೂ 21 ವರ್ಷದ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿದೆ. ಮಂಡ್ಯದ ನಾಗಮಂಗಲದಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ 50 ವರ್ಷದ ಪುರುಷ, ಅದೇ ಜಿಲ್ಲೆಯ ಮಳವಳ್ಳಿಯಲ್ಲಿ ಸೋಂಕಿತರ ಸಂಪರ್ಕದಿಂದ 22 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಈ ಎಲ್ಲಾ ಸೋಂಕಿತರನ್ನು ಆಯಾ ಜಿಲ್ಲಾ ಕೊರೊನಾ ಸೋಂಕು ಚಿಕಿತ್ಸಾ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಈಗಾಗಲೇ 34 ಮಂದಿಗೆ ಸೋಂಕು ಹರಡಿಸಿದ್ದ ವಿಜಯಪುರದ ಸೋಂಕಿತ 60 ವರ್ಷದ ವೃದ್ಧೆಯಿಂದ ಮತ್ತೊಬ್ಬರಿಗೆ ಸೋಂಕು ಹರಡಿದೆ. ಈ ಮೂಲಕ ಇವರಿಂದ ಪರೋಕ್ಷ ಹಾಗೂ ಪ್ರತ್ಯಕ್ಷ ಸಂಪರ್ಕದಿಂದ ಸೋಂಕು ಹರಡಿದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಕ್ವಾರಂಟೈನ್‌ ಕೇಂದ್ರದಲ್ಲಿ ಬಿಹಾರಿಗಳ ಪುಂಡಾಟ!

11 ಮಂದಿ ಗುಣಮುಖ:

ಉಳಿದಂತೆ ರಾಜ್ಯದ ಸೋಂಕಿತರ ಪೈಕಿ ಸೋಮವಾರ ಮೈಸೂರಿನಲ್ಲಿ ಐದು ಮಂದಿ, ವಿಜಯಪುರದಲ್ಲಿ ಆರು ಮಂದಿ ಸೇರಿ ಒಟ್ಟು 11 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬಿಡುಗಡೆಯಾದವರಿಗೆ ಮುಂದಿನ 14 ದಿನ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರಲು ವೈದ್ಯರು ಸೂಚಿಸಿದ್ದಾರೆ.

ಹಾಲಿಗೆ ಹೋಗಿ ಕೊರೋನಾ ಅಂಟಿಸಿಕೊಂಡ 13ರ ಬಾಲಕ

ಇಲ್ಲಿನ ಪಾದರಾಯಪುರ ವಾರ್ಡ್‌ನಲ್ಲಿ ಮತ್ತೊಂದು ಸೋಂಕು ಪ್ರಕರಣ ದೃಢಪಟ್ಟಿದ್ದು, ಹಾಲು ತರಲು ಮಾತ್ರ ಒಮ್ಮೆ ಮನೆಯಿಂದ ಹೊರ ಹೋಗಿದ್ದ 13 ವರ್ಷದ ಬಾಲಕನಿಗೆ ಕೊರೋನಾ ಸೋಂಕು ಉಂಟಾಗಿದೆ. ಶನಿವಾರ ಮೂಗಿನ ನೋವು ಕಾಣಿಸಿಕೊಂಡು ವಾಸನೆ ಗುರುತಿಸಲು ಆಗದೆ ಜೆಜೆಆರ್‌ ಫೀವರ್‌ ಕ್ಲಿನಿಕ್‌ಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದನು. ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದರು. ಭಾನುವಾರ ತಡರಾತ್ರಿ ವರದಿ ಬಂದಿದ್ದು, ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಇತ್ತೀಚೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಮನೆ ಸಮೀಪವೇ ಈ ಬಾಲಕ ವಾಸವಿದ್ದ. ಒಮ್ಮೆ ಮಾತ್ರ ಹಾಲು ಖರೀದಿಸಲು ಹೊರಗಡೆ ಹೋಗಿದ್ದ. ಇದೀಗ ಬಾಲಕನಿಗೆ ಕೊರೋನಾ ಸೋಂಕು ಖಚಿತಪಟ್ಟಿದ್ದು ಕಟ್ಟಡದಲ್ಲಿ ವಾಸವಿದ್ದ 30 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ.

ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

ಇತರೆ ಅಂಕಿ-ಅಂಶ

- ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಪರ್ಕದಿಂದ ನಿಗಾದಲ್ಲಿರುವವರು: 23,942

- ಈ ಪೈಕಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು: 5,917

- ದ್ವಿತೀಯ ಸಂಪರ್ಕಿತರು: 18,025

- ಹೋಂ ಕ್ವಾರಂಟೈನ್‌ ಕಾನೂನು ಉಲ್ಲಂಘಿಘಿಸಿ ಸಾಮೂಹಿಕ ಕ್ವಾರಂಟೈನ್‌ಗೆ ಸ್ಥಳಾಂತರವಾದವರು: 756