Covid Compensation: ಸತ್ತವರ ಹಣ ನಮಗೆ ಬೇಡ, ಬಡವರಿಗೆ ಕೊಡಿ ಎಂದ ಕುಟುಂಬಗಳು..!

*  ಮೃತರ ಕುಟುಂಬಗಳಿಗೆ ಕೇಂದ್ರದಿಂದ 50 ಸಾವಿರ ರು. ಪರಿಹಾರ
*  893 ಕುಟುಂಬಗಳಿಂದ ಕೋವಿಡ್‌ ಪರಿಹಾರ ತಿರಸ್ಕಾರ
*  ಸ್ವೀಕರಿಸದವರ ಪರಿಹಾರ ಕೇಂದ್ರ ಸರ್ಕಾರಕ್ಕೆ ವಾಪಸ್‌
 

893 Families of Covid Compensation Reject in Karnataka grg

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಮಾ.26): ಸರ್ಕಾರದ ಯೋಜನೆ, ಅನುದಾನ ಸೂಕ್ತ ಸಮಯಕ್ಕೆ ಜನಸಾಮಾನ್ಯರಿಗೆ ಸಿಗುವುದೇ ಕಷ್ಟಕರವಾಗಿರುವ ಸಂದರ್ಭದಲ್ಲಿಯೂ ಮನೆಬಾಗಿಲಿಗೆ ಬಂದಿದ್ದ ಕೊರೋನಾ(Coronavirus) ಪರಿಹಾರ(compensation) ಧನವನ್ನು 893 ಕುಟುಂಬಗಳು ನಿರಾಕರಿಸಿವೆ! ‘ನಾವು ಆರ್ಥಿಕವಾಗಿ ಸಬಲರಾಗಿದ್ದು, ನಮಗೆ ಪರಿಹಾರ ಧನ ಬೇಡ’ ಎಂದು ಹೇಳಿ ಕೇಂದ್ರ ಸರ್ಕಾರ ನೀಡಿದ್ದ 50 ಸಾವಿರ ರು. ನೆರವನ್ನು ನಿರಾಕರಿಸಿವೆ.

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಎಪಿಎಲ್‌(APL) ಮತ್ತು ಬಿಪಿಎಲ್‌(BPL) ಕುಟುಂಬವೊಂದಕ್ಕೆ ಕೇಂದ್ರದಿಂದ 50 ಸಾವಿರ ಪರಿಹಾರ ಧನವನ್ನು ನೀಡಲಾಗುತ್ತಿದೆ. ಜತೆಗೆ ರಾಜ್ಯ ಸರ್ಕಾರದಿಂದ(Government of Karnataka) ಬಿಪಿಎಲ್‌ ಕುಟುಂಬಕ್ಕೆ ಹೆಚ್ಚುವರಿಯಾಗಿ 1 ಲಕ್ಷ ಸೇರಿ 1.5 ಲಕ್ಷ ರು. ಪರಿಹಾರ ಕೊಡಲಾಗುತ್ತಿದೆ. ಈ ಪರಿಹಾರ ಧನ ವಿತರಣೆ ಜವಾಬ್ದಾರಿಯನ್ನು ಕಂದಾಯ ಇಲಾಖೆ ಹೊತ್ತಿದ್ದು, ಆರೋಗ್ಯ ಇಲಾಖೆ ಬಳಿ ಇರುವ ಮೃತರಪಟ್ಟಿಯಂತೆ ಕುಟುಂಬಸ್ಥರನ್ನು ಸಂಪರ್ಕಿಸಿ ಪರಿಹಾರಕ್ಕೆ ಅರ್ಜಿ ಪಡೆಯಲಾಗುತ್ತದೆ. ಬಳಿಕ ದಾಖಲಾತಿಗಳನ್ನು ಪರಿಶೀಲಿಸಿ ಪರಿಹಾರ ಧನವನ್ನು ಮಂಜೂರು ಮಾಡಲಾಗುತ್ತದೆ. ಇದೇ ರೀತಿ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾಗ ರಾಜ್ಯದಲ್ಲಿ 893 ಕುಟುಂಬಗಳು ಪರಿಹಾರ ಬೇಡ ಎಂದು ಬರೆದುಕೊಟ್ಟಿವೆ.

Fake Covid Claims: ಕೋವಿಡ್‌ ಪರಿಹಾರಕ್ಕಾಗಿ ನಕಲಿ ದಾಖಲೆ, ಅಧಿಕಾರಿಗಳೂ ಸಾಥ್‌!

ರಾಜ್ಯದಲ್ಲಿ(Karnataka) ಕೊಡಗು ಹೊರತು ಪಡಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಪರಿಹಾರ ಧನವನ್ನು ಕುಟುಂಬಗಳು ನಿರಾಕರಿಸಿವೆ. ಈ ಪೈಕಿ ಅತಿ ಹೆಚ್ಚು ಬೆಂಗಳೂರಿನಲ್ಲಿ 521 ಕುಟುಂಬಗಳಿವೆ. ಇನ್ನು ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶದ ಕುಟುಂಬಗಳೇ ಹೆಚ್ಚಿವೆ. ಅಲ್ಲದೇ, ನಿರಾಕರಿಸಿದ ಎಲ್ಲರೂ ಎಪಿಎಲ್‌ ವ್ಯಾಪ್ತಿಗೊಳಪಟ್ಟವರು.

ವ್ಯಕ್ತಿಯೇ ಇಲ್ಲ, ಪರಿಹಾರ ಪಡೆದು ಏನು ಮಾಡೋಣ?

ಕಂದಾಯ ಅಧಿಕಾರಿಗಳು ಮೃತರ ಮನೆ ಬಾಗಿಲಿಗೆ ಹೋದಾಗ ‘ವ್ಯಕ್ತಿಯೇ ಇಲ್ಲ ಪರಿಹಾರ ಹಣ ತೆಗೆದುಕೊಂಡು ಏನು ಮಾಡೋಣ’, ‘ಸತ್ತವರ ಹೆಸರಿನ ಹಣ ನಮಗೆ ಬೇಡ’, ‘ದೇವರು ನಮಗೆ ಅಂತಹ ಕಷ್ಟಕೊಟ್ಟಿಲ್ಲ, ಬಡವರಿಗೆ ತಲುಪಿಸಿ’ ಎಂಬ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

1931 ಮೃತರ ಕುಟುಂಬ ಈವರೆಗೂ ಪತ್ತೆ ಇಲ್ಲ

ಸಾವಿನ ಪಟ್ಟಿಯಲ್ಲಿ ಹೆಸರಿದ್ದ 1,931 ಮಂದಿಯ ಕುಟುಂಬಗಳ ಮಾಹಿತಿ ಪತ್ತೆಯಾಗಿಲ್ಲ. ಈ ಪೈಕಿ 1000ಕ್ಕೂ ಹೆಚ್ಚು ಮಂದಿ ಬೆಂಗಳೂರಿನಲ್ಲಿ ಮೃತಪಟ್ಟವರಾಗಿದ್ದಾರೆ(Death). ಮರಣಾನಂತರ ಊರು ಬಿಟ್ಟಿರುವ ಅಥವಾ ವಿಳಾಸ ಬದಲಿಸಿರುವ ಸಾಧ್ಯತೆಗಳಿವೆ. ಇಂದಿಗೂ ಅವಕಾಶವಿದ್ದು, ವ್ಯಕ್ತಿ ಮೃತಪಟ್ಟಸಂದರ್ಭದಲ್ಲಿ ವಾಸವಿದ್ದ ವಿಳಾಸದ ಸ್ಥಳೀಯ ಕಂದಾಯ ಕಚೇರಿಯನ್ನು ಸಂಪರ್ಕಿಸಿ ಪರಿಹಾರ ಧನ ಪಡೆಯಬಹುದು ಎಂದು ಕಂದಾಯ ಇಲಾಖೆ ನಿರ್ದೇಶಕ ಸತೀಶ್‌ ತಿಳಿಸಿದ್ದಾರೆ.

Yadgir: ಕೋವಿಡ್ ಪರಿಹಾರ ಚೆಕ್ ಬೌನ್ಸ್: ಗುರುಮಠಕಲ್‌, ಶಹಾಪುರದಲ್ಲೂ ಪತ್ತೆ..!

ಯಾವ ಜಿಲ್ಲೆಯಲ್ಲಿ ಎಷ್ಟು ಕುಟುಂಬ ನಿರಾಕರಣೆ?

ಬಿಬಿಎಂಪಿ(BBMP) ವ್ಯಾಪ್ತಿ 481, ಬೆಂಗಳೂರು ನಗರ 40, ಕೋಲಾರ 55, ಮೈಸೂರು 29, ಹಾಸನ 26, ದಕ್ಷಿಣ ಕನ್ನಡ 24, ಕಲಬುರಗಿ 23, ಕೊಪ್ಪಳ ಮತ್ತು ಮಂಡ್ಯ ತಲಾ 17, ಶಿವಮೊಗ್ಗ 16, ಉತ್ತರಕನ್ನಡ 14, ಬಳ್ಳಾರಿ 13, ಚಿಕ್ಕಮಗಳೂರು 12, ಚಾಮರಾಜನಗರ 11, ಬಾಗಲಕೋಟೆ ಉಡುಪಿ ಹಾಗೂ ಬೆಳಗಾವಿ ತಲಾ 9, ಚಿಕ್ಕಬಳ್ಳಾಪುರ ಮತ್ತು ವಿಜಯಪುರ ತಲಾ 8, ಬೀದರ್‌ ಮತ್ತು ತುಮಕೂರು ತಲಾ 7, ಹಾವೇರಿ 6, ಬೆಂಗಳೂರು ಗ್ರಾಮಾಂತರ, ಗದಗ ಹಾಗೂ ರಾಯಚೂರು ತಲಾ 5, ಚಿತ್ರದುರ್ಗ 3, ದಾವಣಗೆರೆ 2, ಯಾದಗಿರಿ 1.

ಸ್ವೀಕರಿಸದವರ ಪರಿಹಾರ ಕೇಂದ್ರ ಸರ್ಕಾರಕ್ಕೆ ವಾಪಸ್‌

41,500 ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರದ(Central Government) ಕೊರೋನಾ ಪರಿಹಾರ ಧನವನ್ನು ಪರಿಹಾರ ನೀಡಲಾಗಿದೆ. 893 ಕುಟುಂಬಗಳು ನಿರಾಕರಿಸಿದ್ದು, ಬೆಂಗಳೂರಿನಲ್ಲಿಯೇ ಹೆಚ್ಚು ಮಂದಿ ಪರಿಹಾರ ಬೇಡ ಎಂದಿದ್ದಾರೆ. ಅವರ ಪಾಲಿನ 4.46 ಕೋಟಿ ರು. ಪರಿಹಾರ ಮೊತ್ತ ಕೇಂದ್ರಕ್ಕೆ ಮರಳಲಿದೆ ಅಂತ ಕಂದಾಯ ಇಲಾಖೆಯ ನಿರ್ದೇಶಕ ಸತೀಶ್‌ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios