Asianet Suvarna News Asianet Suvarna News

Yadgir: ಕೋವಿಡ್ ಪರಿಹಾರ ಚೆಕ್ ಬೌನ್ಸ್: ಗುರುಮಠಕಲ್‌, ಶಹಾಪುರದಲ್ಲೂ ಪತ್ತೆ..!

*  ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ವಿರುದ್ಧ ಠಾಣೆಯಲ್ಲಿ ದೂರು
*  ಗುರುಮಠಕಲ್, ಶಹಾಪುರ ತಾಲೂಕಿನಲ್ಲಿಯೂ ಇಂತಹ ಪ್ರಕರಣಗಳ ಪತ್ತೆ
*  ಮತ್ತಷ್ಟೂ ಹೂರಣ ಹೊರಕ್ಕೆ 
 

Covid Compensation Check Bounce Cases also Found in Gurumitkal and Shahapur grg
Author
Bengaluru, First Published Jan 23, 2022, 12:42 PM IST

ಯಾದಗಿರಿ(ಜ.23): ಕೋವಿಡ್ ಪರಿಹಾರ ಚೆಕ್ ಬೌನ್ಸ್(Check Bounce of Covid Compensation) ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ (KGB) ಮ್ಯಾನೇಜರ್ ಪಿ. ಸಿ. ಚವ್ಹಾಣ್ ವಿರುದ್ಧ ಸುರಪುರ ಠಾಣೆಯಲ್ಲಿ ದೂರು ನೀಡಲಾಗಿದ್ದು, ಶಿಸ್ತುಕ್ರಮ ಜರುಗಿಸಲು ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪರಿಗೆ ಸುರಪುರ ತಹಸೀಲ್ದಾರರು ಪತ್ರ ಬರೆದಿದ್ದಾರೆನ್ನಲಾಗಿದೆ. ಜ.21 ರಂದು ‘ಕನ್ನಡಪ್ರಭ’ದಲ್ಲಿ(Kannada Prabha) ಪ್ರಕಟಗೊಂಡಿದ್ದ ಈ ಕುರಿತ ವಿಶೇಷ ರಾಜ್ಯಾದ್ಯಂತ(Karnataka) ಸಂಚಲನ ಮೂಡಿಸಿದ ನಂತರ ವರದಿ ಎಚ್ಚೆತ್ತ ಅಧಿಕಾರಿಗಳು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ.

* ದೂರು ದಾಖಲು :

ಮಹಾಮಾರಿ ಕೋವಿಡ್-19(Covid-19) ರೋಗದಿಂದ ಮೃತಪಟ್ಟ ಬಿಪಿಎಲ್(BPL) ಕುಟುಂಬದ ಸದಸ್ಯರಿಗೆ ಸರ್ಕಾರವು 1 ಲಕ್ಷ ರು.ಗಳ ಮೊತ್ತದ ಪರಿಹಾರವನ್ನು ಖಜಾನೆ-2 ತಂತ್ರಾಂಶದ ಮೂಲಕ ಚೆಕ್ ರೂಪದಲ್ಲಿ ಫಲಾನುಭವಿಗಳಿಗೆ(beneficiaries) ವಿತರಿಸಲಾಗಿತ್ತು. ಫಲಾನುಭವಿಗಳು ಖಾತೆ ಹೊಂದಿರುವ ಬ್ಯಾಂಕ್‌ನಿಂದ ಕ್ಲೀಯರೆನ್ಸ್ ಸಲುವಾಗಿ ಸುರಪುರದಲ್ಲಿನ ನಿಷ್ಠಿ ಮೊಹದಲ್ಲಾದ ಎಸ್‌ಬಿಐ (ಭಾರತೀಯ ಸ್ಟೇಟ್ ಬ್ಯಾಂಕ್) ಸಂಪರ್ಕಿಸಿದ್ದಾಗ ಆ ಚೆಕ್‌ಗಳನ್ನು ‘ರಿಟನ್ಸ್ ಮೆಮೋ- ಅದರ್ ರೀಜನ್ಸ್’ ಎಂದು ಪುನ: ಬ್ಯಾಂಕಿಗೆ(Bank) ಮರಳಿಸಿದ್ದರು.

Yadgir: ಸತ್ತವರಿಗೂ ಲಸಿಕೆ: ವ್ಯಾಕ್ಸಿನೇಶನ್ ಆಟೋ ಅಪ್ಡೇಟ್: ಏನಿದು..?

ಇನ್ನೂ ಕೆಲವು ಫಲಾನುಭವಿಗಳು ಸುರಪುರದ (ಪಿ.ಕೆ.ಜಿ.ಬಿ.) ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ, ಸರ್ಕಾರವು ಯಾವುದೇ ಅನುದಾನ ಇಲ್ಲದೆ ಚೆಕ್‌ಗಳು ವಿತರಿಸಿದ್ದರಿಂದ ಈ ಚೆಕ್‌ಗಳನ್ನು ಮರಳಿಸುತ್ತಿರುವುದಾಗಿ ಮ್ಯಾನೇಜರ್ ಹೇಳಿದ್ದಾರೆ ಎಂದು ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಸರ್ಕಾರದ(Government of Karnataka) ವಿರುದ್ಧ ಫಲಾನುಭವಿಗಳಲ್ಲಿ ಕೆಟ್ಟ ಭಾವನೆ ಮೂಡಿಸಿರುವುದರಿಂದ ಹಾಗೂ ಬ್ಯಾಂಕ್ ಖಾತೆಯಲ್ಲಿ ಸರ್ಕಾರದ ಹಣ ಇದ್ದಾಗಲೂ ಕೂಡ ಫಲಾನುಭವಿಗಳಿಗೆ ಹಣದ ಸಹಾಯ ಸಿಗದಂತೆ ಮೋಸ ಮಾಡುವ, ಸರ್ಕಾರದ ಗೌರವಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹಾಗೂ ಫಲಾನುಭವಿಗಳಿಗೆ ಹಣ ನೀಡದೆ ವಂಚನೆ ಎಸಗಿದ ಆರೋಪದಡಿ ಸುರಪುರದ ಈ ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ, ಸುರಪುರ ಶಿರಸ್ತೇದಾ ಸುನಿಲ್ ಪುಲ್ಸೆ ಸುರಪುರದ ವೃತ್ತ ಆರಕ್ಷಕ ನಿರೀಕ್ಷಕರಿಗೆ (CPI) ದೂರು ನೀಡಿದ್ದಾರೆ.

ಚೆಕ್ ಬೌನ್ಸ್ : ಮತ್ತಷ್ಟೂ ಹೂರಣ ಹೊರಕ್ಕೆ !

ಯಾದಗಿರಿ(Yadgir):  ಈ ಮಧ್ಯೆ, ಇಂತಹ ಪ್ರಕರಣಗಳು ಕೇವಲ ಸುರಪುರದಲ್ಲಷ್ಟೇ ಅಲ್ಲ ಜಿಲ್ಲೆಯ ಶಹಾಪುರ, ಗುರುಮಠಕಲ್ ಸೇರಿದಂತೆ ವಿವಿಧ ಭಾಗಗಳಲ್ಲಿಯೂ ಆಗಿದೆ ಎಂಬ ಮಾಹಿತಿ ‘ಕನ್ನಡಪ್ರಭ‘ಕ್ಕೆ ದಾಖಲೆಗಳ ಸಮೇತ ಲಭ್ಯವಾಗಿದೆ.

Vaccine Golmal: ಸತ್ತವರಿಗೂ ಲಸಿಕೆ, ಕೊರೋನಾ ಟೆಸ್ಟ್‌ ಮೆಸೇಜ್‌..!

ವನದುರ್ಗ, ಮಂಡಗಳ್ಳಿ, ಇಟಗಾ, ಚಿಂತನಪಲ್ಲಿ, ಗೋಪಾಲಪುರ, ಗುರುಮಠಕಲ್, ದಂತಾಪುರ, ಯಲ್ಹೇರಿ, ಗುಂಜನೂರು, ಈಡ್ಲೂರು ಮುಂತಾದೆಡೆ ಫಲಾನುಭವಿಗಳ ಪರದಾಟ ತಪ್ಪಿಲ್ಲ. ಡಿ. 18-20 ರಂದು ನೀಡಿದ ಪರಿಹಾರದ ಚೆಕ್‌ಗಳು ನೀಡಿ ತಿಂಗಳಾದರೂ ಹಣ ಜಮೆಯಾಗಿಲ್ಲ. ಕೇಳಿದರೆ ಕಾರಣವನ್ನೂ ಹೇಳದಿದ್ದ ಬ್ಯಾಂಕುಗಳ ಅಸಡ್ಡೆತನಕ್ಕೆ ಫಲಾನುಭವಿಗಳು ಅಲೆದಾಡಿ ಸುಸ್ತಾಗಿದ್ದಾರೆ. ಬಜೆಟ್ ಇನ್ನೂ ಬಂದಿಲ್ಲ, ಬಂದ್ಮೇಲೆ ಚೆಕ್ ಹಾಕಿ ಎಂದು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಜ.21 ರಂದು ‘ಕನ್ನಡಪ್ರಭ’ ವರದಿ ಎಲ್ಲೆಡೆ ಸದ್ದು ಮಾಡಿದ ನಂತರ, ಕೆಲವರಿಗೆ ಚೆಕ್‌ಗಳ ವಾಪಸ್ ನೀಡಿದ್ದ ಬ್ಯಾಂಕುಗಳು ಫಲಾನುಭವಿಗಳನ್ನು ತುರ್ತಾಗಿ ಸಂಪರ್ಕಿಸುತ್ತಿದ್ದಾರಂತೆ.

ಈ ಮೊದಲು ಹಣ ಕೇಳಲು ಹೋದಾಗ ಕ್ಯಾರೇ ಅನ್ನದೆ ಚೆಕ್ ವಾಪಸ್ ನೀಡಿದ್ದ ಅಽಕಾರಿಗಳು, ಸುದ್ದಿಯ ನಂತರ ಈಗ ಮತ್ತೇ ತಮ್ಮನ್ನು ಸಂಪರ್ಕಿಸಿ, ಚೆಕ್ ಮತ್ತೇ ಖಾತೆಗೆ ಹಾಕಿ ಹಣ ಬರ್‍ತದೆ ಎಂತಿದ್ದಾರೆ ಅಂತ ಗ್ರಾಮಸ್ಥ ಹನುಮಂತ, ದೇವಿಕೇರಾ ಹೇಳಿದ್ದಾರೆ. 

ಫಲಾನುಭವಿಗಳಿಗೆ ವಂಚನೆ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಅಗೌರವ ತೋರಿದ ಆರೋಪದಡಿ, ಸುರಪುರದ ಪೊಲೀಸ್ ಠಾಣೆಯಲ್ಲಿ ಸುರಪುರದ ಕೆಜಿಬಿ ಮ್ಯಾನೇಜರ್ ವಿರುದ್ಧ ಐಪಿಸಿ ಸೆಕ್ಷನ್‌ದಡಿ ದೂರು ದಾಖಲಾಗಿದೆ ಅಂತ ಯಾದಗಿರಿ ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ತಿಳಿಸಿದ್ದಾರೆ. 
 

Follow Us:
Download App:
  • android
  • ios